
ಫಣೀಂದ್ರ
ಬೆಂಗಳೂರು: ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೆಎನ್ ಫಣೀಂದ್ರ ಅವರನ್ನು ಉಪ ಲೋಕಾಯುಕ್ತರಾಗಿ ನೇಮಕ ಮಾಡಲಾಗಿದೆ. ನ್ಯಾಯಮೂರ್ತಿ ಎನ್ ಆನಂದ ಅವರ ಅವಧಿ ಡಿಸೆಂಬರ್ 2020 ರಂದು ಕೊನೆಗೊಂಡ ನಂತರ ಈ ಹುದ್ದೆಯು ತೆರವಾಗಿತ್ತು.
ಆನಂದ್ ಅವರ ನಿವೃತ್ತಿಯಿಂದ ತೆರವಾಗಿದ್ದ ಕರ್ನಾಟಕದ ಉಪ ಲೋಕಾಯುಕ್ತ ಹುದ್ದೆಗೆ ನ್ಯಾ. ಕೆಎನ್ ಫಣೀಂದ್ರ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಈ ಕುರಿತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತದಲ್ಲಿ ಓರ್ವ ಲೋಕಾಯುಕ್ತ ಮತ್ತು ಇಬ್ಬರು ಉಪ ಲೋಕಾಯುಕ್ತರ ಹುದ್ದೆಗಳಿವೆ. ಉಪ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್ ಆನಂದ ಅವರು ಐದು ವರ್ಷಗಳ ಸೇವಾವಧಿ ಪೂರ್ಣಗೊಳಿಸಿ 2020ರ ಡಿಸೆಂಬರ್ನಲ್ಲಿ ನಿವೃತ್ತರಾಗಿದ್ದರು.
ಕರ್ನಾಟಕದ ಉಪ ಲೋಕಾಯುಕ್ತರಾಗಿ ನೇಮಕವಾಗಿರುವ ಕೆಎನ್ ಫಣೀಂದ್ರ ಅವರು 1958 ಮಾರ್ಚ್ 20 ರಂದು ಜನಿಸಿದ್ದು, 1985ರಲ್ಲಿ ತುಮಕೂರು ಜಿಲ್ಲಾ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯದಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದರು. ಬಳಿಕ 1998ರಲ್ಲಿ ನ್ಯಾಯಾಧೀಶರಾಗಿ ನೇಮಕವಾದ ಅವರು, ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಅದಾದ ಬಳಿಕ ಹಾವೇರಿ ಬೆಳಗಾವಿ, ಉಡುಪಿಯಲ್ಲಿ ಪ್ರಮುಖ ಜಿಲ್ಲಾ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದಾರೆ.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಕಾರ್ಯದರ್ಶಿಯಾಗಿಯೂ ಫಣೀಂದ್ರ ಅವರು ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು ಮಿಡಿಯೇಷನ್ ಕೇಂದ್ರದ ನಿರ್ದೇಶಕರಾಗಿ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 2013ರ ಅಕ್ಟೋಬರ್ನಲ್ಲಿ ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕವಾದ ಕೆಎನ್ ಫಣೀಂದ್ರ 2016ರ ಮಾರ್ಚ್ನಲ್ಲಿ ಪೂರ್ಣಾವಧಿ ನ್ಯಾಯಾಧೀಶರಾಗಿ ನೇಮಕವಾದರು. ಮೇ 2020 ರಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತರಾದರು.