ಆತ್ಮಹತ್ಯೆಗೆ ಶರಣಾದ ಬೀದರ್ ಕೆಕೆಆರ್ ಟಿಸಿ ಚಾಲಕನ ಕುಟುಂಬಕ್ಕೆ ಪರಿಹಾರ, ಸಿಂಧುತ್ವ ಗೊಂದಲ ನಿವಾರಣೆ
ಆತ್ಮಹತ್ಯೆ ಮಾಡಿಕೊಂಡಿರುವ ಚಾಲಕ/ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಓಂಕಾರ್ ರೇವಣ್ಣಪ್ಪ ಶೇರಿಕಾರ್ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು.
Published: 15th March 2022 10:13 AM | Last Updated: 15th March 2022 02:35 PM | A+A A-

ಸಿದ್ದರಾಮಯ್ಯ
ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡಿರುವ ಚಾಲಕ/ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಓಂಕಾರ್ ರೇವಣ್ಣಪ್ಪ ಶೇರಿಕಾರ್ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು. ಜೊತೆಗೆ ಸಿಂಧುತ್ವ ಪ್ರಮಾಣಪತ್ರ ನೀಡುವುದರಲ್ಲಿ ಆಗುತ್ತಿರುವ ತೊಂದರೆಯನ್ನು ಸರಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ
ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿ ಗೊಂಡ ಸಮಾಜಕ್ಕೆ ಸೇರಿದ ಓಂಕಾರ್ ರೇವಣಪ್ಪ ಆತ್ಮಹತ್ಯೆ ಪ್ರಕರಣದ ವಿಚಾರವನ್ನು ಶೂನ್ಯವೇಳೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದರು.
ಓಂಕಾರ್ ರೇವಣಪ್ಪ ಕೆಎಸ್ ಆರ್ ಟಿ ಸಿಯಲ್ಲಿ ಚಾಲಕ ಮತ್ತು ನಿರ್ವಾಹಕರಾಗಿದ್ದರು. ಸರ್ಕಾರ ಜಾತಿ ಸಿಂದುತ್ವ ಪ್ರಮಾಣ ಪತ್ರ ಪಡೆಯವ ವಿಚಾರವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾತಿ ಸಿಂದುತ್ವ ಪ್ರಮಾಣ ಪತ್ರಕ್ಕೆ ಪಡೆಯಬೇಕಾದರೆ ಡಿಸಿ ಅಧ್ಯಕ್ಷತೆಯ ಸಮಿತಿ ಇತ್ತು. ಅವರಿಂದ ವರದಿ ಪಡೆದು ಜಾತಿ ಪ್ರಮಾಣ ಪತ್ರ ಕೊಡುತ್ತಿದ್ದರು.
16-1-2021 ರಿಂದ ಇದೀಗ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ವರದಿ ಪಡೆದುಕೊಳ್ಳಬೇಕು ಎಂದು ಮಾಡಿದ್ದಾರೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಸೆಲ್ ಕಿರುಕುಳ ಬಗ್ಗೆ ಆರೋಪ ಇದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂಟು ವರ್ಷದಿಂದ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದರು. ಆದರೆ ಜಾತಿ ಪ್ರಮಾಣ ಪತ್ರದ ಸಿಂದುತ್ವ ಪತ್ರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಕೆಎಸ್ ಆರ್ ಟಿ ಸಿ ಇಲಾಖೆ ಸಿಂದುತ್ವ ಪ್ರಮಾಣ ಪತ್ರ ಕೊಡಿ ಎಂದು ಒತ್ತಡ ಹಾಕುತ್ತಿದ್ದರು. ಮತ್ತೊಂದು ಕಡೆ ಪ್ರಮಾಣ ಪತ್ರ ಡಿಸಿ ಕೊಡುತ್ತಿಲ್ಲ. ಎಂಟು ವರ್ಷಗಳಿಂದ ಜಾತಿ ಸಿಂದುತ್ವ ಪ್ರಮಾಣ ಪತ್ರ ಕೊಡದೆ ಸರ್ಕಾರ ಏನು ಮಾಡುತ್ತಿದೆ? ಹೊಸತಾದ ಆದೇಶವನ್ನು ವಾಪಸ್ ಪಡೆದುಕೊಳ್ಳಿ ಎಂದು ಸಿದ್ದರಾಮಯ್ಯ ಆಗ್ರಹ ಮಾಡಿದರು.
ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡರೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ ಅವರು, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬದವರಿಗೆ ಪರಿಹಾರ ಕೊಡಬೇಕು. ಕುಟುಂಬದ ಸದಸ್ಯನಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದರು