ಎಲ್ಲ ಎಸ್ಕಾಂಗಳಲ್ಲೂ ಕವಿಕಾ ನಿರ್ಮಿತ ಟ್ರಾನ್ಸ್‌ಫಾರ್ಮರ್ ಖರೀದಿಗೆ ರಾಜ್ಯ ಸರ್ಕಾರ ನಿರ್ದೇಶನ
ರಾಜ್ಯದ ಎಲ್ಲ ಎಸ್ಕಾಂಗಳಲ್ಲೂ ಕರ್ನಾಟಕ ವಿದ್ಯುತ್ ಕಾರ್ಖಾನೆ(ಕವಿಕಾ) ನಿರ್ಮಿತ ಪರಿವರ್ತಕಗಳ ಖರೀದಿಗೆ ನಿರ್ದೇಶನ ನೀಡಲಾಗುವುದು. ಆ ಮೂಲಕ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಬಲವರ್ಧನೆಗೆ ಕೈಜೋಡಿಸಲು ಇಲಾಖೆ ನಿರ್ಧರಿಸಿದೆ...
Published: 30th March 2022 04:16 PM | Last Updated: 30th March 2022 06:17 PM | A+A A-

ನವವಿನ್ಯಾಸದ ಟ್ರಾನ್ಸ್‌ಫಾರ್ಮರ್ ಬಿಡುಗಡೆಗೊಳಿಸಿದ ಸುನೀಲ್ ಕುಮಾರ್
ಬೆಂಗಳೂರು: ರಾಜ್ಯದ ಎಲ್ಲ ಎಸ್ಕಾಂಗಳಲ್ಲೂ ಕರ್ನಾಟಕ ವಿದ್ಯುತ್ ಕಾರ್ಖಾನೆ(ಕವಿಕಾ) ನಿರ್ಮಿತ ಟ್ರಾನ್ಸ್‌ಫಾರ್ಮರ್ ಖರೀದಿಗೆ ನಿರ್ದೇಶನ ನೀಡಲಾಗುವುದು. ಆ ಮೂಲಕ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಬಲವರ್ಧನೆಗೆ ಕೈಜೋಡಿಸಲು ಇಲಾಖೆ ನಿರ್ಧರಿಸಿದೆ ಎಂದು ಇಂಧನ, ಕನ್ನಡ- ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರು ಬುಧವಾರ ಹೇಳಿದ್ದಾರೆ.
ಮೈಸೂರು ರಸ್ತೆಯಲ್ಲಿರುವ ಕರ್ನಾಟಕ ವಿದ್ಯುತ್ ಕಾರ್ಖಾನೆ(ಕವಿಕಾ)ಗೆ ಭೇಟಿ ನೀಡಿ, ದಕ್ಷತೆ ಹಾಗೂ ನವವಿನ್ಯಾಸದ ಟ್ರಾನ್ಸ್‌ಫಾರ್ಮರ್ ಬಿಡುಗಡೆಗೊಳಿಸಿ ಮಾತನಾಡಿದ ಸಚಿವರು, ಮೈಸೂರು ಮಹಾರಾಜರ ಒತ್ತಾಸೆಯಿಂದ 1933ರಲ್ಲಿ ಸ್ಥಾಪನೆಗೊಂಡ ಕವಿಕಾ ಇಡಿ ಏಷ್ಯಾ ಖಂಡದಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಉತ್ಪಾದಿಸುವ ಮೊದಲ ಸಂಸ್ಥೆಯಾಗಿತ್ತು ಎಂಬುದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಸಂಗತಿ ಎಂದರು.
