ಹಿಜಾಬ್ ನಿಷೇಧ: ಬಳ್ಳಾರಿಯಲ್ಲಿ 10 ವಿದ್ಯಾರ್ಥಿನಿಯರು ಎಸ್ಎಸ್ಎಲ್ಸಿ ಪರೀಕ್ಷೆಗೆ ಗೈರು
ಶಾಲಾ-ಕಾಲೇಜ್ ಗಳಲ್ಲಿ ಹಿಜಾಬ್ ನಿಷೇಧಿಸಿದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಬಳ್ಳಾರಿ-ಈಸ್ಟ್ ಬ್ಲಾಕ್ನಲ್ಲಿ 10 ವಿದ್ಯಾರ್ಥಿನಿಯರು ಸೋಮವಾರ ಎಸ್ಎಸ್ಎಲ್ಸಿ ಪರೀಕ್ಷೆಯ ಪ್ರಥಮ ಭಾಷೆಯ ಪತ್ರಿಕೆಗೆ ಗೈರುಹಾಜರಾಗಿದ್ದರು..
Published: 28th March 2022 06:24 PM | Last Updated: 28th March 2022 06:24 PM | A+A A-

ಸಾಂದರ್ಭಿಕ ಚಿತ್ರ
ಬಳ್ಳಾರಿ: ಶಾಲಾ-ಕಾಲೇಜ್ ಗಳಲ್ಲಿ ಹಿಜಾಬ್ ನಿಷೇಧಿಸಿದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಬಳ್ಳಾರಿ-ಈಸ್ಟ್ ಬ್ಲಾಕ್ನಲ್ಲಿ 10 ವಿದ್ಯಾರ್ಥಿನಿಯರು ಸೋಮವಾರ ಎಸ್ಎಸ್ಎಲ್ಸಿ ಪರೀಕ್ಷೆಯ ಪ್ರಥಮ ಭಾಷೆಯ ಪತ್ರಿಕೆಗೆ ಗೈರುಹಾಜರಾಗಿದ್ದರು ಎಂದು ಅಧಿಕೃತ ಮೂಲಗಳು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿವೆ.
ಪರೀಕ್ಷೆಯ ಮೊದಲ ದಿನದವಾದ ಇಂದು ಈ 10 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಳ್ಳಾರಿ-ಪೂರ್ವ ಬ್ಲಾಕ್ನಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ್ದರು. ಆದರೆ ಹಿಜಾಬ್ ಧರಿಸಿದರೆ ಪರೀಕ್ಷಾ ಕೇಂದ್ರಕ್ಕೆ ಬಿಡುವುದಿಲ್ಲ ಎಂದು ಅಧಿಕಾರಿಗಳು ಅವರಿಗೆ ಹೇಳಿದ್ದಾರೆ. ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು ವಾಪಸ್ ತಮ್ಮ ಮನೆಗೆ ತೆರೆಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: ಎಸ್ಎಸ್ಎಲ್ಸಿ ಪರೀಕ್ಷೆ: ಚಿಕ್ಕೋಡಿಯಲ್ಲಿ ಓರ್ವ ಯುವತಿ ಸೇರಿದಂತೆ 6 ನಕಲಿ ಅಭ್ಯರ್ಥಿಗಳ ಬಂಧನ
ಬಳ್ಳಾರಿ-ಪೂರ್ವ ಬ್ಲಾಕ್ ಹೊರತುಪಡಿಸಿ, ಕಲ್ಯಾಣ ಕರ್ನಾಟಕ ಪ್ರದೇಶದ ಉಳಿದ 5 ಜಿಲ್ಲೆಗಳಲ್ಲಿ ಯಾವುದೇ ಘಟನೆಗಳು ವರದಿಯಾಗಿಲ್ಲ.
ಒಟ್ಟು 197750 ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪೈಕಿ 187946 ವಿದ್ಯಾರ್ಥಿಗಳು ಇಂದು ಪರೀಕ್ಷೆಗೆ ಹಾಜರಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 9804 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.