ಆರ್ಎಸ್ಎಸ್, ಬಿಜೆಪಿಯಿಂದ ದೇಶದ ಸಾಮರಸ್ಯ, ವೈವಿಧ್ಯತೆ, ಏಕತೆಗೆ ಅಪಾಯ: ಬೃಂದಾ ಕಾರಟ್
ಆರ್ಎಸ್ಎಸ್ ಮತ್ತು ಬಿಜೆಪಿ ಸಿದ್ಧಾಂತಗಳಿಂದ ಭಾರತದ ಸೌಹಾರ್ದತೆ, ಏಕತೆ, ವೈವಿಧ್ಯತೆ ಮತ್ತು ಸಂವಿಧಾನಕ್ಕೆ ಬಾಹ್ಯ ಶತ್ರುಗಳಿಗಿಂತಲೂ ಹೆಚ್ಚಿನ ಅಪಾಯ ಇದೆ ಎಂದು ಸಿಪಿಐ(ಎಂ) ಪಾಲಿಟ್ ಬ್ಯುರೊ ಸದಸ್ಯೆ, ರಾಜ್ಯಸಭಾ ಸದಸ್ಯೆ ಬೃಂದಾ...
Published: 21st March 2022 08:13 PM | Last Updated: 21st March 2022 08:13 PM | A+A A-

ಬೃಂದಾ ಕಾರಟ್
ಮಂಗಳೂರು: ಆರ್ಎಸ್ಎಸ್ ಮತ್ತು ಬಿಜೆಪಿ ಸಿದ್ಧಾಂತಗಳಿಂದ ಭಾರತದ ಸೌಹಾರ್ದತೆ, ಏಕತೆ, ವೈವಿಧ್ಯತೆ ಮತ್ತು ಸಂವಿಧಾನಕ್ಕೆ ಬಾಹ್ಯ ಶತ್ರುಗಳಿಗಿಂತಲೂ ಹೆಚ್ಚಿನ ಅಪಾಯ ಇದೆ ಎಂದು ಸಿಪಿಐ(ಎಂ) ಪಾಲಿಟ್ ಬ್ಯುರೊ ಸದಸ್ಯೆ, ರಾಜ್ಯಸಭಾ ಸದಸ್ಯೆ ಬೃಂದಾ ಕಾರಟ್ ಅವರು ಸೋಮವಾರ ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಘಟನೆಗಳ ಹಿನ್ನೆಲೆಯಲ್ಲಿ ಸಿಪಿಐ(ಎಂ) ದಕ್ಷಿಣ ಕನ್ನಡ ಘಟಕ ಆಯೋಜಿಸಿದ್ದ ಸೌಹಾರ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕಾರಟ್, ಆರ್ಎಸ್ಎಸ್ ಮತ್ತು ಬಿಜೆಪಿ ದೇಶಕ್ಕೆ ಹೆಚ್ಚು ಅಪಾಯಕಾರಿ ಎಂದು ಜನತೆಗೆ ಎಚ್ಚರಿಕೆ ನೀಡಿದರು.
ಇದನ್ನು ಓದಿ: ಹಿಜಾಬ್ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ: ಸಚಿವ ಜೆ ಸಿ ಮಾಧುಸ್ವಾಮಿ
ಆರ್ ಎಸ್ಎಸ್ ಮತ್ತು ಅದರ ಅಂಗಸಂಸ್ಥೆಗಳು ದೇಶದ ದೊಡ್ಡ ಶತ್ರುಗಳು. ಅವರ ಕೋಮುವಾದಿ ಸಿದ್ಧಾಂತ ಕೇವಲ ಅಲ್ಪಸಂಖ್ಯಾತರು ಮಾತ್ರವಲ್ಲ, ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುತ್ತದೆ. ಇದು ದೇಶವನ್ನು ಕೋಮುವಾದಿ ಮತ್ತು ಸರ್ವಾಧಿಕಾರಿ ಆಡಳಿತಕ್ಕೆ ಕೊಂಡೊಯ್ಯುವ ಮೂಲಕ ಭಾರತೀಯ ಗಣರಾಜ್ಯದ ಪ್ರತಿಯೊಂದು ಸ್ವರೂಪವನ್ನು ಬದಲಾಯಿಸುತ್ತದೆ” ಎಂದು ಹೇಳಿದರು.
ಇದೇ ವೇಳೆ ಹಿಜಾಬ್ ನಿಷೇಧದ ಬಗ್ಗೆ ಮಾತನಾಡಿದ ಅವರು, ಬಾಲಕಿಯರು ಹಲವು ಅಡೆತಡೆಗಳನ್ನು ಮುರಿದು ಶಿಕ್ಷಣ ಪಡೆಯಲು ಯತ್ನಿಸುತ್ತಿದ್ದಾರೆ. ಅವರಿಗೆ ಹಿಜಾಬ್ ತೆಗೆಯುವಂತೆ ಸೂಚಿಸುವುದು ನಾಚಿಕೆಗೇಡಿತನ. ಹಿಜಾಬ್ ಅನ್ನು ನಿಷೇಧಿಸುವ ಹೈಕೋರ್ಟ್ ತೀರ್ಪು 'ದುರದೃಷ್ಟಕರ' ಎಂದ ಕಾರಟ್, ಸುಪ್ರೀಂ ಕೋರ್ಟ್ ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕು ಎಂದು ಹೇಳಿದರು.
ಆಡಳಿತಾರೂಢ ಬಿಜೆಪಿ ತನ್ನ 'ವೈಫಲ್ಯ'ಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಹಿಜಾಬ್ ವಿವಾದ ಸೃಷ್ಟಿಸಿತು ಎಂದು ಬೃಂದಾ ಕಾರಟ್ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನೂ ಕಾಶ್ಮೀರ್ ಫೈಲ್ ಚಿತ್ರದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದ ಸಿಪಿಐ ನಾಯಕಿ, ಈ ಚಿತ್ರ ಹಿಂಸೆಯ ಪ್ರದರ್ಶನವಾಗಿದ್ದು, ಒಂದು ಸಮುದಾಯದ ಮೇಲೆ ದ್ವೇಷ ಸಾಧನೆಗಾಗಿ ಮಾಡಿದ ಕ್ರೌರ್ಯದ ವಿಜೃಂಭಣೆಯಂತಿದೆ. ಕಾಶ್ಮೀರಿ ಜನರ ಒಗ್ಗಟ್ಟು ಪ್ರದರ್ಶನ ಮತ್ತು ಪಂಡಿತರನ್ನು ಸುರಕ್ಷಿತವಾಗಿ ಹುಟ್ಟೂರಿಗೆ ಕರೆತಂದು ಅವರಿಗೆ ನ್ಯಾಯ ಒದಗಿಸುವ ಕೆಲಸಕ್ಕೆ ಆದ್ಯತೆ ಕೊಡಬೇಕು. ಸಿನಿಮಾ ಮೂಲಕ ಹಿಂಸೆಯ ವಿಜೃಂಭಣೆಯಿಂದ ಯಾರಿಗೂ ಲಾಭವಾಗದು ಎಂದರು.