ಟಿಆರ್‌ಪಿಗಾಗಿ 'ಟಿವಿ ಮಾಧ್ಯಮಗಳಿಂದ ರಾಜ್ಯದಲ್ಲಿ ಅಶಾಂತಿ': ಸದನದಲ್ಲಿ ಎಚ್ ಡಿ ಕುಮಾರಸ್ವಾಮಿ ಆಕ್ರೋಶ

ಚುನಾವಣಾ ವ್ಯವಸ್ಥೆಗಳ ಮೇಲಿನ ಸುಧಾರಣೆಗೆ ಸಂಬಂಧಪಟ್ಟಂತೆ ಚರ್ಚೆ ವೇಳೆ ಇಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳ ಮೇಲೆ ಆಕ್ರೋಶ ಹೊರಹಾಕಿದರು.

Published: 30th March 2022 03:50 PM  |   Last Updated: 30th March 2022 03:50 PM   |  A+A-


ಎಚ್ ಡಿ ಕುಮಾರಸ್ವಾಮಿ

Online Desk

ವಿಧಾನಸಭೆ/ಬೆಂಗಳೂರು: ಚುನಾವಣಾ ವ್ಯವಸ್ಥೆಗಳ ಮೇಲಿನ ಸುಧಾರಣೆಗೆ ಸಂಬಂಧಪಟ್ಟಂತೆ ಚರ್ಚೆ ವೇಳೆ ಇಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳ ಮೇಲೆ ಆಕ್ರೋಶ ಹೊರಹಾಕಿದರು.

ಎಲ್ಲ ಟಿಆರ್‌ಪಿಗಾಗಿ:
ಟಿವಿ ಚಾನಲ್ ಗಳೇ ಓಪಿನಿಯನ್ ಮೇಕರ್ಸ್ ಆಗಿದ್ದಾರೆ. ದೂರು ಕೊಡೋದೂ ಅವರೇ, ಉತ್ತರ ಕೊಡೋದೂ ಅವರೇ, ತೀರ್ಪು ಕೊಡೋದೂ ಅವರೇ.. ಟಿವಿ ಮಾಧ್ಯಮಗಳಿಂದ ಅಶಾಂತಿ ಸೃಷ್ಟಿಯಾಗಿದ್ದು, ಟಿಆರ್‌ಪಿಗಾಗಿ ಬೇಡದ ವರದಿಗಳನ್ನು ತೋರಿಸ್ತಾರೆ. ಸಮವಸ್ತ್ರ ಹೆಸರಲ್ಲಿ ಇಂಥ ಅನಾಹುತ ಸೃಷ್ಟಿಗೆ ಮಾಧ್ಯಮಗಳೇ ಕಾರಣ. ಮಾಧ್ಯಮಗಳಿಂದ ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗಿದ್ದು, ಎರಡೂ ಸಮುದಾಯಗಳನ್ನು ಪ್ರಚೋದನೆ ಮಾಡಿ ಹೇಳಿಕೆ ಪಡೆಯುತ್ತಾರೆ ಎಂದು ಆರೋಪಿಸಿದರು.

ಶಾಂತಿಯ ರಾಜ್ಯದಲ್ಲಿ ಮಾಧ್ಯಮಗಳು ದೊಡ್ಡ ಬಿರುಕುಂಟು ಮಾಡಿದ್ದಾರೆ. ಟಿಆರ್‌ಪಿಗಾಗಿ, ಲಾಭಕ್ಕಾಗಿ ಸಮಾಜ ಒಡೆಯುತ್ತಿದ್ದಾರೆ. ಎಲ್ಲವನ್ನೂ ಜನಪ್ರತಿನಿಧಿಗಳ ಮೇಲೆ ದೂರುತ್ತಾರೆ. ಚುನಾವಣೆ ಪರಿಸ್ಥಿತಿ ಹದಗೆಡಲು ನಾವೇ ಕಾರಣ. ನಮ್ಮಿಂದಲೇ ತಪ್ಪು ಮಾಡ್ಕೊಂಡಿದ್ದೇವೆ. ಯಾರನ್ನೂ ದೂಷಿಸುವ ಅಗತ್ಯ ಇಲ್ಲ. ಹಿಂದೆಲ್ಲಾ ಅಭ್ಯರ್ಥಿಗಳಿಗೆ ಜನರೇ ಹಣ ಕೊಡ್ತಿದ್ರು. ಕೊನೆಯ ಎರಡು ದಿನ ಯಾವುದೇ ಪಕ್ಷದ ಅಭ್ಯರ್ಥಿಗಳು ಹಳ್ಳಿಗಳಿಗೆ ಬರದಂತೆ ರಸ್ತೆಗಳಲ್ಲಿ ದಿಮ್ಮಿಗಳನ್ನಿಡ್ತಿದ್ರು. ಆದ್ರೆ ಈಗ ಪರಿಸ್ಥಿತಿ ತುಂಬಾ ಬದಲಾಗಿದೆ ಎಂದು ಹೇಳಿದರು.

