ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಕೆಗೆ ಸರ್ಕಾರ ಚಿಂತನೆ: ವಿರೋಧ ಪಕ್ಷದ ನಾಯಕರು ಏನಂತಾರೆ?
ಗುಜರಾತ್ ಸರ್ಕಾರ ಮಾದರಿಯಲ್ಲಿ ರಾಜ್ಯದ ಶಾಲಾ ಪಠ್ಯಕ್ರಮ ಪುಸ್ತಕದಲ್ಲಿ ಹಿಂದೂ ಧರ್ಮಗ್ರಂಥ ಭಗವದ್ಗೀತೆಯನ್ನು ಅಳವಡಿಸಲು ಸರ್ಕಾರ ಮುಂದಾದಂತಿದೆ.
Published: 19th March 2022 10:36 AM | Last Updated: 19th March 2022 01:08 PM | A+A A-

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್
ಬೆಂಗಳೂರು: ಗುಜರಾತ್ ಸರ್ಕಾರ ಮಾದರಿಯಲ್ಲಿ ರಾಜ್ಯದ ಶಾಲಾ ಪಠ್ಯಕ್ರಮ ಪುಸ್ತಕದಲ್ಲಿ ಹಿಂದೂ ಧರ್ಮಗ್ರಂಥ ಭಗವದ್ಗೀತೆಯನ್ನು ಅಳವಡಿಸಲು ಸರ್ಕಾರ ಮುಂದಾದಂತಿದೆ.
ಈ ಬಗ್ಗೆ ನಿನ್ನೆ ಮಾಧ್ಯಮ ಪ್ರತಿನಿಧಗಳೊಂದಿಗೆ ಮಾತನಾಡಿದರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿನ ನಾಗೇಶ್, ಈ ವರ್ಷ ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆಯನ್ನು ಅಳವಡಿಸುವುದಿಲ್ಲ, ಮುಂದಿನ ವರ್ಷ ನೋಡೋಣ,ಪಠ್ಯ ಪುಸ್ತಕ ರಚನಾ ಸಮಿತಿ ಸಮಾಲೋಚನೆ ನಡೆಸಿ ಮುಖ್ಯಮಂತ್ರಿಗಳು, ಶಿಕ್ಷಣ ತಜ್ಞರ ಮುಂದಿಡಲಾಗುವುದು ಎಂದು ಹೇಳಿದ್ದಾರೆ.
ಹಂತಹಂತವಾಗಿ ಶಾಲಾ ಪಠ್ಯಕ್ರಮದಲ್ಲಿ ನೈತಿಕ ಮೌಲ್ಯ ಪಾಠಗಳನ್ನು ಅಳವಡಿಸಿಕೊಳ್ಳಲು ಗುಜರಾತ್ ಸರ್ಕಾರ ಮುಂದಾಗಿದೆ ಎಂದು ಕೇಳಿ ತಿಳಿದಿದ್ದೇವೆ. ಶಾಲಾ ಶಿಕ್ಷಣದ ಪಠ್ಯಕ್ರಮದಲ್ಲಿ ನೈತಿಕ ವಿಜ್ಞಾನ ಸೇರಿಸುವ ಕುರಿತು ಪೋಷಕರು, ಸಮಾಜದ ಚಿಂತಕರ ಒತ್ತಾಯ, ಬೇಡಿಕೆ ಹೆಚ್ಚಾಗುತ್ತಿದೆ ಎಂದು ಸಚಿವ ಬಿ ಸಿ ನಾಗೇಶ್ ಹೇಳಿದ್ದರು.
