ತಂದೆ-ಮಗಳ ಸಾವು; ಕಸದ ಲಾರಿ ಹರಿದು ಬಾಲಕಿ ಸಾವು: ತಲಾ 10 ಲಕ್ಷ ರೂ ಪರಿಹಾರ ಘೋಷಣೆ
ಬೆಂಗಳೂರಿನ ಮಂಗನಹಳ್ಳಿ ಬಳಿ ಟ್ರಾನ್ಸ್‌ಫಾರ್ಮರ್ ಸಿಡಿದು ಮೃತಪಟ್ಟ ತಂದೆ ಮಗಳ ಕುಟುಂಬಕ್ಕೆ ತಲಾ 10 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಇಂಧನ ಸಚಿವ ವಿ. ಸುನೀಲ್‌ಕುಮಾರ್ ಘೋಷಣೆ ಮಾಡಿದ್ದಾರೆ.
Published: 24th March 2022 06:01 PM | Last Updated: 24th March 2022 06:01 PM | A+A A-

ಮೃತರಿಗೆ ಪರಿಹಾರ ಘೋಷಣೆ ಮಾಡಿದ ಸರ್ಕಾರ
ಬೆಂಗಳೂರು: ಬೆಂಗಳೂರಿನ ಮಂಗನಹಳ್ಳಿ ಬಳಿ ಟ್ರಾನ್ಸ್‌ಫಾರ್ಮರ್ ಸಿಡಿದು ಮೃತಪಟ್ಟ ತಂದೆ ಮಗಳ ಕುಟುಂಬಕ್ಕೆ ತಲಾ 10 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಇಂಧನ ಸಚಿವ ವಿ. ಸುನೀಲ್‌ಕುಮಾರ್ ಘೋಷಣೆ ಮಾಡಿದ್ದಾರೆ.
ಇಂದು ವಿಧಾನಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, 'ಮಂಗನಹಳ್ಳಿ ಬಳಿ ಟ್ರಾನ್ಸ್‌ಫಾರ್ಮರ್ ಸಿಡಿದು ತಂದೆ-ಮಗಳು ಮೃತಪಟ್ಟಿರುವ ಘಟನೆ ವಿಷಾಧನೀಯ. ಇಲ್ಲಿ 250 ಕೆವಿ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್‌ನ ಲೀಡ್ ವೈರ್ ಸುಟ್ಟು ಆಯಿಲ್ ಸೋರಿಕೆಯಾಗಿ ಟ್ರಾನ್ಸ್‌ಫಾರ್ಮರ್ ಸಿಡಿದಿದೆ. ಈ ಘಟನೆ ನಿನ್ನೆ ಮಧ್ಯಾಹ್ನ 3.10ರಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ರಾತ್ರಿ ಶಿವರಾಜ್ ಮೃತಪಟ್ಟಿದ್ದರು. ಮಧ್ಯರಾತ್ರಿ ಮಗಳು ಚೈತನ್ಯ ಮೃತಪಟ್ಟಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ಇಬ್ಬರಿಗೂ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದರು.
ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧವೂ ಕ್ರಮ: ಸಚಿವರ ಭರವಸೆ
ಈ ಟ್ರಾನ್ಸ್‌ಫಾರ್ಮರ್‌ನಲ್ಲಿ ತೊಂದರೆ ಇರುವ ಬಗ್ಗೆ ಮಧ್ಯಾಹ್ನ 12.50 ಕ್ಕೆ ದೂರು ಬಂದಿದೆ. 3.10ರವರೆಗೂ ದೂರನ್ನು ಆಧರಿಸಿ ಟ್ರಾನ್ಸ್‌ಫಾರ್ಮರ್ ಸರಿ ಮಾಡದ ಅಧಿಕಾರಿಗಳ ವಿರುದ್ಧವೂ ವರದಿ ತರಿಸಿಕೊಂಡು, ಅಧಿಕಾರಿಗಳು ತಪ್ಪೆಸಗಿದ್ದರೆ ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬೈಕ್ ಗೆ ಖಾಸಗಿ ಬಸ್ ಡಿಕ್ಕಿ: ಒಂದೇ ಕುಟುಂಬದ ನಾಲ್ವರ ದುರ್ಮರಣ
ಈ ಘಟನೆ ಬೆನ್ನಲ್ಲೆ ಅಪಾಯದ ಸ್ಥಿತಿಯಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳ ಆಡಿಟ್‌ಗೆ ಸೂಚನೆ ನೀಡಿದ್ದೇನೆ. ರಾಣೆಬೆನ್ನೂರಿನಲ್ಲಿ ವಿದ್ಯುತ್ ವೈರ್‌ನಿಂದ ಬೆಂಕಿಯಾಗಿ ಎತ್ತುಗಳು ಮೃತಪಟ್ಟಿರುವ ಬಗ್ಗೆ ವರದಿ ತರಿಸಿಕೊಂಡು ಪರಿಹಾರ ನೀಡುವುದಾಗಿಯೂ ಅವರು ಹೇಳಿದರು.
