
ಎಎಫ್'ಸಿ ಗೇಟ್ ಬಳಿ ನಿಂತಿರುವ ಜನರು.
ಬೆಂಗಳೂರು: ರಾಜರಾಜೇಶ್ವರಿನಗರ ಮೆಟ್ರೋ ನಿಲ್ದಾಣದಲ್ಲಿ 6 ವರ್ಷಗ ಬಾಲಕಿಯೊಬ್ಬಳಿಗೆ ಸ್ವಯಂಚಾಲಿತ ದರ ಸಂಗ್ರಹಣೆ (ಎಎಫ್‌ಸಿ) ಗೇಟ್ ಬಡಿದ ಘಟನೆ ಗುರುವಾರ ನಡೆದಿದೆ.
ಆಶಿಕಾ ಎಂಬ ಬಾಲಕಿ ತನ್ನ ಪೋಷಕರೊಂದಿಗೆ ಸಂಜೆ 7 ಗಂಟೆ ಸುಮಾರಿಗೆ ಬೈಯಪ್ಪನಹಳ್ಳಿಯಿಂದ ರಾಜರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದಾರೆ. ಆಶಿಕಾ ಕುಟುಂಬಸ್ಥರು ಟಿಕೆಟ್ ಗೇಟ್ ದಾಟಿದ ಬಳಿಕ ಆಶಿಕಾ ಕೂಡ ಮುಂದಾಗಿದ್ದು, ಈ ವೇಳೆ ಗೇಟ್ ಆಶಿಕಾ ಎದೆಗೆ ಬಡಿದಿದೆ. ಇದರಿಂದ ತೀವ್ರವಾಗಿ ನೋವಿನಿಂದ ಆಶಿಕಾ ಅಳಲು ಆರಂಭಿಸಿದ್ದಾಳೆ.
ಸಿಬ್ಬಂದಿಗಳು ಹಾಗೂ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಳಸುವ ಗೇಟ್ ನ್ನು ಸಿಬ್ಬಂದಿಯೊಬ್ಬರು ತೆರೆದಿದ್ದು, ಈ ಗೇಟ್ ಮೂಲಕ ಆಶಿಕಾ ಅವರ ಪೋಷಕರು ಹಾಗೂ ಇತರೆ ಪ್ರಯಾಣಿಕರು ಸಾಗಿದ್ದಾರೆ.
3 ಅಡಿ ಎತ್ತರದ ಮಕ್ಕಳಿಗೆ ಟಿಕೆಟ್ ಕಡ್ಡಾಯ ಎಂಬ ನಿಯಮವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ವಿಧಿಸಿದೆ. ನಿಲ್ದಾಣಗಳಲ್ಲಿನ ಟಿಕೆಟ್ ಕೌಂಟರ್‌ಗಳಲ್ಲಿ ನಿರ್ದಿಷ್ಟ ಎತ್ತರವನ್ನು ಹೈಲೈಟ್ ಮಾಡುವ ಮಾರ್ಕರ್‌ಗಳಿದ್ದು, 3 ಅಡಿ ಎತ್ತರವಿರುವ ಮಗುವಿಗೆ ಕುಟುಂಬವು ಟಿಕೆಟ್ ಖರೀದಿಸಬೇಕಿದೆ.
ಆಶಿಕಾ ಕುಟುಂಬಸ್ಥರು ಆಶಿಕಾ ಅವರಿಗೆ ಟಿಕೆಟ್ ಖರೀದಿಸದೆ ಇದ್ದು, ಮಗು 3 ಅಡಿಗಿಂತಲೂ ಹೆಚ್ಚು ಎತ್ತರವಿರುವ ಕಾರಣ ಗೇಟ್ ಬಡಿದಿದೆ ಎಂದು ಅಧಿಕಾರಿ ವಿವರಿಸಿದರು.
ನಿಲ್ದಾಣಕ್ಕೆ ಬರುವ ಸಾಕಷ್ಟು ಪೋಷಕರು ಗೇಟ್ ದಾಟುವ ವೇಳೆ ಮಕ್ಕಳನ್ನು ಎತ್ತಿಕೊಂಡಿರುತ್ತಾರೆ. ಈ ಘಟನೆಯಲ್ಲಿ ಮಗುವನ್ನು ಬಿಟ್ಟು ಒಬ್ಬಂಟಿಯಾಗಿ ಪೋಷಕರು ಸಾಗಿದ ಕೂಡಲೇ ಸಾಗಿದ್ದು, ಟಿಕೆಟ್ ಖರೀದಿಸದ ಕಾರಣ ಗೇಟ್ ಮುಚ್ಚಿಕೊಂಡಿದೆ ಎಂದು ಹೇಳಿದ್ದಾರೆ.