ಎದೆಹಾಲಿಗಿಂತ ಅಮೃತ ಬೇರೆ ಇಲ್ಲ: ರಾಜ್ಯದ ನಾಲ್ಕು ನಗರಗಳಲ್ಲಿ ಮಿಲ್ಕ್ ಬ್ಯಾಂಕ್ ಆರಂಭ
ನವಜಾತ ಶಿಶುಗಳ ಅಗತ್ಯತೆಗಳನ್ನು ಪೂರೈಸಲು ಕರ್ನಾಟಕ ಸರ್ಕಾರವು ಮಂಗಳವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಬೆಳಗಾವಿಯ ನಾಲ್ಕು ಜಿಲ್ಲಾ ಕೇಂದ್ರಗಳಲ್ಲಿ ‘ಎದೆ ಹಾಲು ಬ್ಯಾಂಕ್’ಗಳನ್ನು ಸ್ಥಾಪಿಸಿದೆ.
Published: 09th March 2022 01:22 PM | Last Updated: 09th March 2022 02:19 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನವಜಾತ ಶಿಶುಗಳ ಅಗತ್ಯತೆಗಳನ್ನು ಪೂರೈಸಲು ಕರ್ನಾಟಕ ಸರ್ಕಾರವು ಮಂಗಳವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಬೆಳಗಾವಿಯ ನಾಲ್ಕು ಜಿಲ್ಲಾ ಕೇಂದ್ರಗಳಲ್ಲಿ ‘ಎದೆ ಹಾಲು ಬ್ಯಾಂಕ್’ಗಳನ್ನು ಸ್ಥಾಪಿಸಿದೆ.
ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ಮತ್ತು ಹೈ ರಿಸ್ಕ್ ಪ್ರೆಗ್ನೆನ್ಸಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಮಹಿಳಾ ದಿನಾಚಣೆ ದಿನವೇ ಮಿಲ್ಕ್ ಬ್ಯಾಂಕ್ ಅಮೃತಧಾರೆಗೆ ಚಾಲನೆ ಸಿಕ್ಕಿರುವುದು ಅರ್ಥಪೂರ್ಣ. ತಾಯಿಯ ಎದೆಹಾಲಿಗಿಂತ ಅಮೃತ ಬೇರೆ ಇಲ್ಲ ಎಂದು ತಿಳಿಸಿದರು. ಸ್ವಸ್ಥ, ಸಮೃದ್ಧ ಕರ್ನಾಟಕದ ಮೂಲಕ ನವ ಭಾರತದ ನಿರ್ಮಾಣವಾಗಬೇಕು. ಮಹಿಳೆಯರಿಗೆ ಆಡಳಿತ ಸೇರಿ ಎಲ್ಲಾ ವಿಭಾಗಗಳಲ್ಲೂ ಹೆಚ್ಚಿನ ಸ್ಥಾನಮಾನ ಸಿಕ್ಕಿದಾಗ ಮಾತ್ರ ಮಹಿಳಾ ಸಬಲೀಕರಣವಾಗಿ, ಭಾರತ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದ ಒಟ್ಟು 4 ಕಡೆ ಎದೆ ಹಾಲು ಸಂಗ್ರಹಿಸುವ ಕೇಂದ್ರವಿದೆ. ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ವ್ಯವಸ್ಥೆ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಾಗುತ್ತಿದೆ. ಈ ಮೂಲಕ ಅನೇಕ ಮಕ್ಕಳಿಗೆ ಸಹಾಯವಾಗಲಿದೆ ಎಂದು ತಿಳಿಸಿದರು.
ಮಹಿಳೆಯರಿಗೆ ವಿಶೇಷ ಸ್ಥಾನ ನೀಡಿದ ನಮ್ಮ ದೇಶ ಜಗತ್ತಿಗೆ ಮಾದರಿ. ಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳು ಕೂಡ ಸಿಗುತ್ತಿವೆ. ಮಾತೃ ವಂದನಾ, ನಗು-ಮಗು, ಜನನಿ ಸುರಕ್ಷಾ ಹೀಗೆ ಹಲವು ಯೋಜನೆಗಳ ಮೂಲಕ ಮಹಿಳೆಯರಿಗೆ ನೆರವು ನೀಡಲಾಗುತ್ತಿದೆ. ಮಕ್ಕಳಿಗೆ ಎದೆ ಹಾಲು ಉಣಿಸುವುದು ಮುಖ್ಯ. ವಿಶೇಷ ಪ್ರಕರಣಗಳಲ್ಲಿ ಹಾಲು ಉಣಿಸುವ ಶಕ್ತಿ ಕೆಲವರಿಗೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಮಿಲ್ಕ್ ಬ್ಯಾಂಕ್ ಮೂಲಕ ಸಂಗ್ರಹಣೆಯಾಗುವ ಹಾಲು ಮಕ್ಕಳಿಗೆ ನೆರವಾಗಲಿದೆ ಎಂದರು.
