ವ್ಯಾಪಾರ ಧರ್ಮ ಯುದ್ಧಕ್ಕೆ ತಿರುಗಿದ ಹಿಜಾಬ್ ವಿವಾದ, ಕರಾವಳಿ, ಮಲೆನಾಡುಗಳಲ್ಲಿ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ!
ಹಿಜಾಬ್ ವಿವಾದದ (Hijab row) ಕಿಡಿ ಈಗ ಮತ್ತೊಂದು ರೂಪಕ್ಕೆ ತಿರುಗಿದೆ. ಕರಾವಳಿ, ಮಲೆನಾಡು ಭಾಗಗಳಲ್ಲಿ ಈಗ ದೇವಸ್ಥಾನಗಳ ಜಾತ್ರೆ, ರಥೋತ್ಸವ ಸಮಯ. ಇದು ಧರ್ಮ-ಧರ್ಮಗಳ ಮಧ್ಯೆ ವ್ಯಾಪಾರ ಧರ್ಮ ಯುದ್ಧಕ್ಕೆ ತಿರುಗಿದೆ.
Published: 23rd March 2022 10:03 AM | Last Updated: 23rd March 2022 01:49 PM | A+A A-

ಬಪ್ಪನಾಡು ಕ್ಷೇತ್ರ
ಮಂಗಳೂರು/ಶಿವಮೊಗ್ಗ: ಹಿಜಾಬ್ ವಿವಾದದ (Hijab row) ಕಿಡಿ ಈಗ ಮತ್ತೊಂದು ರೂಪಕ್ಕೆ ತಿರುಗಿದೆ. ಕರಾವಳಿ, ಮಲೆನಾಡು ಭಾಗಗಳಲ್ಲಿ ಈಗ ದೇವಸ್ಥಾನಗಳ ಜಾತ್ರೆ, ರಥೋತ್ಸವ ಸಮಯ. ಇದು ಧರ್ಮ-ಧರ್ಮಗಳ ಮಧ್ಯೆ ವ್ಯಾಪಾರ ಧರ್ಮ ಯುದ್ಧಕ್ಕೆ ತಿರುಗಿದೆ.
ದೇವಸ್ಥಾನದ ಜಾತ್ರೆ, ಉತ್ಸವಗಳಲ್ಲಿ ಸಂತೆ, ವ್ಯಾಪಾರ ನಡೆಯುವುದು ಸಾಮಾನ್ಯ, ಆದರೆ ಇಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಮಳಿಗೆ, ಅಂಗಡಿಯಿಡುವುದಕ್ಕೆ, ಸಂತೆ ಮಾಡುವುದಕ್ಕೆ ನಿರ್ಬಂಧ ಹೇರಲಾಗುತ್ತಿದೆ. ಮುಸ್ಲಿಂ ವ್ಯಾಪಾರಿಗಳಿಗೆ (Muslim small traders) ವ್ಯಾಪಾರಕ್ಕೆ ನಿಷೇಧ ಎಂದು ಹಲವು ದೇವಸ್ಥಾನಗಳ ಜಾತ್ರೆಯ ಹೊರಗೆ ಗದ್ದೆಗಳಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಇದು ಮುಸ್ಲಿಂ ವ್ಯಾಪಾರಿಗಳ, ಮುಸ್ಲಿಂ ಮುಖಂಡರ, ರಾಜಕೀಯ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುಣ್ಯ ಪ್ರಸಿದ್ಧ ದೇವಸ್ಥಾನ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ (Durga Parameshwari Temple) ಜಾತ್ರೋತ್ಸವ ದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ (Muslim Traders) ವ್ಯಾಪಾರ ನಿಷೇಧ ಭಾರೀ ವಿವಾದವನ್ನು ಪಡೆದಿದೆ. ಮಾರ್ಚ್ 17 ರಿಂದ ಆರಂಭವಾದ ಜಾತ್ರೋತ್ಸವ ಇದೇ 25ರವರೆಗೆ ನಡೆಯುತ್ತಿದೆ. ಮಾರ್ಚ್ 23 ರಂದು ಹಗಲು ರಥೋತ್ಸವ ನಡೆದರೆ, ಮಾರ್ಚ್ 24ರಂದು ರಾತ್ರಿ ರಥೋತ್ಸವ ನಡೆಯಲಿದೆ. ಮಾರ್ಚ್ 25 ರಂದು ದುರ್ಗಾಪರಮೇಶ್ವರಿಯ ಶಯನ ಮಹೋತ್ಸವ (Shayana Mahotsava) ನಡೆಯಲಿದೆ. ಈ ಮೂರು ದಿನದಲ್ಲಿ ಬಪ್ಪನಾಡು ಕ್ಷೇತ್ರದಲ್ಲಿ ಕೋಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಒಂದು ಕೋಟಿ ರೂಪಾಯಿಗೂ ಅಧಿಕ ಮಲ್ಲಿಗೆ ಹೂವು ಮಾರಾಟವಾಗುತ್ತದೆ. ಈ ಮಲ್ಲಿಗೆ ಹೂವಿನ ಮಾರಾಟವನ್ನು ಮುಸ್ಲಿಮರೇ ಮಾಡುತ್ತಿದ್ದು, ಈ ಬಾರಿ ಮಾತ್ರ ಮುಸ್ಲಿಮರಿಗೆ ಅವಕಾಶ ನಿರಾಕರಿಸಲಾಗಿದೆ.
