
ಕೆ.ಸುಧಾಕರ್
ಬೆಂಗಳೂರು: ರಾಜ್ಯದಲ್ಲಿನ ಆ್ಯಂಬುಲೆನ್ಸ್ ಸೇವೆ ಬಗ್ಗೆ ಸದನದಲ್ಲಿ ಕಾಂಗ್ರೆಸ್ ಶಾಸಕರು ಕೇಳಿದ ಪ್ರಶ್ನೆಗೆ ಆರೋಗ್ಯ ಸಚಿವ ಕೆ. ಸುಧಾಕರ್ ಉತ್ತರಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ 108 ಆಂಬ್ಯುಲೆನ್ಸ್ ಸೇವೆ ಸಮರ್ಪಕವಾಗಿ ವಿಫಲವಾಗುತ್ತಿದೆ ಎಂದು ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ ಪ್ರಸ್ತಾಪಿಸಿದಾಗ ಉತ್ತರಿಸಿದ ಡಾ.ಸುಧಾಕರ್ ಆ್ಯಂಬುಲೆನ್ಸ್ ಪೂರೈಕೆಗೆ ಎಂಒಯುಗೆ ಸಹಿ ಮಾಡಿದ ಅಂದಿನ ಸರ್ಕಾರವನ್ನು ದೂಷಿಸಿದರು.
2007-08ನೇ ಸಾಲಿನಲ್ಲಿ ಆ್ಯಂಬುಲೆನ್ಸ್ ಸೇವೆಯನ್ನು ಜಿವಿಕೆ ಸಂಸ್ಥೆಗೆ 10 ವರ್ಷಗಳ ಅವಧಿಗೆ ನೀಡಲಾಗಿತ್ತು. ಆರಂಭದಲ್ಲಿ ಅವರ ಸೇವೆ ಒಳ್ಳೆಯದಿತ್ತು. ಅನಂತರ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. 2017ರಲ್ಲಿ ಆಗಿನ ಸರ್ಕಾರ ಜಿವಿಕೆಯೊಂದಿಗಿನ ಒಪ್ಪಂದ ರದ್ದು ಮಾಡಿಸಿತ್ತು.
ಆ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಇಲ್ಲಿಯವರೆಗೂ ಮುಂದುವರೆಸಲಾಗಿದೆ. ಆ್ಯಂಬುಲೆನ್ಸ್ ಸೇವೆಯಲ್ಲಿ ವಿಳಂಬವಾಗಿರುವುದು ನಿಜ. ಆ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 71 ಆರೋಗ್ಯ ಕವಚ 108 ಆ್ಯಂಬುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿವೆ.
ಮುಂದಿನ ಸೇವಾದಾರರು ಆಯ್ಕೆಯಾಗುವವರೆಗೂ ಆ್ಯಂಬುಲೆನ್ಸ್ ನ ಮೇಲ್ವಿಚಾರಣೆಯನ್ನು ಜಿಪಿಎಸ್ ಟ್ರಾಕಿಂಗ್ ದತ್ತಾಂಶಗಳ ಪರಿಶೀಲನೆ ಹಾಗೂ ಕ್ಷೇತ್ರ ಭೇಟಿ ಮೂಲಕ ಮಾಡಲಾಗುತ್ತಿದೆ ಎಂದರು. ತುರ್ತು ಆ್ಯಂಬುಲೆನ್ಸ್ ಸೇವೆಗೆ ಹೊಸ ಯೋಜನೆ ರೂಪಿಸಲಾಗುತ್ತಿದ್ದು, ಇದು ದೇಶಕ್ಕೆ ಮಾದರಿಯಾಗಲಿದೆ ಎಂದು ಸಚಿವ ಕೆ.ಸುಧಾಕರ್ ವಿಧಾನಸಭೆಗೆ ತಿಳಿಸಿದರು.
750 ಆಂಬ್ಯುಲೆನ್ಸ್ ನೀಡಬೇಕಿದ್ದ ಏಜೆನ್ಸಿ ಬಳಿ ತೋರಿಸಲು 500 ಮಾತ್ರ ಇದೆ. "ಹೊಸ ಟೆಂಡರ್ ಕರೆಯಲಾಗುವುದು ಮತ್ತು ನಾವು ಹೆಚ್ಚುವರಿ 500 ಆಂಬ್ಯುಲೆನ್ಸ್ಗಳನ್ನು ಪಡೆಯುತ್ತೇವೆ, ಇದರಿಂದ ಸಮಸ್ಯೆಯನ್ನು ಪರಿಹರವಾಗುವುದು ಎಂದು ತಿಳಿಸಿದ್ದಾರೆ.