ಇದಕ್ಕೂ ಮೊದಲು ಶೂನ್ಯ ವೇಳೆಯಲ್ಲಿ ಬೆಂಗಳೂರಿನ ಟ್ರಾನ್ಸ್‌ಫಾರ್ಮರ್ ದುರಂತದ ಬಗ್ಗೆ ಬಿಜೆಪಿಯ ಸುರೇಶ್ ಕುಮಾರ್ ಅವರು ವಿಷಯ ಪ್ರಸ್ತಾಪಿಸಿ, ಮದುವೆ, ನಿಶ್ಚಿತಾರ್ಥವಾಗಿ ಛತ್ರವನ್ನು ಫಿಕ್ಸ್ ಮಾಡಿ ತಂದೆ ಮಗಳು ಸ್ಕೂಟರ್‌ನಲ್ಲಿ ಬರುತ್ತಿದ್ದಾಗ ಈ ದುರಂದ ಸಂಭವಿಸಿದೆ. ಮದುವೆ ಮಂಟಪದಿಂದ ಮಸಣಕ್ಕೆ ಹೋಗುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಬೆಸ್ಕಾಂ, ಬಿಬಿಎಂಪಿಗಳು ಇಂತಹ ಅವಘಡಗಳಿಂದ ಅಮಾಯಕರು ಬಲಿಯಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದರು. ಹಾಗೆಯೇ ರಾಣೆಬೆನ್ನೂರಿನಲ್ಲಿ ಬೆಂಕಿ ಅನಾಹುತದಲ್ಲಿ ರಾಸುಗಳು ಮೃತಪಟ್ಟಿರುವುದಕ್ಕೆ ಪರಿಹಾರ ನೀಡುವಂತೆ ಬಿಜೆಪಿಯ ವಿರೂಪಾಕ್ಷಪ್ಪ ಬಳ್ಳಾರಿ ಸಚಿವರನ್ನು ಒತ್ತಾಯಿಸಿದ್ದರು.
ಇದನ್ನೂ ಓದಿ: ಬೆಂಗಳೂರು: ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಫೋಟದಿಂದಾಗಿ ತಂದೆ ಸಾವು; ಮಗಳ ಸ್ಥಿತಿ ಗಂಭೀರ!
ಬಿಬಿಎಂಪಿ ಕಸದ ಲಾರಿ ಹರಿದು ದುರಂತ.. ಮೃತ ಬಾಲಕಿ ಅಕ್ಷಯಾ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿದ ಬಿಬಿಎಂಪಿ
ಮತ್ತೊಂದು ಘಟನೆಯಲ್ಲಿ ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮೃತ ಅಕ್ಷಯಾ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಹಣವನ್ನು ನೀಡಲಾಗಿದೆ. ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಶಾಸಕ ಭೈರತಿ ಸುರೇಶ್, ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್ ವಾಜೀದ್ ಸೇರಿದಂತೆ ಪ್ರಮುಖರು 10 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರಿಸಿದರು. ಮಾರ್ಚ್ 21ರಂದು ಹೆಬ್ಬಾಳದ ಬಳಿ ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಅಕ್ಷಯಾ ಮೃತಪಟ್ಟಿದ್ದಳು. ಹೀಗಾಗಿ, ಇಂದು ಅಕ್ಷಯಾ ಕುಟುಂಬಸ್ಥರಿಗೆ ಬಿಬಿಎಂಪಿ ಐದು ಲಕ್ಷ, ಶಾಸಕ ಬೈರತಿ ಸುರೇಶ್ ಮೂರು ಲಕ್ಷ ಹಾಗೂ ಲಾರಿ ಮಾಲೀಕ 2 ಲಕ್ಷ ಸೇರಿದಂತೆ ಒಟ್ಟು 10 ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದರು.
ಇದನ್ನೂ ಓದಿ: ಬಾಗಲಕೋಟೆ: ಉರುಸ್ ವೇಳೆ ಆಹಾರ ಸೇವಿಸಿ 22 ಮಕ್ಕಳು ಸೇರಿದಂತೆ 48 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಈ ಕುರಿತು ಶಾಸಕ ಬೈರತಿ ಸುರೇಶ್ ಪ್ರತಿಕ್ರಿಯಿಸಿ, ವಿದ್ಯಾರ್ಥಿನಿ ಅಕ್ಷಯಾ ಅಪಘಾತಕ್ಕೆ ಸಂಬಂಧಿಸಿದಂತೆ ನಿನ್ನೆ ಆಯುಕ್ತರು ಮನೆಗೆ ಭೇಟಿ ನೀಡಿ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಆದರೆ, ಅಕ್ಷಯಾ ಅವರದ್ದು ಬಡ ಕುಟುಂಬವಾಗಿದ್ದು, ಮತ್ತಷ್ಟು ಸಹಾಯದ ಅವಶ್ಯಕತೆ ಅವರಿಗೆ ಇದೆ. ಇಂದು ಮತ್ತೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್ ಜೈನ್ ಹಾಗೂ ಜಂಟಿ ಆಯುಕ್ತೆ ಶಿಲ್ಪ ಅವರು ಕುಟುಂಬದೊಂದಿಗೆ ಚರ್ಚಿಸಿ 10 ಲಕ್ಷ ಪರಿಹಾರ ನೀಡಿದ್ದಾರೆ. ಜೊತೆಗೆ ಇಬ್ಬರು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಲಾಗುವುದು. ಬಿಬಿಎಂಪಿ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ನೀಡಲಾಗುವುದು ಎಂದು ಅಭಯ ನೀಡಿದರು. ಈ ಸಂದರ್ಭದಲ್ಲಿ ಮೃತ ಬಾಲಕಿಯ ಪೋಷಕರಾದ ನರಸಿಂಹ ಮೂರ್ತಿ ಹಾಗೂ ಗೀತಾ ಉಪಸ್ಥಿತರಿದ್ದರು.