
ಕರ್ನಾಟಕ ವಿಧಾನಸಭೆ
ಬೆಂಗಳೂರು: ರಾಜ್ಯಕ್ಕೆ ಬರಬೇಕಾದ ಕೇಂದ್ರದ ತೆರಿಗೆ ಹಾಗೂ ಸಹಾಯಾನುದಾನ ಕಡಿಮೆಯಾಗಿರುವ ಬಗ್ಗೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ.
ಜತೆಗೆ, 2004-05ರಿಂದ ರಾಜಸ್ವ ಹೆಚ್ಚುವರಿಯನ್ನು ದಾಖಲಿಸಿದ ರಾಜ್ಯವು 2020-21ರಲ್ಲಿ ಮೊದಲ ಬಾರಿಗೆ ರಾಜಸ್ವ ಕೊರತೆ ಕಂಡಿರುವ ಬಗ್ಗೆಯೂ ಉಲ್ಲೇಖಿಸಲಾಗಿದೆ.
ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಾಯಿ ಪರವಾಗಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಾಮಿ ಅವರು ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರ ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿದರು.
ಈ ವರದಿಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ 2020-21ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ತನ್ನ ರಾಜಸ್ವ ಸ್ವೀಕೃತಿಯಲ್ಲಿ ಶೇ.10.67ರಷ್ಟು ಇಳಿಕೆಯನ್ನು ದಾಖಲಿಸಿರುವುದು ತಿಳಿಸಲಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕೇಂದ್ರ ತೆರಿಗೆಗಳು ಮತ್ತು ಸುಂಕಗಳಲ್ಲಿನ ರಾಜ್ಯದ ಪಾಲು ಮತ್ತು ಕೇಂದ್ರ ಸರ್ಕಾರದಿಂದ ಸಹಾಯಾನುದಾನವು ಕ್ರಮವಾಗಿ ಶೇ.29.84 ಮತ್ತು ಶೇ.12.77ರಷ್ಟು ಕಡಿಮೆಯಾಗಿದೆ.
ರಾಜ್ಯದ ತೆರಿಗೆ ರಾಜಸ್ವದ ಅನುಪಾತವು 2016-17ರಲ್ಲಿದ್ದ ಶೇ.6.87ರಿಂದ 2020-21ರಲ್ಲಿ ಶೇ.5.38ಕ್ಕೆ ಇಳಿಕೆಯಾಗಿದೆ. ಹಿಂದಿನ ವರ್ಷಕ್ಕೆೆ ಹೋಲಿಸಿದರೆ 2020-21ನೇ ಸಾಲಿನಲ್ಲಿ ರಾಜ್ಯದ ಸ್ವಂತ ತೆರಿಗೆ ರಾಜಸ್ವವು 5.311 ಕೋಟಿ ರೂ. ಕಡಿಮೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
2020-21ರ ಅಂತ್ಯದ ವೇಳೆಗೆ ಒಟ್ಟು 3,628 ಕೋಟಿ ರು. ಮೊತ್ತವನ್ನು ಅಪೂರ್ಣ ಯೋಜನೆಗಳಲ್ಲಿ ತೊಡಗಿಸಲಾಗಿದೆ. ರಾಜ್ಯ ಸರ್ಕಾರವು ಅಪೂರ್ಣ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮಾರ್ಗಸೂಚಿಗಳನ್ನು ರೂಪಿಸಬೇಕು. ರಾಜ್ಯ ಸರ್ಕಾರವು ಭಾರಿ ನಷ್ಟವನ್ನು ಅನುಭವಿಸುತ್ತಿಿರುವ ರಾಜ್ಯ ಸಾರ್ವಜನಿಕ ವಲಯದ ಉದ್ಯಮಗಳ ಕೆಲಸವನ್ನು ಪರಿಶೀಲಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬಳಕೆಯಾಗದೆ ಉಳಿದಿರುವ ಅನುದಾನವು ಪೋಲಾಗದಂತೆ ತಪ್ಪಿಸಲು ಎಲ್ಲಾ ಇಲಾಖೆಗಳಲ್ಲಿ ಅನುದಾನದ ನಿಯಂತ್ರಣವನ್ನು ಬಲಪಡಿಸಬೇಕು. 2012-13ರಿಂದ ಆಗಿರುವ ಹೆಚ್ಚುವರಿ ವೆಚ್ವವನ್ನು ಕ್ರಮಬದ್ಧಗೊಳಿಸಲು ಆದ್ಯತೆ ನೀಡಬೇಕು. ಆರ್ಥಿಕ ಸಂಹಿತೆಯ ನಿಬಂಧನೆಗಳಿಗೆ ಅನುಗುಣವಾಗಿ ಪುನರ್ವಿನಿಯೋಗ ಆದೇಶಗಳನ್ನು ನೀಡಬೇಕು ಎಂದು ತಿಳಿಸಿದೆ.