ಕಾಗೇರಿ ಬೆಂಬಲ:
ಈ ಮಧ್ಯೆ ಕುಮಾರಸ್ವಾಮಿ ಹೇಳಿಕೆಯನ್ನು ಸ್ಪೀಕರ್ ಕಾಗೇರಿ ಬೆಂಬಲಿಸಿದರು. “ಕುಮಾರಸ್ವಾಮಿ ಗಂಭೀರ ವಿಚಾರ ಪ್ರಸ್ತಾಪಿಸಿದ್ದಾರೆ. ಯಾರೂ ಇಷ್ಟು ಧೈರ್ಯವಾಗಿ ಈ ವಿಚಾರ ಪ್ರಸ್ತಾಪಿಸಿಲ್ಲ. ಅದಕ್ಕಾಗಿ ನಾನು ಅಭಿನಂದನೆ ತಿಳಿಸ್ತೇನೆ. ಟಿವಿಗಳಿಗೆ ಟಿಆರ್‌ಪಿಯೇ ಮುಖ್ಯ ಅಂದ ಸ್ಪೀಕರ್, ಇದನ್ನೆಲ್ಲ ಸರಿ ಮಾಡಬೇಕಾಗಿರೋದು ನಮ್ಮ ಜವಾಬ್ದಾರಿ” ಎಂದು ಎಚ್ ಡಿ ಕೆ ಮಾತಿಗೆ ಬೆಂಬಲಿಸಿದರು.

40 ಲಕ್ಷ ಸಾಲಲ್ಲ:
ಚುನಾವಣಾ ಆಯೋಗ ನಿಗದಿ ಮಾಡಿದ ಚುನಾವಣಾ ವೆಚ್ಚ ಸಾಲೋದಿಲ್ಲ ಎಂದು ಮಾತು ಮುಂದುವರಿಸಿದ ಕುಮಾರಸ್ವಾಮಿ, ವಿಧಾನಸಭೆ ಕ್ಷೇತ್ರದ ಚುನಾವಣೆ 40 ಲಕ್ಷದಲ್ಲಿ ನಡೆಸಲು ಆಗೋದಿಲ್ಲ. ನಾವೇ ನಂತರ ಲೆಕ್ಕ ಕೊಡ್ತೇವೆ. ಚುನಾವಣೆಯಲ್ಲಿ ನೂರಾರು ವಾಹನಗಳ ಬಳಕೆ ಮಾಡ್ತೇವೆ. ಆದ್ರೆ ನಾವು ಒಂದೆರಡು ವಾಹನ ಬಳಕೆ ಮಾಡಿರುವ ಲೆಕ್ಕ ಕೊಡ್ತೇವೆ. ಚುನಾವಣಾಧಿಕಾರಿ ಪ್ರಾಮಾಣಿಕವಾಗಿ ಶಿಕ್ಷೆ ಕೊಡಿಸೋಕ್ಕೆ ಆಗಲ್ಲ. ಇದಕ್ಕೆಲ್ಲ ಕಾನೂನಿನಲ್ಲಿ ತಿದ್ದುಪಡಿ ತಂದ್ರೂ ಈ ವ್ಯವಸ್ಥೆ ಸುಧಾರಣೆ ಆಗಲ್ಲ. ವ್ಯವಸ್ಥೆ ಸರಿಯಾಗಲು ಜನರೂ ಕೈ ಜೋಡಿಸಬೇಕು. ಅವ್ಯವಸ್ಥೆ ಹಂತಹಂತವಾಗಿ ನಾವೇ ತಂದಿದ್ದೇವೆ. ಮುಂದೆ ಹೇಗೆ ಸರಿಪಡಿಸಬೇಕು ಅಂತ ನಾವೇ ತೀರ್ಮಾನ ಮಾಡಬೇಕು ಎಂದರು.

