ಹಿಜಾಬ್ ತೀರ್ಪು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಗೈರು
ಹಿಜಾಬ್ ತೀರ್ಪು ವಿರುದ್ಧ ಮುಸ್ಲಿಂ ಸಂಘಟನೆಗಳ ಕರ್ನಾಟಕ ಬಂದ್ ಕರೆ ನಡುವೆಯೇ ಜಿಲ್ಲೆಯ ಕಾಲೇಜುಗಳಲ್ಲಿ ಗುರುವಾರದಿಂದ ಪದವಿ ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದೆ. ಆದರೆ, ಬಹುತೇಕ ಮುಸ್ಲಿಂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರೀಕ್ಷೆಯಿಂದ ದೂರ ಉಳಿದು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
Published: 18th March 2022 12:24 PM | Last Updated: 18th March 2022 01:39 PM | A+A A-

ಸಂಗ್ರಹ ಚಿತ್ರ
ಮಂಗಳೂರು: ಹಿಜಾಬ್ ತೀರ್ಪು ವಿರುದ್ಧ ಮುಸ್ಲಿಂ ಸಂಘಟನೆಗಳ ಕರ್ನಾಟಕ ಬಂದ್ ಕರೆ ನಡುವೆಯೇ ಜಿಲ್ಲೆಯ ಕಾಲೇಜುಗಳಲ್ಲಿ ಗುರುವಾರದಿಂದ ಪದವಿ ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದೆ. ಆದರೆ, ಬಹುತೇಕ ಮುಸ್ಲಿಂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರೀಕ್ಷೆಯಿಂದ ದೂರ ಉಳಿದು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಮಂಗಳೂರು ಕಾರ್ ಸ್ಟ್ರೀಟ್ ಪದವಿ ಕಾಲೇಜಿನಲ್ಲಿ ಪದವಿ ಪರೀಕ್ಷೆಗೆ ಒಟ್ಟು 52 ಮುಸ್ಲಿಂ ವಿದ್ಯಾರ್ಥಿಗಳ ಪೈಕಿ 27 ಮಂದಿ ಮಾತ್ರ ಹಾಜರಾಗಿದ್ದಾರೆ. ಇವರಲ್ಲಿ 24 ಮಂದಿ ವಿದ್ಯಾರ್ಥಿಗಳು, ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಪರೀಕ್ಷೆ ಬರೆದಿದ್ದಾರೆ.
ಸ್ವಾತಕೋತ್ತರ ತರಗತಿಯಲ್ಲಿ 7 ಮಂದಿ ಮುಸ್ಲಿಂ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಗುರುವಾರದಿಂದ ಮಾ.23ರವರೆಗೆ ದಿನದಲ್ಲಿ ವಿವಿಧ ಪದವಿಗಳ ಸೆಮಿಸ್ಟರ್ ಪರೀಕ್ಷೆ ಇಲ್ಲಿ ನಡೆಯುತ್ತಿದೆ. ಮೂಲ್ಕಿಯ ಹಳೆಯಂಗಡಿ ಸರ್ಕಾರಿ ಪದವಿ ಕಾಲೇಜಿನ 25 ಹಾಗೂ ಪೊಂಪೈ ಕಾಲೇಜಿನ 25 ಮಂದಿ ಮುಸ್ಲಿಂ ವಿದ್ಯಾರ್ಥಿಗಳು ಗುರುವಾರ ತರಗತಿಗೆ ಆಗಮಿಸಿಲ್ಲ.
ಉಪ್ಪಿನಂಗಡಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ಹಿಜಾಬ್ ಧರಿಸಿ ತರಗತಿಗೆ ಆಗಮಿಸಿ ಮತ್ತೆ ವಿವಾದಕ್ಕೆ ಕಾರಣವಾಗಿತ್ತು. ಆದರೆ, ಗುರುವಾರ ಯಾವುದೇ ಮುಸ್ಲಿಂ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿರಲಿಲ್ಲ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮುಸ್ಲಿಮರು ನಡೆಸುವ ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಅಲ್ಲದೆ, ಖಾಸಗಿ ಕಾಲೇಜು ಮತ್ತು ಟ್ಯೂಷನ್ ತರಗತಿಗಳಿಗೂ ಮುಸ್ಲಿಂ ವಿದ್ಯಾರ್ಥಿಗಳು ಹಾಜರಾಗದೆ ಬಂದ್'ಗೆ ಬೆಂಬಲ ವ್ಯಕ್ತಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.