ಹಿಜಾಬ್ ಗೆ ನಿರ್ಬಂಧ: ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ; ಶಿಕ್ಷಣ ಇಲಾಖೆ ಸುತ್ತೋಲೆ!
ಸೋಮವಾರ ಮಾ. 28 ರಿಂದ ಆರಂಭವಾಗುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಧರಿಸಿಯೇ ಪರೀಕ್ಷೆ ಬರೆಯಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
Published: 26th March 2022 05:33 PM | Last Updated: 26th March 2022 07:06 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಮಾ. 28 ಸೋಮವಾರದಿಂದ ಆರಂಭವಾಗುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಧರಿಸಿಯೇ ಪರೀಕ್ಷೆ ಬರೆಯಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಈ ಸುತ್ತೋಲೆಯಿಂದ ವಿದ್ಯಾರ್ಥಿಗಳು ಹಿಜಾಬ್ ಸೇರಿದಂತೆ ಯಾವುದೇ ವಸ್ತ್ರಗಳನ್ನು ಧರಿಸುವಂತಿಲ್ಲ. ಶಾಲಾ ಸಮವಸ್ತ್ರ ಧರಿಸಿಯೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆಯುವುದು ಕಡ್ಡಾಯ. ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ವಿ. ಶ್ರೀನಿವಾಸ್ ಮೂರ್ತಿಯವರು ಸುತ್ತೋಲೆ ಹೊರಡಿಸಿದ್ದು. ಮಾ. 28 ರಿಂದ ಏ. 11ರವರೆಗೂ ನಡೆಯುವ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳು ಸರ್ಕಾರದ ಆದೇಶದನ್ವಯ ಸಮವಸ್ತ್ರ ಧರಿಸಿ ಪರೀಕ್ಷೆ ಬರೆಯಬೇಕು. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸರ್ಕಾರ ನಿಗದಿಪಡಿಸಿರುವ ಶಾಲಾ ಸಮವಸ್ತ್ರ ಮತ್ತು ಖಾಸಗಿ (ಅನುದಾನ / ಅನುದಾನರಹಿತ) ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಆಯಾ ಶಾಲಾ ಆಡಳಿತ ಮಂಡಳಿಗಳು ನಿಗದಿಪಡಿಸಿರುವ ಸಮವಸ್ತ್ರವನ್ನು ಧರಿಸುವುದು ಕಡ್ಡಾಯ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ರಾಜ್ಯ ಹೈಕೋರ್ಟ್ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದು ತೀರ್ಪು ನೀಡಿರುವುದರಿಂದ ಎಲ್ಲ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೇ ಪರೀಕ್ಷೆ ಬರೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಗೆ ಪ್ರವೇಶ ಪತ್ರದೊಂದಿಗೆ ಸಮವಸ್ರ್ತ ಧರಿಸಿ ಹಾಜರಾಗಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ: ಸಾಗರ ಜಾತ್ರೆಯಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ಮಳಿಗೆ ನೀಡಬೇಡಿ: ವಿಎಚ್ಪಿ ಒತ್ತಾಯ
ಹಿಜಾಬ್ಗೆ ಅವಕಾಶವಿಲ್ಲ
ರಾಜ್ಯದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಈಗಾಗಲೇ ಹಿಜಾಬ್ ಧರಿಸಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದರು. ಈಗ ಈ ಸಂಬಂಧ ಅಧಿಕೃತವಾಗಿ ಸುತ್ತೋಲೆಯನ್ನೂ ಹೊರಡಿಸಲಾಗಿದ್ದು, ಹಿಜಾಬ್ ಸೇರಿದಂತೆ ಯಾವುದೇ ರೀತಿಯ ವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ರಾಜ್ಯದಲ್ಲಿ ಹಿಜಾಬ್ ವಿವಾದ ಭುಗಿಲೆದ್ದು ಹೈಕೋರ್ಟ್ನ ಮಧ್ಯಂತರ ಆದೇಶ ಹೊರ ಬಿದ್ದ ಸಂದರ್ಭದಲ್ಲಿ ನಡೆದಿದ್ದ ಪ್ರಾಯೋಗಿಕ ಪರೀಕ್ಷೆಗೆ ಹಿಜಾಬ್ ಧರಿಸಿ ಹಾಜರಾಗಲು ಅವಕಾಶ ನೀಡದ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗೂ ಹಾಜರಾಗಿರಲಿಲ್ಲ. ಇವರಿಗೆ ಮರು ಪರೀಕ್ಷೆಗೆ ಅವಕಾಶ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದ್ದರೂ ಸರ್ಕಾರ ಅದಕ್ಕೆ ಒಪ್ಪಿರಲಿಲ್ಲ.
ಇದನ್ನೂ ಓದಿ: ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ: ರಾಜ್ಯದಲ್ಲಿ ಕೋಮುವಾದ ಬಿತ್ತುವ ಯತ್ನ ಎಂದ ಬೆಂಗಳೂರಿನ ಬೀದಿ ವ್ಯಾಪಾರಿಗಳು
ಹೈಕೋರ್ಟ್ ತೀರ್ಪಿನ ನಂತರ ರಾಜ್ಯ ಸರ್ಕಾರ ಸಮವಸ್ತ್ರ ಧರಿಸಿ ಬರುವವರಿಗೆ ಮಾತ್ರ ಶಾಲೆ ಪ್ರವೇಶಾವಕಾಶ ನಿಯಮವನ್ನು ಬಿಗಿಯಾಗಿ ಪಾಲನೆ ಮಾಡಿತ್ತು. ಈಗ ಎಸ್ಎಸ್ಎಲ್ಸಿ ಪರೀಕ್ಷೆಗಳಿಗೂ ಸಮವಸ್ರ್ತ ನಿಯಮ ಅನ್ಬಯವಾಗಿದೆ. ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಉಡುಪಿಯ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ತುರ್ತು ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ರಮಣ ನೇತೃತ್ವದ ನ್ಯಾಯಪೀಠ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಪಾಲನೆ ಮಾಡಬೇಕಾಗಿದೆ.