ಈ ವರ್ಷ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆ ಇಲ್ಲ: ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ಪಷ್ಟನೆ
ಈ ವರ್ಷದ ರಾಜ್ಯದ ಪಠ್ಯಪುಸ್ತಕದಲ್ಲಿ ಭಗವದ್ಗೀತೆಯನ್ನು ಸೇರಿಸುವುದಿಲ್ಲ. ಈಗ ಪುಸ್ತಕದಲ್ಲಿ ಜ್ಞಾನವಿದೆ, ಸಂಸ್ಕಾರವಿಲ್ಲ ಎನ್ನುತ್ತಿದ್ದಾರೆ. ನೈತಿಕ ಶಿಕ್ಷಣ ತರುವಂತೆ ಹಲವರು ಬೇಡಿಕೆ ಇಟ್ಟಿದ್ದಾರೆ. ಇಂತಹದೊಂದು ಬೇಡಿಕೆ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ, ಶಿಕ್ಷಣ ತಜ್ಞರ ಜೊತೆ ಚರ್ಚಿಸುತ್ತೇವೆ. ಅದನ್ನು ಹೇಗೆ ಜಾರಿ ಮಾಡಬೇಕೆಂದು ನಿರ್ಧಾರ
Published: 18th March 2022 01:32 PM | Last Updated: 18th March 2022 01:43 PM | A+A A-

ಬಿ ಸಿ ನಾಗೇಶ್
ಬೆಂಗಳೂರು: ಈ ವರ್ಷದ ರಾಜ್ಯದ ಪಠ್ಯಪುಸ್ತಕದಲ್ಲಿ ಭಗವದ್ಗೀತೆಯನ್ನು ಸೇರಿಸುವುದಿಲ್ಲ. ಈಗ ಪುಸ್ತಕದಲ್ಲಿ ಜ್ಞಾನವಿದೆ, ಸಂಸ್ಕಾರವಿಲ್ಲ ಎನ್ನುತ್ತಿದ್ದಾರೆ. ನೈತಿಕ ಶಿಕ್ಷಣ ತರುವಂತೆ ಹಲವರು ಬೇಡಿಕೆ ಇಟ್ಟಿದ್ದಾರೆ. ಇಂತಹದೊಂದು ಬೇಡಿಕೆ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ, ಶಿಕ್ಷಣ ತಜ್ಞರ ಜೊತೆ ಚರ್ಚಿಸುತ್ತೇವೆ. ಅದನ್ನು ಹೇಗೆ ಜಾರಿ ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.
ಗುಜರಾತ್ ಮಾದರಿಯಲ್ಲಿ ರಾಜ್ಯದ ಪಠ್ಯಪುಸ್ತಕದಲ್ಲಿ ಭಗವದ್ಗೀತೆಯನ್ನು ಅಳವಡಿಸಲಾಗುತ್ತದೆ ಎಂಬ ಸುದ್ದಿಗಳು, ಊಹಾಪೋಹಗಳು ಕೇಳಿಬರುತ್ತಿದ್ದು, ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಗುಜರಾತ್ ಮಾದರಿ ಎಂಬುದು ನನಗೆ ಗೊತ್ತಿಲ್ಲ. ವಿದ್ಯಾರ್ಥಿಗಳಿಗೆ ಜ್ಞಾನದ ಜತೆ ಸಂಸ್ಕಾರ ಕಲಿಸಬೇಕಿದೆ. ಅದರ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ ಎಂದರು.
ಭಗವದ್ಗೀತೆ ಎಲ್ಲಾ ಧರ್ಮಕ್ಕೂ ಸೇರಿದ್ದು, ಪ್ರಪಂಚದ ಎಲ್ಲಾ ದೇಶಗಳಲ್ಲಿ ಭಗವದ್ಗೀತೆಯನ್ನು ಅಭ್ಯಾಸ ಮಾಡುವ ಕ್ರಮ ಬಂದಿದೆ. ಇದು ಯಾವುದೇ ಧರ್ಮ, ಜಾತಿಗೆ ಸಂಬಂಧಿಸಿದ್ದಲ್ಲ. ಶತಮಾನಗಳಿಂದ ಭಗವದ್ಗೀತೆಯನ್ನು ಅಧ್ಯಯನ ಮಾಡುವ, ಓದುವ ಪದ್ಧತಿ ನಮ್ಮಲ್ಲಿದೆ, ಈ ವರ್ಷ ತರುವುದಿಲ್ಲ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ತರುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ: 6 ರಿಂದ 12ನೇ ತರಗತಿಯ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಬೋಧನೆ: ಗುಜರಾತ್ ಸರ್ಕಾರ ಆದೇಶ
ಪುನೀತ್ ಹೆಸರು ಸೇರ್ಪಡೆ ಸಮಿತಿಗೆ ಬಿಟ್ಟ ನಿರ್ಧಾರ: ಇನ್ನು ಶಾಲಾ ಪಠ್ಯಪುಸ್ತಕದಲ್ಲಿ ನಟ ಪುನೀತ್ ರಾಜ್ ಕುಮಾರ್ ಹೆಸರನ್ನು ಇಡುವ ಕುರಿತು ಸಚಿವರಲ್ಲಿ ಕೇಳಿದಾಗ, ಅಂತಹ ಬೇಡಿಕೆಗಳನ್ನು ಪಠ್ಯಪುಸ್ತಕ ರಚನಾ ಸಮಿತಿಯ ಮುಂದಿಡುತ್ತೇವೆ. ಕರ್ನಾಟಕದ ಪಠ್ಯದಲ್ಲಿ ಯಾವ ರೀತಿ ಸೇರಿಸಬೇಕು ಎಂದು ಸಿಎಂ, ಶಿಕ್ಷಣ ತಜ್ಞರ ಜೊತೆ ಸೇರಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಹಿಜಾಬ್ ವಿಚಾರವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ವಿದ್ಯಾರ್ಥಿನಿಯರಿಗೆ ಶಿಕ್ಷಣ ಇಲಾಖೆ ಮತ್ತೆ ಸ್ಪಷ್ಟನೆ ನೀಡಿದ್ದು ಅದರಂತೆ ಸದ್ಯ ಹೈಕೋರ್ಟ್ ತೀರ್ಪಿನ ಅನುಸಾರ ಹಿಜಾಬ್ ಧರಿಸಿ ಶಾಲೆಗೆ ಹಾಜರಾಗಲು ಅಥವಾ ಪರೀಕ್ಷೆಗೆ ಹಾಜರಾಗಲು ಅವಕಾಶ ಇಲ್ಲ ಎಂದು ಹೇಳಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ತಿಂಗಳು ಮಾತ್ರ ಬಾಕಿ ಇದೆ. ಈ ನಡುವೆಯೇ ಸುಪ್ರೀಂ ಕೋರ್ಟ್ ಮೊರೆ ಹೋದರೆ, ಅಲ್ಲಿಯ ತೀರ್ಪು ಬರುವವರೆಗೂ ಹಿಜಾಬ್ ದರಿಸಲು ಅವಕಾಶ ನೀಡಿ ಎಂದು ಕೆಲ ಮುಸ್ಲಿಂ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದರು. ಪರೀಕ್ಷೆಯಲ್ಲಿ ಆದರೂ ಹಿಜಾಬ್ ಧರಿಸಿ ಎಕ್ಸಾಂ ಬರೆಯಲು ಅವಕಾಶ ನೀಡಿ ಎಂದು ಕೇಳಿದ್ದರು. ಆದರೆ, ಅದಕ್ಕೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.