ಇದನ್ನೂ ಓದಿ: ಈ ವರ್ಷ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆ ಇಲ್ಲ: ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ಪಷ್ಟನೆ
ಸಚಿವರ ಪ್ರತಿಕ್ರಿಯೆ ಹೊರಬಂದ ನಂತರ ಇದಕ್ಕೆ ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಧಾರ್ಮಿಕ ವಿಷಯಗಳಲ್ಲಿ ಶಾಲಾ ಪಠ್ಯಕ್ರಮದಲ್ಲಿ ವೈಭವೀಕರಿಸುವ ಅಗತ್ಯವಿಲ್ಲ. ಅವುಗಳನ್ನು ಈಗಾಗಲೇ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಹಲವು ಧರ್ಮಗಳ ಬಗ್ಗೆ ಕಲಿಯುವುದು ಉತ್ತಮ, ಆದರೆ ಈಗಾಗಲೇ ಇರುವ ವಿಷಯಗಳನ್ನು ಕಲಿಯುವುದು ಬೇಕಿಲ್ಲ ಎಂದಿದ್ದಾರೆ. ಅಂದರೆ ಬಿಜೆಪಿ ಸರ್ಕಾರದ ಈ ಕ್ರಮ ಕಾಂಗ್ರೆಸ್ ಗೆ ಸರಿಹೋದಂತೆ ಕಾಣುತ್ತಿಲ್ಲ.
ಇನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಪರೋಕ್ಷವಾಗಿ ಸರ್ಕಾರದ ಆಲೋಚನೆಯನ್ನು ವಿರೋಧಿಸಿದ್ದಾರೆ. ಜೀವನವನ್ನು ಹೇಗೆ ಉತ್ತಮವಾಗಿ ಮುನ್ನಡೆಸಬೇಕು, ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ಶಾಲಾ ಪಠ್ಯಪುಸ್ತಕದಲ್ಲಿ ತರಬೇಕು ಎಂದಿದ್ದಾರೆ.
ಇದನ್ನೂ ಓದಿ: ಶಾಲಾ ಪಠ್ಯದಲ್ಲಿ ನಟ ಪುನೀತ್ ಜೀವನಗಾಥೆ: ಪ್ರಾಥಮಿಕ ತರಗತಿಯ ಪುಸ್ತಕದಲ್ಲಿ ದೊಡ್ಮನೆ ಹುಡುಗನ ಯಶೋಗಾಥೆ!
ಹೊಳನರಸೀಪುರ ತಾಲ್ಲೂಕಿನಲ್ಲಿ ಟಿ ಮಾಯಿಗೌಡನಹಳ್ಳಿ ಗ್ರಾಮದಲ್ಲಿ ನಂಜುಂಡೇಶ್ವರ ದೇವಸ್ಥಾನದ ಉದ್ಘಾಟನೆ ಬಳಿಕ ಮಾತನಾಡಿದ ಕುಮಾರಸ್ವಾಮಿ, ಮಕ್ಕಳು ಮನೆಯಲ್ಲಿ ಸಂಸ್ಕೃತಿಯನ್ನು ಕಲಿಯುತ್ತಿದ್ದಾರೆ, ಅದರಲ್ಲಿ ಭಗವದ್ಗೀತೆ ಕೂಡ ಒಂದು. ರಾಜಕೀಯ ಪಕ್ಷಗಳು ಇಂತಹ ಪ್ರಸ್ತಾವನೆಯನ್ನು ಮತದಾರರನ್ನು ಸೆಳೆಯಲು ತರುತ್ತಿದೆ ಎಂದು ಟೀಕಿಸಿದ್ದಾರೆ.
ಇಂದು ಶಿಕ್ಷಣದ ಸ್ಥಿತಿಗತಿ ಬದಲಾಗಿದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಲೋಪದೋಷಗಳಿವೆ. ಹಾಗಿರುವಾಗ ತಪ್ಪುಗಳನ್ನು ಸರಿಪಡಿಸಲು ಸರ್ಕಾರ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದ್ದಾರೆ.
ಹಿಜಾಬ್ ವಿವಾದದ ಲಾಭ ಮಾಡಿಕೊಳ್ಳಲು ರಾಜಕೀಯ ನಾಯಕರ ಒಂದು ಬಣ ಪ್ರಯತ್ನಿಸುತ್ತಿದೆ ಎಂದು ಕೂಡ ಕುಮಾರಸ್ವಾಮಿ ಹೇಳಿದರು.