ಇದನ್ನೂ ಓದಿ: ಮಾರಿಕಾಂಬ ಜಾತ್ರೆ: ಅನ್ಯಕೋಮಿನವರಿಗೆ ಮಳಿಗೆ ನೀಡದ್ದಕ್ಕೆ ವಿವಾದ, ಆರೋಪ ನಿರಾಕರಿಸಿದ ಅಧಿಕಾರಿಗಳು
ನಿರ್ಬಂಧಕ್ಕೆ ಕಾರಣವೇನು: ಮುಸ್ಲಿಂ ಹೆಣ್ಣು ಮಕ್ಕಳು ಶಾಲೆ-ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಹೋಗಬಾರದು, ಸಮವಸ್ತ್ರದಲ್ಲಿಯೇ ಹೋಗಬೇಕು ಎಂದು ಹೈಕೋರ್ಟ್ ಹಿಜಾಬ್ ಕುರಿತು ತೀರ್ಪು ನೀಡಿದ್ದು ಮುಸ್ಲಿಂ ಸಂಘಟನೆಗಳಿಗೆ ಆಕ್ರೋಶ, ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿತು. ಹೈಕೋರ್ಟ್ ತೀರ್ಪು ನೀಡಿದ ಮರುದಿನ ಮುಸ್ಲಿಂ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದರು. ಹಿಜಾಬ್ ವಿಚಾರವಾಗಿ ಅಂಗಡಿ ಬಂದ್ ಮಾಡಿದ ಮುಸ್ಲಿಂ ವ್ಯಾಪಾರಿಗಳಿಗೆ ಸೆಡ್ಡು ಹೊಡೆಯಲು ಹಿಂದೂ ಸಂಘಟನೆಗಳು ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೋತ್ಸವದಲ್ಲಿ ಅವಕಾಶ ನೀಡಬಾರದೆಂದು ಒತ್ತಾಯ ಮಾಡಿದ್ದಾರೆ.
ಬಪ್ಪನಾಡು ಕ್ಷೇತ್ರ 800 ವರ್ಷಗಳ ಹಿಂದೆ ಬಪ್ಪ ಬ್ಯಾರಿ ಎಂಬ ಮುಸ್ಲಿಂ ವ್ಯಾಪಾರಿ ಕಟ್ಟಿಸಿದ ಇತಿಹಾಸವಿದೆ. ಇಂದು ಈ ದೇವಾಲಯ ಸುತ್ತಮುತ್ತ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗಿದೆ. 80 ನೊಂದಾಯಿತ ವ್ಯಾಪಾರಿಗಳ ಪೈಕಿ 40 ವ್ಯಾಪಾರಿಗಳು ಹಿಂದಿರುಗಿದ್ದಾರೆ. ಕೆಲವರು ಮಾತ್ರ ವ್ಯಾಪಾರ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ತೀರ್ಪು: ನ್ಯಾಯಮೂರ್ತಿಗೆ ಬೆದರಿಕೆ ಹಾಕಿದವರ ವಿರುದ್ಧ ಎಫ್ಐಆರ್
ಶಿವಮೊಗ್ಗದಲ್ಲಿರುವ ಪ್ರಸಿದ್ಧ ಕೋಟೆ ಮಾರಿಕಾಂಬ ಜಾತ್ರೆಯಲ್ಲಿಯೂ ಮುಸ್ಲಿಮ್ ವ್ಯಾಪಾರಿಗಳ ಅಂಗಡಿಗೆ ನಿರ್ಬಂಧ ವಿಧಿಸಲಾಗಿದೆ. ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವಂತೆ ಮುಸ್ಲಿಂ ವ್ಯಾಪಾರಿಗಳು ಮನವಿ ಮಾಡಿದ್ದಾರೆ. ಆದರೆ ಇತ್ತೀಚೆಗೆ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯ ನಂತರ ಸೇಡು ತೀರಿಸಿಕೊಳ್ಳಲು ಹಿಂದೂಪರ ಸಂಘಟನೆ ಕಾರ್ಯಕರ್ತರು ಮುಸ್ಲಿಂಮರಿಗೆ ವ್ಯಾಪಾರ ನಡೆಸಲು ಅವಕಾಶ ನೀಡಬಾರದೆಂದು ಕೇಳುತ್ತಿದ್ದಾರೆ.
ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಬೆಂಗಳೂರು ಪಕ್ಕ ನೆಲಮಂಗಲಕ್ಕೂ ತಲುಪಿದೆ. ನೆಲಮಂಗಲದ ದೇವಸ್ಥಾನ ಜಾತ್ರೆಯಲ್ಲಿ ಮಳಿಗೆ ಹಾಕಲು ಮುಸ್ಲಿಮರಿಗೆ ಅವಕಾಶ ನಿರಾಕರಿಸಲಾಗಿದೆ.
ಸಿದ್ದರಾಮಯ್ಯ ಖಂಡನೆ: ಹಿಂದೂ ಧಾರ್ಮಿಕ ಸಮಾರಂಭಗಳಲ್ಲಿ ಮುಸ್ಲಿಂ ವರ್ತಕರ ಅಂಗಡಿ-ಮುಂಗಟ್ಟುಗಳಿಗೆ ಅವಕಾಶ ನೀಡದಿರಲು ಕೆಲವು ಹಿಂದೂ ಸಂಘಟನೆಗಳು ಒತ್ತಡ ಹೇರುತ್ತಿರುವುದು ಕಳವಳಕಾರಿ ಬೆಳವಣಿಗೆ. ಇಂತಹವರ ವಿರುದ್ಧ ಕ್ರಮಕೈಗೊಳ್ಳಬೇಕಾಗಿರುವ ಜಿಲ್ಲಾಡಳಿತ ಮೌನವಾಗಿದ್ದು ಪರೋಕ್ಷ ಬೆಂಬಲ ನೀಡುತ್ತಿರುವುದು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.