
ಸಿಎಂ ಬೊಮ್ಮಾಯಿ
ಬೆಂಗಳೂರು: ಜಲವಿದ್ಯುತ್ ಯೋಜನೆಗಳಲ್ಲಿ ಸೌರಶಕ್ತಿ ಬಳಸಲು ಸಂಶೋಧನೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬುಧವಾರ ಹೇಳಿದ್ದಾರೆ.
ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ಸಭಾಭವನದಲ್ಲಿ ಪ್ರೊ|| ಸಿಎನ್ಆರ್ ರಾವ್ ಅವರಿಗೆ ಪ್ರತಿಷ್ಠಿತ ಎನಿ ಎನರ್ಜಿ ಪ್ರಶಸ್ತಿ 2020 ಪ್ರದಾನ ಮಾಡಿದ ಬಳಿಕ ಮುಖ್ಯಮಂತ್ರಿಗಳು ಮಾತನಾಡಿದರು.
ಅಪ್ರತಿಮ ಸಾಧಕರಾದ ಸಿಎನ್ ಆರ್ ರಾವ್ ಅವರದು ನಿಸ್ವಾರ್ಥ ಸೇವೆ. ಮನುಷ್ಯನ ಭವಿಷ್ಯದ ಜನಾಂಗಕ್ಕೆ ತಮ್ಮ ಜೀವನವನ್ನೇ ಮುಡುಪಿಟ್ಟಿದ್ದಾರೆ. ತಮ್ಮ ವಯಸ್ಸನ್ನು ಮಿತಿಯಾಗಿಸಿಕೊಳ್ಳದೇ ಕಠಿಣ ಸವಾಲುಗಳನ್ನು ಎದುರಿಸಿದವರು. ಶಕ್ತಿಯ ಕೇಂದ್ರವಾಗಿರುವ ಶ್ರೀಯುತರು ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ಪರಿಪೂರ್ಣ ಸಂಯೋಜನೆಯಾಗಿದ್ದಾರೆ.
ಇದನ್ನೂ ಓದಿ: ಹಿಂದೂಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿ ಚುನಾವಣೆ: ಸಿಎಂ ಬೊಮ್ಮಾಯಿ
ವಿಜ್ಞಾನದಲ್ಲಿ ಸಂಶೋಧನೆ ನಿರಂತರ. ಮೂಲಭೂತ ವಿಜ್ಞಾನ ಅನ್ವಯಿಕ ವಿಜ್ಞಾನಕ್ಕೆ ಆಧಾರವಾಗಿದೆ. ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ಸಭಾಭವನದಲ್ಲಿ ಮೂಲಭೂತ ವಿಜ್ಞಾನದ ಮೇಲೆ ಸಂಶೋಧನೆಗಳು ಹೆಚ್ಚು ಒತ್ತನ್ನು ನೀಡಲಾಗುತ್ತಿದೆ. ಯುವ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಮನುಕುಲದ ಜೀವನಮಟ್ಟವನ್ನು ಉತ್ತಮಗೊಳಿಸಲು ಅವರ ಮಾರ್ಗದರ್ಶನವನ್ನು ಬಳಸಬೇಕು ಎಂದು ಹೇಳಿದರು.
ಈಗಿನ ಕಾಲಮಾನದಲ್ಲಿ ನವೀಕೃತ ಇಂಧನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ. ಪರಿಸರಸ್ನೇಹಿಯಾದ, ಪ್ರಕೃತಿಯಲ್ಲಿ ಹೇರಳವಾಗಿ ಕಡಿಮೆ ವೆಚ್ಚದಲ್ಲಿ ಪಡೆಯಬಹುದಾಗಿದೆ. ನವೀಕೃತ ಇಂಧನವನ್ನು ವಿವಿಧ ಮಾದರಿಯಲ್ಲಿ ಬಳಕೆಗೆ ದೊರೆಯುವಂತೆ ಮಾಡುವುದು ಒಂದು ಸವಾಲಾಗಿದೆ. ಸೌರಶಕ್ತಿ, ಪವನಶಕ್ತಿ ಸೇರಿದಂತೆ ಯಾವುದೇ ರೀತಿಯ ನವೀಕೃತ ಇಂಧನಗಳ ಸಂಗ್ರಹ ಸವಾಲಾಗಿ ಪರಿಣಮಿಸಿದೆ. ಜಲವಿದ್ಯುತ್ ಯೋಜನೆಗಳಲ್ಲಿ ಸೌರಶಕ್ತಿಯನ್ನು ಬಳಸಲು ಸಂಶೋಧನೆಗೆ ಸರ್ಕಾರ ಪ್ರಾಮುಖ್ಯತೆ ನೀಡುತ್ತಿದೆ ಎಂದು ತಿಳಿಸಿದರು.