
ಎನ್ ಡಬ್ಲ್ಯುಆರ್ ಟಿಸಿ
ಹುಬ್ಬಳ್ಳಿ: ಡೀಸೆಲ್ ಬೆಲೆ ಏರಿಕೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮೇಲಿದ್ದ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಬೃಹತ್ ಪ್ರಮಾಣದಲ್ಲಿ ಬಳಕೆ ಮಾಡುವವರಿಗೆ ಪ್ರತಿ ಲೀಟರ್ ಡೀಸೆಲ್ ದರ 20 ರೂಪಾಯಿಗಳಿಗಿಂತಲೂ ಏರಿಕೆ ಕಂಡಿದ್ದು, ಇತ್ತೀಚಿನ ದಿನಗಳಲ್ಲಿ ಎನ್ ಡಬ್ಲ್ಯುಕೆಆರ್ ಟಿಸಿ ಇಂಧನ ತುಂಬಿಸುವುದಕ್ಕೆ ಹುಬ್ಬಳ್ಳಿಯ ರೀಟೇಲ್ ಪಂಪ್ ಗಳ ಮೇಲೆ ಅವಲಂಬಿತವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್ ಗೆ 113.9 ಡಾಲರ್ ಆಗಿದ್ದು, ಭಾರತದಲ್ಲಿನ ತೈಲ ಕಂಪನಿಗಳು ನಿರಂತರವಾಗಿ ದರ ಪರಿಷ್ಕರಣೆ ಮಾಡುತ್ತಿವೆ. ತೈಲ ಕಂಪನಿಗಳು ಬೃಹತ್ ಬಳಕೆದಾರರಿಗೆ ಪ್ರತಿ ಲೀಟರ್ ಗೆ 20 ರೂಪಾಯಿ ದರ ಏರಿಕೆ ಮಾಡಿದ್ದು ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳಿಗೆ ಹೆಚ್ಚಿನ ಹೊರೆ ಉಂಟಾಗಿದೆ.
ಎನ್ ಡಬ್ಲ್ಯುಕೆಆರ್ ಟಿಸಿ ಈಗಾಗಲೇ ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್-19 ನಿಂದ ಒಂದಷ್ಟು ನಷ್ಟ ಎದುರಿಸಬೇಕಾಗಿ ಬಂದಿತ್ತು. ಈಗ ಬೆಲೆ ಏರಿಕೆಯಿಂದ ಇನ್ನಷ್ಟು ಹೈರಾಣಾಗುತ್ತಿದೆ. ಹುಬ್ಬಳ್ಳಿಯ ರೀಟೇಲ್ ಔಟ್ ಲೆಟ್ ಗಳಲ್ಲಿ ಪ್ರತಿ ಲೀಟರ್ ಡೀಸೆಲ್ ದರ (ಮಂಗಳವಾರದವರೆಗೆ) 87.09 ರೂಪಾಯಿಗಳಿದ್ದು, ಎನ್ ಡಬ್ಲ್ಯುಕೆಆರ್ ಟಿಸಿ ಡಿಪೋಗಳಿಗೆ 108 ರೂಪಾಯಿಗಳ ಲೆಕ್ಕದಲ್ಲಿ ಮಾರಾಟವಾಗುತ್ತಿದೆ. ಮೂಲಗಳ ಪ್ರಕಾರ ಸಾರಿಗೆ ಸಂಸ್ಥೆಗಳಿಗೆ ಅಗತ್ಯವಿರುವುದರ ಶೇ.80-90 ರಷ್ಟು ಪೂರೈಕೆ ಮಾತ್ರ ಆಗುತ್ತಿದ್ದು ಶೇ.10-20 ರಷ್ಟು ಪ್ರತಿ ನಿತ್ಯ ಕೊರತೆ ಉಂಟಾಗುತ್ತಿದೆ. ಆದ್ದರಿಂದ ಕೆಲವು ಬಸ್ ಗಳಿಗೆ ರೀಟೆಲ್ ಔಟ್ ಲೆಟ್ ಗಳಿಂದಲೇ ಇಂಧನ ತುಂಬಿಸುವಂತೆ ಸೂಚನೆ ನೀಡಲಾಗಿದೆ. 2013-14 ರಲ್ಲಿ ಬೆಲೆ ಏರಿಕೆಯ ಪರಿಣಾಮ ಇದೇ ಪರಿಸ್ಥಿತಿ ಉಂಟಾಗಿತ್ತು.