ಕೆಐಎಡಿಬಿ ಕಾಯ್ದೆ ತಿದ್ದುಪಡಿಯಿಂದ ರೈತರ ಭೂ ಪರಿಹಾರ ಸರಳೀಕರಣ- ಸಚಿವ ನಿರಾಣಿ
ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಇನ್ಮುಂದೆ ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ನೀಡುವ ರೈತರಿಗೆ ಪರಿಹಾರ ನೀಡಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ತಿಳಿಸಿದ್ದಾರೆ.
Published: 25th March 2022 03:34 PM | Last Updated: 25th March 2022 03:34 PM | A+A A-

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ
ಬೆಂಗಳೂರು: ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಇನ್ಮುಂದೆ ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ನೀಡುವ ರೈತರಿಗೆ ಪರಿಹಾರ ನೀಡಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿಂದು ಶಾಸಕ ಎನ್.ಎ. ಹ್ಯಾರಿಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಾಯ್ದೆಗಳು ಪ್ರತ್ಯೇಕವಾಗಿದ್ದವು. ಇತ್ತೀಚಿಗೆ ಹಾಲಿ ಇದ್ದ ಕೆಐಎಡಿಬಿ ಕಾಯ್ದೆಗೆ ಉಭಯ ಸದನಗಳಲ್ಲಿ ತಿದ್ದುಪಡಿ ಮಾಡಿರುವುದರಿಂದ ರೈತರಿಗೆ ತೊಂದರೆಯಾಗದಂತೆ ಪರಿಹಾರ ನೀಡಲಾಗುವುದು ಎಂದು ಹೇಳಿದರು. ಹೊಸ ಭೂ ಸ್ವಾಧೀನ ಕಾಯ್ದೆ 2013ರ ಅನ್ವಯ ಭೂ ಪರಿಹಾರ ಒದಗಿಸುವ ಸಂಬಂಧ ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇನ್ನು ಮುಂದೆ ಸರ್ಕಾರ ಯಾವುದೇ ವಿಳಂಬವಾಗದಂತೆ ಪರಿಹಾರ ವಿತರಣೆ ಮಾಡಲಿದೆ ಎಂದರು.
ಕೆಐಎಡಿಬಿ ಕಾಯ್ದೆ ಕಲಂ 28/4 ಅಡಿ ಅಂತಿಮ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ದರ ನಿಗದಿಪಡಿಸುವ ಸಲುವಾಗಿ ಸಂಬಂಧಪಟ್ಟ ಜಿಲ್ಲಾಧಿಕಾರಿ, ಕೆಐಎಡಿಬಿಯ ವಿಶೇಷ ಅಧಿಕಾರಿ, ಭೂ ದರ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ಭೂ ಮಾಲೀಕರೊಂದಿಗೆ ಸಮಾಲೋಚಿಸಿ ಮಾರ್ಗಸೂಚಿ ದರವನ್ನು ನಿಗದಿಪಡಿಸುತ್ತಾರೆ ಎಂದು ನಿರಾಣಿ ಮಾಹಿತಿ ನೀಡಿದರು.
ಕೆಐಎಡಿಬಿ ವತಿಯಿಂದ ಭೂ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪಡೆಯುವ ಪರಿಹಾರ ಮೊತ್ತಕ್ಕೆ ಮೀರದ ಮೊತ್ತದಲ್ಲಿ ರೈತರು ಕೃಷಿ ಜಮೀನನ್ನು ಖರೀದಿಸಿದ ಸಂದರ್ಭದಲ್ಲಿ ಮುದ್ರಾಂಕ ಶುಲ್ಕ ಶೇ. 50 ರಷ್ಟು ರಿಯಾಯಿತಿ ಮತ್ತು ನೋಂದಣಿ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಜಮೀನುಗಳಿಗೆ ಪರಿಹಾರದ ಮೊತ್ತವನ್ನು ಸಂಬಂಧಪಟ್ಟ ಖಾತೆದಾರರು, ಹಿತಾಸಕ್ತಿದಾರರಿಗೆ ಆರ್ ಟಿ ಜಿಎಸ್ ಮುಖಾಂತರ ಭೂಮಾಲೀಕರ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುವುದು, ಇದರಿಂದ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ ಎಂದು ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದರು.