ಸರ್ಕಾರಿ ಸಿಬ್ಬಂದಿ ವೇತನಕ್ಕೆ ಆಯೋಗ ರಚನೆ: ಸಿಎಂ ಬೊಮ್ಮಾಯಿ
ಸುಮಾರು 5.12 ಲಕ್ಷ ನೌಕರರ ವೇತನ ಪರಿಷ್ಕರಣೆ ಕುರಿತು ಶಿಫಾರಸುಗಳ ನೀಡಲು ಶೀಘ್ರದಲ್ಲೇ ಆಯೋಗ ರಚಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದ್ದು, ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿಯಿದ್ದು, ಮುಖ್ಯಮಂತ್ರಿಗಳ ಈ ನಿರ್ಧಾರ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Published: 17th March 2022 08:22 AM | Last Updated: 17th March 2022 11:33 AM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ಸುಮಾರು 5.12 ಲಕ್ಷ ನೌಕರರ ವೇತನ ಪರಿಷ್ಕರಣೆ ಕುರಿತು ಶಿಫಾರಸುಗಳ ನೀಡಲು ಶೀಘ್ರದಲ್ಲೇ ಆಯೋಗ ರಚಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದ್ದು, ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿಯಿದ್ದು, ಮುಖ್ಯಮಂತ್ರಿಗಳ ಈ ನಿರ್ಧಾರ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸರ್ಕಾರದ ಈ ಕ್ರಮದಿಂದ ಪ್ರಭಾವಿತರಾದ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರ ನೇತೃತ್ವದ ತಂಡ ಬುಧವಾರ ಸಂಜೆ ಸಿಎಂ ಅವರನ್ನು ಭೇಟಿ ಮಾಡಿ. ಅಭಿನಂದನೆ ಸಲ್ಲಿಸಿತು.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನೌಕರರ ಪರವಾಗಿ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಆಯೋಗ ರಚಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ವಸತಿ ಯೋಜನೆ ಫಲಾನುಭವಿಗಳ ವಾರ್ಷಿಕ ಆದಾಯದ ಮಿತಿ ಹೆಚ್ಚಳ: ಸಿಎಂ ಬೊಮ್ಮಾಯಿ
7ನೇ ವೇತನ ಆಯೋಗದ ನಂತರ ರಾಜ್ಯ ಸರ್ಕಾರಿ ನೌಕರರ ವೇತನವನ್ನು ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ಪರಿಷ್ಕರಿಸುವಂತೆ ಒತ್ತಾಯಗಳು ಕೇಳಿ ಬಂದಿದ್ದವು. ಆದರೆ, ಈ ಬಗ್ಗೆ ಬಜೆಟ್ ನಲ್ಲಿ ಬೊಮ್ಮಾಯಿಯವರು ಯಾವುದೇ ಘೋಷಣೆಗಳನ್ನು ಮಾಡದೆ ನಿರಾಸೆ ಮೂಡಿಸಿದ್ದರು. ಇದೀಗ ಆಯೋಗ ರಚನೆ ಮಾಡುವುದಾಗಿ ತಿಳಿಸಿದ್ದು, ಸರ್ಕಾರದ ಈ ನಿರ್ಧಾರ ಇದೀಗ ನೌಕರರಲ್ಲಿ ಸಂತಸವನ್ನೂ ಮೂಡಿಸಿದೆ.
“ನಾನು ಬಜೆಟ್ನಲ್ಲಿ ಯಾವುದೇ ಘೋಷಣೆ ಮಾಡದ ಕಾರಣ, ಸಂಘದ ಪದಾಧಿಕಾರಿಗಳು ನನ್ನನ್ನು ಭೇಟಿ ಮಾಡಿ ಬೇಡಿಕೆಯನ್ನು ಮುಂದಿಟ್ಟಿದ್ದರು. ಹಾಗಾಗಿ, ಆದಷ್ಟು ಬೇಗ ಆಯೋಗವನ್ನು ರಚಿಸಲು ನಿರ್ಧರಿಸಲಾಗಿದೆ. ಆಯೋಗ ಇತರ ರಾಜ್ಯಗಳ ನೌಕರರ ವೇತನವನ್ನು ಅಧ್ಯಯನ ಮಾಡಿ ಶಿಫಾರಸುಗಳನ್ನು ಮಾಡಲಿದೆ ಎಂದು ವಿಧಾನಸಭೆಯಲ್ಲಿ ಬಜೆಟ್ ಚರ್ಚೆ ವೇಳೆ ಬೊಮ್ಮಾಯಿಯವರು ತಿಳಿಸಿದರು.
3.5 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು, 4.5 ಲಕ್ಷ ಉದ್ಯೋಗಗಳನ್ನು ಹೊರಗುತ್ತಿಗೆಗೆ ನೀಡಲಾಗಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಎಚ್ಕೆ ಪಾಟೀಲ್ ಅವರು ಹೇಳಿದರು.
ಇದನ್ನೂ ಓದಿ: ಬೆಂಗಳೂರು: ಜೈನ ದೇವಾಲಯಕ್ಕೆ ಭೇಟಿ ನೀಡಿ ಆಶಿರ್ವಾದ ಪಡೆದ ಸಿಎಂ ಬೊಮ್ಮಾಯಿ
ಇದಕ್ಕೆ ಉತ್ತರಿಸಿದ ಸಿಎಂ, 77,000 ಕೌಶಲ್ಯರಹಿತ ಗ್ರೂಪ್-ಡಿ ಸಿಬ್ಬಂದಿ ಸೇರಿದಂತೆ ಸುಮಾರು 91,000 ಮಂದಿಯನ್ನು ಮಾತ್ರ ಹೊರಗುತ್ತಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಹೊರಗುತ್ತಿಗೆ ಸಿಬ್ಬಂದಿಯನ್ನೇ ಮುಂದುವರಿಸಿದರೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಮೀಸಲಾತಿ ನಿರಾಕರಣೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ತತ್ವಕ್ಕೆ ವಿರುದ್ಧವಾಗಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಸಲಹೆ ನೀಡಿದರು.