ಅಲ್ಪಸಂಖ್ಯಾತರ ದುರ್ಬಳಕೆ:
ನಾನೂ ಹಲವಾರು ತಪ್ಪು ಮಾಡಿದ್ದೀನಿ ಎಂದು ಹೇಳಿದ ಮಾಜಿ ಸಿಎಂ, ಚುನಾವಣಾ ವ್ಯವಸ್ಥೆ ಹದಗೆಡುವಲ್ಲಿ ತಮ್ಮ ತಪ್ಪೂ ಇದೆ ಎಂದು ಒಪ್ಪಿಕೊಂಡರು. ವೋಟಿಗಾಗಿ ಅಲ್ಪಸಂಖ್ಯಾತರನ್ನಯ ದುರ್ಬಳಕೆ ಮಾಡಿದ್ದೇವೆ. ಈಗ ಅಲ್ಪಸಂಖ್ಯಾತರನ್ನು ಬೀದಿಗೆ ತಂದಿದ್ದೇವೆ. ಅಲ್ಪಸಂಖ್ಯಾತರ‌ ಪರ ಯಾರೂ ದನಿ ಎತ್ತದಂಥ ಪರಿಸ್ಥಿತಿ ಇದೆ. ಸಂವಿಧಾನಾತ್ಮಕ ವ್ಯವಸ್ಥೆ ಉಳಿಯಲು ಅವರ ಪರ ಯಾರಾದ್ರೂ ದನಿ ಎತ್ತಬೇಕಾಗಿದೆ ಎಂದು ಹೇಳಿದರು.

ಹಣ… ಹಣ… ಹಣ:
ಚುನಾವಣೆಯಲ್ಲಿ ಹಣ ಖರ್ಚು ವಿಚಾರವಾಗಿ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಯಲ್ಲಿ ಎಚ್ಡಿಕೆ ಭಾಗಿಯಾದ್ರು. ಎಂಎಲ್ ಎ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪುರಸಭೆ, ನಗರ ಸಭೆ ಚುನಾವಣೆಗಳಿಗೆ ಹಣ ಖರ್ಚು ಮಾಡಬೇಕಿದೆ. ಹಣ.. ಹಣ.. ಹಣ ಅಂತಾರೆ, ನಾವು ಎಲ್ಲಿ ಹೋಗಬೇಕು? ಎಂದು ಎಚ್ ಡಿ ಕೆ ಪ್ರಶ್ನೆ ಮಾಡಿದರು. ಇದನ್ನು ಯಾವ ರೀತಿ ಸರಿಪಡಿಸಬೇಕು? ಯಾವ ಅಭ್ಯರ್ಥಿ ಎಷ್ಟು ಹೊತ್ತಿಗೆ‌ ಹಣ ಹಂಚಲು ಬರುತ್ತಾರೆ ಎಂದು ಮತದಾರರು ರಾತ್ರಿಯಲ್ಲ ಮಲಗಲ್ಲ. ಮತದಾರರು ಮೂರು ಪಕ್ಷದವರಿಂದ ಹಣ ತೆಗೆದುಕೊಳ್ಳುತ್ತಾರೆ. ಹಣ ಪಡೆದುಕೊಳ್ಳುವುದಲ್ಲಿ ಸರ್ವ ಧರ್ಮ ಸಮಾನ ಎಂದು ವೋಟು ಮಾರಿಕೊಳ್ಳುವವರನ್ನು ಎಚ್ ಡಿಕೆ ಟೀಕಿಸಿದರು.

ಈ ವೇಳೆ ಒಂದೇ ಮನೆಯಲ್ಲಿ ಮೂರೂ ಬಾವುಟಗಳು ಇರುತ್ತವೆ ಎಂದು ಬೆಳ್ಳಿ ಪ್ರಕಾಶ್ ಒಗ್ಗರಣೆ ಹಾಕಿದರು. ಬಳಿಕ ರಮೇಶ್ ಕುಮಾರ್ ಮಧ್ಯಪ್ರವೇಶ ಮಾಡಿ, ಮುಂಚೆ ಲಿಕ್ಕರ್ ಪಡೆದುಕೊಳ್ಳುತ್ತಿದ್ದರು, ಇವಾಗ ಹಣ ಪಡೆದುಕೊಳ್ಳುತ್ತಿದ್ದಾರೆ. ನಾವು ಹೋದಾಗ ದೂರು ಕೊಡುತ್ತಿದ್ದರು. ಆ ಪಾರ್ಟಿಯವರು ಕೊಟ್ಟದ್ದು ಸ್ಟ್ರಾಂಗ್ ಆಗಿದೆ, ನಿಮ್ಮದೇನು ಡ್ಯೂಪ್ಲಿಕೇಟ್ ಎಂದು ಪ್ರಶ್ನಿಸುತ್ತಿದ್ದರು ಎಂದ ರಮೇಶ್ ಕುಮಾರ್ ಈಗಿನ ಚುನಾವಣೆ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.


Stay up to date on all the latest ರಾಜ್ಯ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp