ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಶಿಕ್ಷಣದಲ್ಲಿ ಮೀಸಲಾತಿ ನೀಡಿ: ಸರ್ಕಾರಕ್ಕೆ ಬ್ರಾಹ್ಮಣ ಮಹಾಸಭಾ ಒತ್ತಾಯ
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Published: 14th March 2022 01:49 AM | Last Updated: 14th March 2022 02:08 PM | A+A A-

ಬ್ರಾಹ್ಮಣ ಮಹಾಸಭಾದ ಮಹಿಳಾ ಘಟಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಗಾಯನ ಸಮಾಜದಲ್ಲಿ ಭಾನುವಾರ ನಡೆದ ಕಾರ್ಯಕ್ರಮ
ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬ್ರಾಹ್ಮಣ ಮಹಾಸಭಾದ ಮಹಿಳಾ ಘಟಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಗಾಯನ ಸಮಾಜದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಮುದಾಯದ ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ವಿಪ್ರ ಸ್ತ್ರೀರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬ್ರಾಹ್ಮಣರಲ್ಲೂ ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವ ಅಸಂಖ್ಯ ಜನರಿದ್ದು ಎಷ್ಟೋ ಕುಟುಂಬದ ಮಕ್ಕಳು ಉನ್ನತ ಶಿಕ್ಷಣಕ್ಕೆ ಹೋಗಲಾಗದೇ ಸಂಕಷ್ಟಕ್ಕೆ ಸಿಲುಕಿರುವ ಉದಾಹರಣೆಗಳೂ ಇವೆ. ಮೀಸಲಾತಿ ನೀಡಿದರೆ ಉನ್ನತ ಶಿಕ್ಷಣದ ಕನಸು ಈಡೇರಲು ಸಾಧ್ಯವಾಗಲಿದೆ.ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಒತ್ತಾಯಿಸಲಾಗಿದೆ ಎಂದರು.
ಮಹಾ ಸಭಾ ನಿರ್ಮಿಸಲು ಉದ್ದೇಶಿರುವ ಸಮುದಾಯ ಭವನಕ್ಕೆ ಸರ್ಕಾರದಿಂದ ಐದು ಕೋಟಿ ನೆರವು ನೀಡಬೇಕೆಂದೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದೂ ತಿಳಿಸಿದರು.
ಸಮಾರಂಭದಲ್ಲಿ ಹಾಜರಿದ್ದು ಮಾತನಾಡಿದ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅಶೋಕ್ ಹಾರನಹಳ್ಳಿಯವರು ಮಹಾ ಸಭಾಧ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಬ್ರಾಹ್ಮಣ ಮಹಾ ಸಭಾಕ್ಕೆ ಹೊಸ ಹುರುಪು ಬಂದಿದ್ದು ಸಮುದಾಯದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಟೀಕಾಕಾರರಿಗೆ ಉತ್ತರಿಸಿದ್ದಾರೆ. ಅವರನ್ನು ಬೆಂಬಲಿಸುವ ಮೂಲಕ ಎಲ್ಲರೂ ಸಮುದಾಯದ ಪ್ರಗತಿಗೆ ಕೈಜೋಡಿಸಬೇಕು ಎಂದೂ ಕರೆ ನೀಡಿದರು.
ಮಾಜಿ ಉಪಮೇಯರ್ ಶ್ರೀಮತಿ ಹೇಮಲತಾ ಗೋಪಾಲಯ್ಯ, ಶ್ರೀಮತಿ ಮೇದಿನಿ ಗರುಡಾಚಾರ್ ಮತ್ತಿರರು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಪ್ರಶಸ್ತಿ ಪುರಸ್ಕೃತರು: ವಿಪ್ರ ಸಾಧಕಿಯರಾದ ಕವಿತಾಳ ಮಿಶ್ರ, ಅರ್ಚನಾ ಉಡುಪ, ಮಾಲತಿ ಹೊಳ್ಳ, ಗಂಗಮ್ಮ ಕೇಶವಮೂರ್ತಿ, ಕೆ.ಆರ್. ಜಯಶ್ರೀ,ಕೆ.ಎಸ್. ಶಾರದಾಮಣಿ, ವಿ. ಶುಭ, ಶೈಲಾ ವಿಠಲ್, ಪ್ರಿಯ ಪುರಾಣಿಕ್, ಅರ್ಚನಾ ಜೋಶಿ, ವಿದ್ಯಾರವಿಶಂಕರ್,ವೀಣಾ ಆಠಾವಳೆ,ಯವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.