ಚಿತ್ರದುರ್ಗದಲ್ಲಿ ಬೈಕ್ ಗೆ ಖಾಸಗಿ ಬಸ್ ಡಿಕ್ಕಿ: ಒಂದೇ ಕುಟುಂಬದ ನಾಲ್ವರ ದುರ್ಮರಣ
ಖಾಸಗಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
Published: 24th March 2022 09:19 AM | Last Updated: 24th March 2022 01:48 PM | A+A A-

ಸಾಂದರ್ಭಿಕ ಚಿತ್ರ
ಚಿತ್ರದುರ್ಗ: ಖಾಸಗಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಬಳಿ ದುರ್ಗಾಂಬಾ ಎಂಬ ಖಾಸಗಿ ಬಸ್ ಗೆ ಬೈಕ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಮೃತರನ್ನು ನಾಗರಾಜ (46), ಶೈಲಜಾ (43), ಸಂತೋಷ (16), ವಿರೇಶ (13) ವರ್ಷ ಎಂದು ಗುರುತಿಸಲಾಗಿದೆ.
ಮೃತರೆಲ್ಲರೂ ಬರಮಣ್ಣನಕಾಯಕ ದುರ್ಗಾ ನಿವಾಸಿಗಳಾಗಿದ್ದು, ಚನ್ನಗಿರಿ ತಾಲ್ಲೂಕಿನ ಹೆಬ್ಬಳಗೆರೆ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ವಾಪಸ್ ಬರುವಾಗ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಬಳಿ ಬುಧವಾರ ರಾತ್ರಿ 10 ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ದುರ್ಘಟನೆಯಲ್ಲಿ ತಂದೆ-ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪತ್ನಿಯ ಕತ್ತು ಸೀಳಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿ
ಮೃತರು ಚನ್ನಗಿರಿ ಕಡೆಯಿಂದ ಬಿ. ದುರ್ಗಾ ಕಡೆ ಒಂದೇ ಬೈಕ್ ನಲ್ಲಿ ಬರುತ್ತಿರುವಾಗ ಎದುರಿಗೆ ಬಂದ ದುರ್ಗಾಂಬಾ ಬಸ್ ಡಿಕ್ಕಿಯಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಹೊಳಲ್ಕೆರೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಳಲ್ಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.