ನಮ್ಮ ಶಿಕ್ಷಣದ ಬಗ್ಗೆ ನಿರ್ಧಾರ ಕೈಗೊಳ್ಳಿ: ಉಕ್ರೇನ್ ನಿಂದ ರಾಜ್ಯಕ್ಕೆ ಮರಳಿದ ವಿದ್ಯಾರ್ಥಿಗಳಿಂದ ಸರ್ಕಾರಕ್ಕೆ ಆಗ್ರಹ
ಯುದ್ಧ ಪೀಡಿತ ಉಕ್ರೇನ್ನಿಂದ ವಾಪಸಾದ ದಕ್ಷಿಣ ಕನ್ನಡದ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಭವಿಷ್ಯದ ಕುರಿತು ಚಿಂತಿತರಾಗಿದ್ದು, ಈ ಕುರಿತು ರಾಜ್ಯ ಸರ್ಕಾರ ಶೀಘ್ರಾತಿ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.
Published: 21st March 2022 02:01 PM | Last Updated: 21st March 2022 02:04 PM | A+A A-

ಉಕ್ರೇನ್ ಬಂಕರ್ ನಲ್ಲಿದ್ದ ರಾಜ್ಯದ ವಿದ್ಯಾರ್ಥಿಗಳು.
ಮಂಗಳೂರು: ಯುದ್ಧ ಪೀಡಿತ ಉಕ್ರೇನ್ನಿಂದ ವಾಪಸಾದ ದಕ್ಷಿಣ ಕನ್ನಡದ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಭವಿಷ್ಯದ ಕುರಿತು ಚಿಂತಿತರಾಗಿದ್ದು, ಈ ಕುರಿತು ರಾಜ್ಯ ಸರ್ಕಾರ ಶೀಘ್ರಾತಿ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.
ಉಕ್ರೇನ್ನ ಮಧ್ಯ ಪೂರ್ವ ಭಾಗದಲ್ಲಿರುವ ಝಪೊರೊಜಿಯೆ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ 4 ನೇ ವರ್ಷದ ವಿದ್ಯಾರ್ಥಿಯಾಗಿರುವ ಬಿಕರ್ನಕಟ್ಟೆ ನಿವಾಸಿ ಪೃಥ್ವಿರಾಜ್ ಅವರು ಮಾತನಾಡಿ, ನಮ್ಮ ವಿಶ್ವವಿದ್ಯಾನಿಲಯವು ಏಪ್ರಿಲ್ 1 ರಿಂದ ಪೂರ್ಣ ಪ್ರಮಾಣದ ಆನ್ಲೈನ್ ತರಗತಿಗಳನ್ನು ಪ್ರಾರಂಭಿಸುತ್ತದೆ ಎಂದು ತಿಳಿಸಿದೆ. ಸರ್ಕಾರವು ನಿರ್ಧಾರ ತೆಗೆದುಕೊಳ್ಳುವವರೆಗೆ ಇಲ್ಲಿಯೇ ಶಿಕ್ಷಣ ಮುಂದುವರೆಸಲು ನಿರ್ಧರಿಸಿದ್ದೇನೆ. ಕೋಲ್ಕತ್ತಾದವರನ್ನು ಹೊರತುಪಡಿಸಿ ಭಾರತೀಯ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇದೀಗ ನಾವು ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಪ್ರಸ್ತುತ ದಿನಕ್ಕೆ ಒಂದೊಂದು ಥಿಯರಿ ಹಾಗೂ ಒಂದು ಉಪನ್ಯಾಸ ನಡೆಯುತ್ತಿದೆ. ಕ್ರಮೇಣ, ಪೂರ್ಣ ದಿನದ ಆನ್ಲೈನ್ ತರಗತಿಗಳು ಪ್ರಾರಂಭವಾಗುತ್ತವೆ ಎಂಬ ಭರವಸೆಗಳೂ ಇದೆ. ಶೇ.30ರಷ್ಟು ಅಧ್ಯಾಪಕರು ಮಾತ್ರ ಆನ್ಲೈನ್ನಲ್ಲಿ ಬೋಧಿಸುತ್ತಿದ್ದಾರೆ ಮತ್ತು ಉಳಿದವರು ಉಕ್ರೇನ್ನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉಕ್ರೇನ್ ವೈದ್ಯಕೀಯ ವಿಶ್ವವಿದ್ಯಾಲಯಗಳಿಂದ ಆನ್ಲೈನ್ ತರಗತಿ ಪ್ರಾರಂಭ: ಭಾರತೀಯ ವಿದ್ಯಾರ್ಥಿಗಳು ನಿರಾಳ
ಉಕ್ರೇನ್ನಲ್ಲಿ ಪರಿಸ್ಥಿತಿ ಹದಗೆಟ್ಟಿದ್ದೇ ಆದರೆ, ನಮ್ಮ ಬಳಿ ಪ್ಲಾನ್ ಬಿ ಇದೆ. ಜರ್ಮನಿ ಅಥವಾ ಹಂಗೇರಿಯಂತಹ ಇತರ ಯುರೋಪಿಯನ್ ದೇಶಗಳಿಗೆ ಹೋಗಲು ಚಿಂತನೆ ನಡೆಸಿದ್ದೇವೆ. ಉಚಿತ ಶುಲ್ಕದೊಂದಿಗೆ ಶಿಕ್ಷಣ ನೀಡಲು ಅಲ್ಲಿನ ಸರ್ಕಾರ ಸಿದ್ಧವಿದೆ. 8ನೇ ಸೆಮಿಸ್ಟರ್'ಗೆ ಹಣ ನೀಡಿ ಬೇರೆ ರಾಷ್ಟ್ರದಲ್ಲಿ ನನ್ನ ಶಿಕ್ಷಣ ಮುಂದುವರೆಸುತ್ತೇನೆಂದು ತಿಳಿಸಿದ್ದಾರೆ.