ಇದನ್ನು ಓದಿ: ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡು ಅಪ್ಪ-ಮಗಳು ಸಾವು: ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲು
ಇಂದಿಗೂ ಈ ಸಂಸ್ಥೆ ಲಾಭದಲ್ಲೇ ನಡೆಯುತ್ತಿರುವುದಕ್ಕೆ ಇಲ್ಲಿ ಶ್ರಮಿಸುತ್ತಿರುವ ಸಂಸ್ಥೆಯ ಪ್ರತಿಯೊಬ್ಬ ಸಿಬ್ಬಂದಿ ಶ್ಲಾಘನೆಗೆ ಅರ್ಹರು. ಕವಿಕಾ ನಿರ್ಮಿತ ಪರಿವರ್ತಕ(ಟ್ರಾನ್ಸ್‌ಫಾರ್ಮರ್)ಗಳ ಗುಣಮಟ್ಟ ಉತ್ತಮವಾಗಿದೆ. ವಾರ್ಷಿಕ 20,000 ಪರಿವರ್ತಕ ಉತ್ಪಾದನಾ ಸಾಮರ್ಥ್ಯವನ್ನು 50,000ಕ್ಕೆ ಹೆಚ್ಚಳ ಮಾಡುವ ಮೂಲಕ ಸಂಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಎಲ್ಲ ಎಸ್ಕಾಂ ವ್ಯಾಪ್ತಿಯಲ್ಲಿ ಕವಿಕಾ ಪರಿವರ್ತಜ ಖರೀದಿಗೆ ಒತ್ತು ನೀಡುವಂತೆ ನಿರ್ದೇಶನ ನೀಡಲಾಗುವುದು ಎಂದರು.
ಯಾವುದೇ ಸಂಸ್ಥೆ ನಿಂತ ನೀರಾಗಬಾರದು. ಕವಿಕಾ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಬೇಕು. ಕರಾವಳಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲೂ ಕಾರ್ಖಾನೆ ಆರಂಭಿಸುವ ಮೂಲಕ ಆರೋಗ್ಯಕರ ಸ್ಪರ್ಧೆಗೆ ಅಣಿಯಾಗಬೇಕು. ಇದಕ್ಕೆ ಹಂತ ಹಂತವಾಗಿ ಯೋಜನೆ ರೂಪಿಸಿ. ಅಗತ್ಯ ಅನುಮೋದನೆಯನ್ನು ಸರ್ಕಾರ ನೀಡುತ್ತದೆ ಎಂದು ಹೇಳಿದರು.
ಸಂಸ್ಥೆಯಲ್ಲಿ ಕಾರ್ಮಿಕರು ಹಾಗೂ ತಂತ್ರಜ್ಞರ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದೆ. ಮುಂದಿನ ನಾಲ್ಕೈದು ವರ್ಷದಲ್ಲಿ ಶೇ.80ರಷ್ಟು ಕಾರ್ಮಿಕರು ನಿವೃತ್ತಿಯಾಗಲಿದ್ದಾರೆ. ಹೀಗಾಗಿ ನೇರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ 25 ವರ್ಷದಲ್ಲಿ ಸಂಸ್ಥೆಯ ಪ್ರಗತಿ ಹೇಗಿರಬೇಕೆಂಬುದನ್ನು ನಿರ್ಧರಿಸಲು ಈಗಿನಿಂದಲೇ ನೀಲ-ನಕ್ಷೆ ರೂಪಿಸೋಣ ಎಂದು ತಿಳಿಸಿದರು.
ಕವಿಕಾ ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಉಡುಪಿ ಜಿಲ್ಲೆಯವರಾದ ಸುನೀಲ್ ಕುಮಾರ್ ಅವರು ಕವಿಕಾಕ್ಕೆ ಬಂದಿದ್ದು ಸುಧಾಮನ ಮನೆಗೆ ಶ್ರೀಕೃಷ್ಣ ಬಂದಂತಾಗಿದೆ. ಇದು ಸಂಸ್ಥೆಯ ಬೆಳವಣಿಗೆಯ ದಿಕ್ಸೂಚಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕವಿಕಾ ಅಧ್ಯಕ್ಷ ತಮ್ಮೇಶ್ ಗೌಡ, ಉಪಪ್ರಧಾನ ವ್ಯವಸ್ಥಾಪಕ ಶ್ರೀನಿವಾಸಯ್ಯ, ಕಾರ್ಮಿಕ ಸಂಘದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಚಿತ್ರಾ ಅವರು ಉಪಸ್ಥಿತರಿದ್ದರು.