
ಬೆಂಗಳೂರು ಜಲಮಂಡಳಿ
ಬೆಂಗಳೂರು: ಬೆಂಗಳೂರು ಜಲಮಂಡಳಿ (ಬಿಡಬ್ಲ್ಯುಎಸ್ಎಸ್ ಬಿ) ಗೆ ಬರೊಬ್ಬರಿ 355 ಕೋಟಿ ರೂಪಾಯಿ ಬಿಲ್ ಹಣ ಬಾಕಿ ಬರುವುದು ಇದೆ.
ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ, ಕೇಂದ್ರ ಸರ್ಕಾರದ ಇಲಾಖೆಗಳೇ ಮುಂಚೂಣಿಯಲ್ಲಿರುವ ಸುಸ್ತಿದಾರ ಸಂಸ್ಥೆಗಳಾಗಿವೆ ಎಂದು ಬಿಡಬ್ಲ್ಯುಎಸ್ಎಸ್ ಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2021-22 ರಲ್ಲಿ ಒತ್ತಡ ಹಾಗೂ ನಿರಂತರ ಸಂಪರ್ಕಗಳಿಂದ ಬಿಡಬ್ಲ್ಯುಎಸ್ಎಸ್ ಬಿ 336.8 ಕೋಟಿ ರೂಪಾಯಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. 2021-22 ನೇ ಆರ್ಥಿಕ ವರ್ಷ ಇನ್ನು 15 ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ದಶಗಳಿಂದ ಬಿಡಬ್ಲ್ಯುಎಸ್ಎಸ್ ಬಿ ಗೆ ಬಾಕಿ ಬರಬೇಕಿರುವ ಹಣ ಇದ್ದು, ಪಾವತಿ ಮಾಡದೇ ಇರುವ ಬಿಲ್ ಮೊತ್ತಕ್ಕೆ ವಾರ್ಷಿಕ ಶೇ.18 ರಷ್ಟು ಬಡ್ಡಿಯೂ ಬರಬೇಕಿದೆ.
ಮಾರ್ಚ್ ತಿಂಗಳ ಬಿಲ್ ಮೊತ್ತವನ್ನು ಏಪ್ರಿಲ್ ನಲ್ಲಿ ಸಂಗ್ರಹಿಸಲಾಗುತ್ತದೆ. ಬಹಳಷ್ಟು ಶ್ರಮದ ನಂತರ 2.18 ಕೋಟಿ ರೂಪಾಯಿಗಳನ್ನು ಅತಿ ಗರಿಷ್ಠ ಮೊತ್ತದ ಹಣ ಬಾಕಿ ಹೊಂದಿದ್ದ ಸುಸ್ತಿದಾರರಾಗಿದ್ದ ಪೊಲೀಸ್ ಇಲಾಖೆಯಿಂದ ವಸೂಲಿ ಮಾಡಲಾಯಿತು. 1.91 ಕೋಟಿ ರೂಪಾಯಿಗಳನ್ನು ರಕ್ಷಣಾ ಇಲಾಖೆ ಹಾಗೂ 30 ಲಕ್ಷ ರೂಪಾಯಿಗಳನ್ನು ರೈಲ್ವೆ ಇಲಾಖೆಯಿಂದ ಸಂಗ್ರಹಿಸಲಾಯಿತು ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಷ್ಟು ಹಣ ವಸೂಲಿ ಮಾಡಿದ ಬಳಿಕವೂ ಇನ್ನೂ ಬೃಹತ್ ಮೊತ್ತದ ಹಣ ಬಾಕಿ ಇದೆ. ಪೊಲೀಸ್ ಇಲಾಖೆಯಿಂದ 41.98 ಕೋಟಿ ರೂಪಾಯಿ, ರಕ್ಷಣಾ ಇಲಾಖೆಯಿಂದ 22.25 ಕೋಟಿ ರೂಪಾಯಿ. ರೈಲ್ವೆಯಿಂದ 11.8 ಕೋಟಿ ರೂಪಾಯಿಗಳಷ್ಟು ಹಣ ಬಾಕಿ ಇದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಒಂದು ವೇಳೆ ವಾಣಿಜ್ಯ ಕಟ್ಟಡಗಳು ಈ ರೀತಿ ಬೃಹತ್ ಮೊತ್ತವನ್ನು ಬಾಕಿ ಉಳಿಸಿಕೊಂಡರೆ ತಕ್ಷಣವೇ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ಆದರೆ ಸರ್ಕಾರಿ ಇಲಾಖೆಗಳಿಗೆ ಕೆಲವು ರಕ್ಷಣೆಗಳಿರುತ್ತವೆ ಆದ್ದರಿಂದ ಇಂತಹ ಇಲಾಖೆಗಳು ನಿಯಮಿತ ಪಾವತಿಗಳನ್ನು ನಿರ್ಲಕ್ಷ್ಯಿಸುತ್ತವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸರ್ಕಾರಿ ಇಲಾಖೆಗಳಿಗೆ ಹೋಲಿಕೆ ಮಾಡಿದಲ್ಲಿ ಖಾಸಗಿ ಸಂಸ್ಥೆಗಳ ಬಾಕಿ ಹಣ ಕಡಿಮೆ ಇದೆ. ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯೆ ನೀಡಿರುವ ಜಲಮಂಡಳಿಯ ಅಧ್ಯಕ್ಷ ಎನ್ ಜಯರಾಮ್ ಸರ್ಕಾರಿ ಇಲಾಖೆಗಳಿಗೆ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಸಂಪರ್ಕವನ್ನು ಕಡಿತಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.