ಮಿಲ್ಕ್ ಬ್ಯಾಂಕ್‌ನಲ್ಲಿ ಇಲ್ಲಿ ತನಕ 27 ಲೀಟರ್ ಎದೆಹಾಲು ಸಂಗ್ರಹವಾಗಿದೆ. ಈ ಪೈಕಿ 21 ಲೀಟರ್ ಹಾಲನ್ನು 89 ರಿಂದ 90 ಮಕ್ಕಳಿಗೆ ನೀಡಲಾಗಿದೆ. ರಾಜ್ಯದಲ್ಲಿ ಐಎಂಆರ್ 1000ಕ್ಕೆ 21 ಇದೆ. ದೇಶದ ಸರಾಸರಿಗಿಂತ ಇದು ಕಡಿಮೆ ಇದೆ. ಎಂಎಂಆರ್ 1 ಲಕ್ಷಕ್ಕೆ 92 ಪ್ರಕರಣ ಇದೆ. ಈ ಸಮಸ್ಯೆಯನ್ನು ಬಗೆಹರಿಸಿ 2030 ರ ವೇಳೆಗೆ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಗುರಿಯನ್ನು ತಲುಪಬೇಕಿದೆ ಎಂದು ಹೇಳಿದರು.
ಬೇರೆ ಇಲಾಖೆಗಳಲ್ಲಿ ಐಎಎಸ್, ಕೆಎಎಸ್ ಅಧಿಕಾರಿಗಳು ಆಡಳಿತದ ಅನುಭವ ಪಡೆದಿರುತ್ತಾರೆ. ಆದರೆ, ಆರೋಗ್ಯ ಇಲಾಖೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ವೈದ್ಯರೇ ಇರುತ್ತಾರೆ. ಇವರಿಗೆ ಆಡಳಿತದ ತರಬೇತಿ ನೀಡುವ ಕೆಲಸವಾಗುತ್ತಿದೆ. ರಾಜ್ಯದಲ್ಲಿ ಕೋವಿಡ್ ಲಸಿಕೆಯನ್ನು ವೇಗವಾಗಿ ನೀಡಲಾಗಿದೆ. ವೈದ್ಯರು ಮನೆಮನೆಗೂ ಹೋಗಿ ಲಸಿಕೆ ನೀಡಿದ್ದಾರೆ. ಕೋವಿಡ್ ನಂತರದಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ ಬದಲಾವಣೆ ಆಗಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಒತ್ತು ಕೊಟ್ಟಿದೆ ಎಂದು ತಿಳಿಸಿದರು.
ವಾಣಿ ವಿಲಾಸದಲ್ಲಿ ಈ ರೀತಿಯ ಮಾನವ ಹಾಲಿನ ಬ್ಯಾಂಕ್ ಬಹಳ ಮಹತ್ವದ್ದಾಗಿದೆ. “ತಾಯಿಯ ಹಾಲಿನಲ್ಲಿ ಪ್ರೋಟೀನ್, ಲವಣಯುಕ್ತ, ಸ್ಯಾಚುರೇಟೆಡ್ ಕೊಬ್ಬು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸರಿಯಾದ ಸಲಕರಣೆಗಳನ್ನು ಬಳಸಿಕೊಂಡು ದಾನಿ ತಾಯಂದಿರಿಂದ ಎದೆ ಹಾಲನ್ನು ಸಂಗ್ರಹಿಸಲಾಗುತ್ತದೆ, ಅದನ್ನು ಪಾಶ್ಚರೀಕರಿಸಲಾಗುತ್ತದೆ ಮತ್ತು ಫ್ರೀಜ್ ಮಾಡಲಾಗುತ್ತದೆ. ಆರು ತಿಂಗಳವರೆಗೆ ಸಂಗ್ರಹಿಸಬಹುದು,'' ಎಂದು ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮಕ್ಕಳ ವಿಭಾಗದ ಪ್ರಾಧ್ಯಾಪಕ ಡಾ.ಸಿ.ಎನ್.ರೆಡ್ಡಿವಿವರಿಸಿದ್ದಾರೆ.