ಹಿಜಾಬ್ ತೀರ್ಪು ನೀಡಿ ಕೊಲೆ ಬೆದರಿಕೆ ಎದುರಿಸುತ್ತಿರುವ ಮೂವರು ನ್ಯಾಯಾಧೀಶರಿಗೆ 'ವೈ' ದರ್ಜೆ ಭದ್ರತೆ, ತನಿಖೆಗೆ ಸೂಚನೆ: ಸಿಎಂ ಬಸವರಾಜ ಬೊಮ್ಮಾಯಿ
ಹಿಜಾಬ್ ವಿವಾದ ಬಗ್ಗೆ ತೀರ್ಪು ನೀಡಿ ಕೊಲೆ ಬೆದರಿಕೆ ಎದುರಿಸುತ್ತಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಮೂವರು ನ್ಯಾಯಾಧೀಶರಿಗೆ ವೈ ದರ್ಜೆಯ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
Published: 20th March 2022 12:50 PM | Last Updated: 20th March 2022 01:46 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಹಿಜಾಬ್ ವಿವಾದ ಬಗ್ಗೆ ತೀರ್ಪು ನೀಡಿ ಕೊಲೆ ಬೆದರಿಕೆ ಎದುರಿಸುತ್ತಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಮೂವರು ನ್ಯಾಯಾಧೀಶರಿಗೆ ವೈ ದರ್ಜೆಯ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹಿಜಾಬ್ ವಿವಾದ ಕುರಿತು ತೀರ್ಪು ನೀಡಿದ ಮೂವರು ನ್ಯಾಯಾಧೀಶರನ್ನು ಹತ್ಯೆ ಮಾಡುವುದಾಗಿ ಮಧುರೈಯಲ್ಲಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ನ್ಯಾಯಾಧೀಶರಿಗೆ ಕೆಲವರು ಜೀವ ಬೆದರಿಕೆ ಹಾಕಿರುವ ಕುರಿತು ವಿಧಾನಸೌಧದಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಬಂಧಿಸುವಂತೆ ಡಿಜಿ ಮತ್ತು ಐಜಿ ಅವರಿಗೆ ಸೂಚಿಸಿದ್ದೇನೆ ಎಂದು ಕೂಡ ಹೇಳಿದ್ದಾರೆ.
ಬೆದರಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ಮಧುರೈ ಘಟನೆಯನ್ನು ಖಂಡಿಸದೆ ಇರುವ ವಿರೋಧ ಪಕ್ಷ ನಾಯಕರನ್ನು ನಕಲಿ ಜಾತ್ಯತೀತವಾದಿಗಳು ಎಂದು ಸಹ ಮುಖ್ಯಮಂತ್ರಿ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಟೀಕಿಸಿದ್ದಾರೆ.
ದುರ್ಘಟನೆ ನಡೆದು ಮೂರ್ನಾಲ್ಕು ದಿನಗಳಾದರೂ ಡೋಂಗಿ ಜಾತ್ಯತೀತವಾದಿಗಳು ಯಾಕೆ ಮೌನವಾಗಿದ್ದಾರೆ, ಹಿಜಾಬ್ ವಿರುದ್ಧವಾಗಿ ತೀರ್ಪು ನೀಡಿದ ನ್ಯಾಯಾಧೀಶರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಇಷ್ಟಾದ ಮೇಲೆ ಕೂಡ ವಿರೋಧ ಪಕ್ಷಗಳ ನಾಯಕರು ಮೌನವಾಗಿ ಕುಳಿತಿದ್ದಾರೆ ಎಂದರೆ ಯಾರನ್ನು ನೀವು ಒಲಿಸಿಕೊಳ್ಳಲು ನೋಡುತ್ತಿದ್ದೀರಿ, ಇದು ಜಾತ್ಯತೀತತೆ ಅಲ್ಲ, ಇದು ಕೋಮುವಾದ, ನಾನು ಈ ಮೌನವನ್ನು ಖಂಡಿಸುತ್ತೇನೆ, ನೀವು ಈ ಬಗ್ಗೆ ಮೌನ ಮುರಿದು ಮಾತನಾಡಲೇ ಬೇಕು, ಈ ವಿಚಾರದಲ್ಲಿ ನಾವೆಲ್ಲರೂ ಒಟ್ಟಾಗಬೇಕು ಎಂದು ಸಿಎಂ ಹೇಳಿದರು.
ಇದನ್ನೂ ಓದಿ: ಹಿಜಾಬ್ ತೀರ್ಪು: ನ್ಯಾಯಮೂರ್ತಿಗೆ ಬೆದರಿಕೆ ಹಾಕಿದವರ ವಿರುದ್ಧ ಎಫ್ಐಆರ್
ಕರ್ನಾಟಕ ಡಿಜಿಪಿಯವರು ತಮಿಳು ನಾಡು ಪೊಲೀಸರಿಗೆ ತನಿಖೆ ಸಹಕಾರ ನೀಡಿ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಸಿಎಂ ಒತ್ತಾಯಿಸಿದರು.
ಮಧುರೈನಲ್ಲಿ ನಡೆದ ಘಟನೆಯೇನು?: ನಾಗರಿಕರು ನೀಡಿರುವ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ.
ಹಿಜಾಬ್ ವಿವಾದ ಕುರಿತು ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಮೂವರು ತಮಿಳುನಾಡು ತೌಹೀದ್ ಜಮಾತ್ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.ಮಧುರೈನ ಕೋರಿಪಾಳ್ಯಂ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಯಲ್ಲಿ ಮುಸ್ಲಿಂ ಸಂಘಟನೆ ತೌಹೀದ್ ಜಮಾತ್ ಪದಾಧಿಕಾರಿಗಳು ನ್ಯಾಯಾಧೀಶರ ವಿರುದ್ಧ ಟೀಕೆ ಮಾಡಿ ಬೆದರಿಕೆ ಹಾಕಿದ್ದರು.