ಸಂಘ ಸಂಸ್ಥೆಗಳಿಗೆ ಅನುದಾನ ಹಂಚಿಕೆಯಲ್ಲಿ ಪಾರದರ್ಶಕತೆ, ಬೋಗಸ್ ಸೃಷ್ಟಿಗೆ ಬ್ರೇಕ್: ಸುನೀಲ್ ಕುಮಾರ್
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೋಂದಾಯಿತ ಸಂಘ ಸಂಸ್ಥೆಗಳಿಗೆ ವಾರ್ಷಿಕವಾಗಿ ನೀಡುತ್ತಿದ್ದ ಅನುದಾನ ಹಂಚಿಕೆಯಲ್ಲಿ ಈ ಬಾರಿ ಪಾರದರ್ಶಕತೆಯನ್ನು ತರಲಾಗಿದ್ದು, ಬೋಗಸ್ ಸೃಷ್ಟಿಗೆ ಕಡಿವಾಣ ಹಾಕಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
Published: 18th March 2022 08:19 PM | Last Updated: 19th March 2022 01:02 PM | A+A A-

ಸಚಿವ ಸುನೀಲ್ ಕುಮಾರ್
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೋಂದಾಯಿತ ಸಂಘ ಸಂಸ್ಥೆಗಳಿಗೆ ವಾರ್ಷಿಕವಾಗಿ ನೀಡುತ್ತಿದ್ದ ಅನುದಾನ ಹಂಚಿಕೆಯಲ್ಲಿ ಈ ಬಾರಿ ಪಾರದರ್ಶಕತೆಯನ್ನು ತರಲಾಗಿದ್ದು, ಬೋಗಸ್ ಸೃಷ್ಟಿಗೆ ಕಡಿವಾಣ ಹಾಕಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಅನುದಾನ ಪಡೆಯುವಲ್ಲಿ ಕೆಲವೇ ಸಂಘ ಸಂಸ್ಥೆಗಳು ಏಕಸ್ವಾಮ್ಯ ಸಾಧಿಸಿವೆ. ಇಲಾಖೆಯ ಅಧಿಕಾರಿಗಳು ಇದರಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದು ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹತ್ತಾರು ವರ್ಷಗಳಿಂದ 10 ರಿಂದ 15 ಲಕ್ಷ ರೂಪಾಯಿ ವರೆಗೆ ಅನುದಾನ ಪಡೆಯುತ್ತಲೇ ಬಂದ ಸಂಸ್ಥೆಗಳಿಗೆ ಈ ಬಾರಿ ನೆರವು ಕಡಿತ ಮಾಡಲಾಗಿದ್ದು, ಅನುದಾನದ ಮೊತ್ತವನ್ನು ಗರಿಷ್ಠ 2. 5 ಲಕ್ಷ ರೂ.ಗೆ ಸೀಮಿತಗೊಳಿಸಲಾಗಿದೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
25 ರಿಂದ 50 ಲಕ್ಷ ಅನುದಾನ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ನೀಡಿರುವುದರಿಂದ ಕೆಲವರು ಈಗ ಇಲಾಖೆಯ ಪಾರದರ್ಶಕ ನೀತಿಯ ಬಗ್ಗೆ ಕೆಂಗಣ್ಣು ಬೀರಲಾರಂಭಿಸಿದ್ದಾರೆ. ಆನ್ ಲೈನ್ ಅರ್ಜಿಗಳಿಗೂ ಗರಿಷ್ಠ 2.5 ಲಕ್ಷ ರೂ. ಅನುದಾನ ಸೀಮಿತಗೊಳಿಸಲಾಗಿದ್ದು, ಕಾರ್ಯಕ್ರಮ ನಡೆಸಿರುವ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಪರಿಶೀಲನೆ ನಡೆಸಿಯೇ ಅನುದಾನ ಅರ್ಜಿ ಸ್ವೀಕರಿಸಿರುವುದಾಗಿ ಅವರು ಹೇಳಿದ್ದಾರೆ.
ಹೇಗೆ ಲಾಭಿ? ಅನುದಾನಕ್ಕಾಗಿ ಸಾಂಸ್ಕೃತಿಕ ಮಾಫಿಯಾ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಲೇ ಇತ್ತು. ಪ್ರಭಾವಿಗಳ ಸಂಪರ್ಕ, ಲೆಟರ್ ಹೆಡ್ ಸಂಘಟನೆ ಹೊಂದಿದ್ದ ಕೆಲ ಪಟ್ಟಭದ್ರರು ವಾರ್ಷಿಕ 25 ರಿಂದ 50 ಲಕ್ಷ ರೂ. ಅನುದಾನ ಪಡೆದಿರುವ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಕೊರೋನಾ ಅವಧಿಯ ಎರಡು ವರ್ಷ ಯಾವುದೇ ಕಾರ್ಯಕ್ರಮ ಆಯೋಜಿಸದೇ ಅನುದಾನ ಪಡೆಯುವ ಬಗ್ಗೆ ಕೆಲ ಸಂಘಟನೆಗಳು ಪ್ರಯತ್ನ ನಡೆಸಿರುವುದು ಪರಿಶೀಲನೆ ಸಂದರ್ಭದಲ್ಲಿ ಬಯಲಾಗಿತ್ತು.
ಇವೆಲ್ಲಾ ವಿಚಾರಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿರುವ ಸಚಿವ ವಿ. ಸುನೀಲ್ ಕುಮಾರ್ ಅನುದಾನವನ್ನು ಯೋಗ್ಯರಿಗೆ ಪಾರದರ್ಶಕವಾಗಿ ಹಂಚಿಕೆ ಮಾಡುವಂತೆ ಸೂಚಿಸಿದ್ದರು. ಅನುದಾನ ಹಂಚಿಕಯ ಹೊಸ ಪಟ್ಟಿ ಸದ್ಯದಲ್ಲೇ ಪ್ರಕಟವಾಗಲಿದೆ.