ಬಾಲ್ಯ ವಿವಾಹ: ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಕರ್ನಾಟಕ; 2020-21ರಲ್ಲಿ 296 ಕೇಸುಗಳು ದಾಖಲು!
2020-21 ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಶಾಲೆಗಳು ಇಲ್ಲದಿದ್ದ ಸಮಯದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಾಲ್ಯ ವಿವಾಹ ಹೆಚ್ಚಾಗಿರುವ ಪ್ರಕರಣಗಳು ವರದಿಯಾಗಿದೆ.
Published: 23rd March 2022 02:03 PM | Last Updated: 23rd March 2022 02:40 PM | A+A A-

ಸಾಂಕೇತಿಕ ಚಿತ್ರ
ಬೆಂಗಳೂರು: 2020-21 ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಶಾಲೆಗಳು ಇಲ್ಲದಿದ್ದ ಸಮಯದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಾಲ್ಯ ವಿವಾಹ ಹೆಚ್ಚಾಗಿರುವ ಪ್ರಕರಣಗಳು ವರದಿಯಾಗಿದೆ.
ವಿಧಾನ ಪರಿಷತ್ ಕಲಾಪದಲ್ಲಿ ವಿರೋಧ ಪಕ್ಷದ ಉಪ ನಾಯಕ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್, 2020-21ರಲ್ಲಿ ರಾಜ್ಯದಲ್ಲಿ 296 ಬಾಲ್ಯ ವಿವಾಹಗಳು ವರದಿಯಾಗಿವೆ. 2019-20ರಲ್ಲಿ ಈ ಸಂಖ್ಯೆ 140 ಇದ್ದಿತ್ತು. 2018-19ರಲ್ಲಿ ರಾಜ್ಯದಲ್ಲಿ 119 ಬಾಲ್ಯ ವಿವಾಹ ಕೇಸುಗಳು ದಾಖಲಾಗಿದ್ದವು. ಅದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಸಚಿವರ ಉತ್ತರದಿಂದ ತಿಳಿದುಬಂದಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ಪ್ರಕಾರ, 2020 ರಲ್ಲಿ 184 ಪ್ರಕರಣ ದಾಖಲಾಗುವ ಮೂಲಕ ಕರ್ನಾಟಕವು ಬಾಲ್ಯ ವಿವಾಹಗಳಲ್ಲಿ ಭಾರತದ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಸಚಿವರು ಹೇಳಿದರು. ಬಡತನ, ಅನಕ್ಷರತೆ, ಮೂಢನಂಬಿಕೆ, ಬಾಲ್ಯವಿವಾಹಕ್ಕೆ ಸಂಬಂಧಿಸಿದ ಕಾನೂನುಗಳ ಬಗ್ಗೆ ತಿಳುವಳಿಕೆ ಕೊರತೆ, ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ, ಹಿರಿಯರ ಸಾಂಪ್ರದಾಯಿಕ ಆಶಯಗಳು ಸಂಖ್ಯೆ ಹೆಚ್ಚಳಕ್ಕೆ ಕಾರಣಗಳು ಎಂದು ಸಚಿವರು ಹೇಳಿದರು.. ಅನಿಷ್ಟ ಪದ್ಧತಿ ನಿರ್ಮೂಲನೆಗೆ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೂಡ ಹೇಳಿದರು.
ಇದನ್ನೂ ಓದಿ: ದಾವಣಗೆರೆ: 5ನೇ ತರಗತಿ ಬಾಲಕಿಯ ಬಾಲ್ಯ ವಿವಾಹ ಮಾಡಲು ಮುಂದಾಗಿದ್ದ ಪೋಷಕರು, ಶಿಕ್ಷಕರಿಂದ ರಕ್ಷಣೆ
ಇನ್ನು ಸರ್ಕಾರ ಬಿಡುಗಡೆ ಮಾಡಿರುವ ದಾಖಲೆಗೆ ಚೈಲ್ಡ್ ರೈಟ್ಸ್ ಟ್ರಸ್ಟ್ ನ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮ ಎನ್ ವಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರದ ದಾಖಲೆ ಸಂಖ್ಯೆಯಷ್ಟೆ, ವಾಸ್ತವವಾಗಿ ಬಾಲ್ಯ ವಿವಾಹ ಸಂಖ್ಯೆಗಳು ಇನ್ನಷ್ಟು ಹೆಚ್ಚಾಗಿರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿಗಳಲ್ಲಿ ಗರ್ಭಿಣಿಯರ ವಯಸ್ಸನ್ನು ಸರ್ಕಾರ ಸರಿಯಾಗಿ ದಾಖಲೆ ಮಾಡಿಕೊಂಡರೆ ಬಾಲ್ಯವಿವಾಹಗಳ ಸಂಖ್ಯೆ ನಿರ್ದಿಷ್ಟವಾಗಿ ಸಿಗುತ್ತದೆ. ಸರ್ಕಾರವು ಗರ್ಭಿಣಿಯರಿಗೆ ತಾಯಿ ಕಾರ್ಡ್ಗಳನ್ನು ನೀಡುತ್ತದೆ, ಆದರೆ ಹೆಚ್ಚಿನ ಕಾರ್ಡ್ಗಳಲ್ಲಿ ಗರ್ಭಿಣಿಯರ ವಯಸ್ಸನ್ನು ಸರಿಯಾಗಿ ನಮೂದಿಸುವುದಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ನಿಜವಾದ ವಯಸ್ಸನ್ನು ದಾಖಲಿಸಿದರೆ, ಬಾಲ್ಯವಿವಾಹ ಪ್ರಕರಣಗಳ ನೈಜ ಸಂಖ್ಯೆ ತಿಳಿಯುತ್ತದೆ ಎಂದು ವಾಸುದೇವ ಶರ್ಮ ಹೇಳುತ್ತಾರೆ.
ಪ್ರೌಢಶಾಲೆಗಳು ಮತ್ತು ಪಿಯು ಕಾಲೇಜುಗಳಿಂದ ಹೊರಗುಳಿಯುವ ಹೆಣ್ಣುಮಕ್ಕಳ ಸಂಖ್ಯೆಯ ಮೇಲೆ ನಿಗಾ ಇಡುವುದರಿಂದ ಬಾಲ್ಯ ವಿವಾಹಗಳನ್ನು ತಡೆಯಬಹುದು ಎಂದು ಅವರು ಹೇಳುತ್ತಾರೆ.