ಟ್ಯೂಷನ್, ವಸತಿ ಹಾಗೂ ಊಟದ ವೆಚ್ಚ ಸೇರಿ ಒಟ್ಟು ರೂ.4 ಲಕ್ಷವಾಗಬಹುದು. ಉಕ್ರೇನ್ ನಿಂದ ಭಾರತಕ್ಕೆ ವಾಪಸ್ಸಾಗುವಾಗಲೇ ಹಂಗೇರಿ ಕುರಿತು ಮಾಹಿತಿ ತಿಳಿಸಿಕೊಂಡಿದ್ದೆವು. ಸುರಕ್ಷತೆಯ ಉಸ್ತುವಾರಿ ವಹಿಸಿರುವ ಹಂಗೇರಿಯನ್ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದರು. ಆಸಕ್ತಿಯಿದ್ದರೆ ಇಮೇಲ್ ಮಾಡುವಂತೆ ತಮ್ಮ ಇಮೇಲ್ ವಿಳಾಸಗಳ ನೀಡಿದ್ದರು ಎಂದು ಹೇಳಿದ್ದಾರೆ.
ಮತ್ತೋರ್ವ ವಿದ್ಯಾರ್ಥಿ ಕ್ಲೇಟನ್ ಓಸ್ಮಂಡ್ ಡಿಸೋಜಾ ಮಾತನಾಡಿ, ಮಾರ್ಚ್ 14 ರಂದು ಆನ್ಲೈನ್ ತರಗತಿಗಳು ಪ್ರಾರಂಭವಾಗಿದ್ದು, ಸೋಮವಾರ ವಿದ್ಯಾರ್ಥಿಗಳೊಂದಿಗೆ ಬೊಮ್ಮಾಯಿ ಅವರ ಸಭೆ ನಡೆಸಿದ ಬಳಿಕ ಮುಂದಿನ ನಿರ್ಧಾರಗಳ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್ ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಬಂದಿದ್ದು ಒಂದು ಪವಾಡವೇ ಸರಿ: ವಿದ್ಯಾರ್ಥಿಗಳ ಅನುಭವದ ಮಾತು!
ಖಾರ್ಕಿವ್ನಲ್ಲಿ ಓದುತ್ತಿದ್ದ ಅನೈನಾ ಅನ್ನಾ ಅವರು ಮಾತನಾಡಿ, ನನ್ನ ತಾಯಿ ಸಂಧ್ಯಾ ನನ್ನ ವಿದ್ಯಾರ್ಹತೆಗಾಗಿ ಸಾಕಷ್ಟು ಸಾಲ ಮಾಡಿದ್ದಾರೆ. ನಮ್ಮ ಸಮಸ್ಯೆಗೆ ಸರ್ಕಾರ ಪರಿಹಾರ ನೀಡುವ ಭರವಸೆ ನಮಗಿದೆ. ಇದು ಕೇವಲ 100 ವಿದ್ಯಾರ್ಥಿಗಳ ಭವಿಷ್ಯವಷ್ಟೇ ಅಲ್ಲ. ಮುಂದಿನ ಪೀಳಿಗೆಯ ಭವಿಷ್ಯವಾಗಿದೆ ಎಂದು ಹೇಳಿದ್ದಾರೆ.