ಯುಗಾದಿಗೆ ಮುನ್ನ ರಾಜ್ಯದಲ್ಲಿ ತೀವ್ರಗೊಂಡ ಹಲಾಲ್ ಕಟ್- ಜಟ್ಕಾ ಕಟ್ ವಿವಾದ: ಏನಿದು, ವ್ಯತ್ಯಾಸವೇನು?
ರಾಜ್ಯದಲ್ಲಿ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ಅಭಿಯಾನ ತೀವ್ರವಾಗಿದೆ. ಮುಸ್ಲಿಂ ವರ್ತಕರ ವಿರುದ್ಧ ಹಿಂದೂಪರ ಸಂಘಟನೆ ಕಾರ್ಯಕರ್ತರ ಎರಡನೇ ಸುತ್ತಿನ ಸಮರ ಆರಂಭವಾಗಿದೆ. ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸುವಲ್ಲಿಂದ ಆರಂಭವಾದ ವಿವಾದ ಈಗ ಹಲಾಲ್ ಕಟ್, ಜಟ್ಕಾ ಕಟ್ ಮಾಂಸದವರೆಗೆ ಬಂದು ನಿಂತಿದೆ.
Published: 30th March 2022 12:33 PM | Last Updated: 30th March 2022 01:31 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ಅಭಿಯಾನ ತೀವ್ರವಾಗಿದೆ. ಮುಸ್ಲಿಂ ವರ್ತಕರ ವಿರುದ್ಧ ಹಿಂದೂಪರ ಸಂಘಟನೆ ಕಾರ್ಯಕರ್ತರ ಎರಡನೇ ಸುತ್ತಿನ ಸಮರ ಆರಂಭವಾಗಿದೆ. ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸುವಲ್ಲಿಂದ ಆರಂಭವಾದ ವಿವಾದ ಈಗ ಹಲಾಲ್ ಕಟ್, ಜಟ್ಕಾ ಕಟ್ ಮಾಂಸದವರೆಗೆ ಬಂದು ನಿಂತಿದೆ.
ಇನ್ನೆರಡು ದಿನಗಳಲ್ಲಿ ಹಿಂದೂಗಳ ಪವಿತ್ರ ದೊಡ್ಡ ಹಬ್ಬ ಯುಗಾದಿ, ಹಿಂದೂ ಹೊಸ ವರ್ಷದ ಹಬ್ಬವಾದ ಯುಗಾದಿಯಂದು ಹಲಾಲ್ ಮಾಂಸವನ್ನು ಬಹಿಷ್ಕರಿಸುವಂತೆ ಹಿಂದೂಗಳಿಗೆ ಮನವಿ ಮಾಡುವ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದು ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ತೀವ್ರವಾಗಿದೆ.
ಯುಗಾದಿ ಹಬ್ಬದ ನಂತರ ಹೊಸತೊಡಕುವನ್ನು ಆಚರಿಸಲಾಗುತ್ತದೆ. ಮುಖ್ಯವಾಗಿ ದೇವರಿಗೆ ಪ್ರಾಣಿಯನ್ನು ಬಲಿ ನೀಡುವುದು. ಇಲ್ಲದಿದ್ದರೆ ಅಂಗಡಿಗಳಲ್ಲಿ ಮಾಂಸವನ್ನು ಖರೀದಿಸುವ ಭರಾಟೆ ಜೋರಾಗಿರುತ್ತದೆ. ಹೀಗಾಗಿ ಮುಸ್ಲಿಂರು ಹಲಾಲ್ ಕಟ್ ಮಾಡುತ್ತಾರೆ. ಕೆಲವು ಬಲಪಂಥೀಯ ಕಾರ್ಯಕರ್ತರು ಅದನ್ನು ಬಿಟ್ಟುಬಿಡಲು ಜನರನ್ನು ಮನವಿ ಮಾಡುತ್ತಿದ್ದಾರೆ.
ಹಲಾಲ್ ಮಾಂಸದ ವಿವಾದ ಹೋಟೆಲ್ ಮಾಲೀಕರಿಗೆ ಹೊಸ ಪೀಕಲಾಟ ತಂದಿಟ್ಟಿದೆ. ಬೆಂಗಳೂರಿನ ಜಿಎಫ್‌ಸಿ ಬಿರಿಯಾನಿ ಮಳಿಗೆಯ ಬೋರ್ಡ್‌ನಲ್ಲಿ ಉಲ್ಲೇಖಿಸಿದ್ದ ಹಲಾಲ್ ಎಂಬ ಪದ ಮುಚ್ಚಲಾಗಿದೆ. ಹಲಾಲ್ ಬಹಿಷ್ಕಾರ ಅಭಿಯಾನಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ. ಆಯ್ತು ಹಲಾಲ್ ತ್ಯಜಿಸುತ್ತೇವೆ. ಆರ್‌ಎಸ್‌ಎಸ್‌ನವರು ಪ್ರತಿ ಹಳ್ಳಿಯಲ್ಲೂ ಮಾಂಸದಂಗಡಿ ತೆರೆಯಲಿ. ಫಿಫ್ಟಿ ಪರ್ಸೆಂಟ್ ಡಿಸ್ಕೌಂಟ್ ನೀಡಲಿ ಎಂಬ ಟ್ವೀಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹಿಂದೂ ಜನಜಾಗೃತಿ ಸಮಿತಿ ನಡೆಸುತ್ತಿರುವ ‘ಬಾಯ್ಕಾಟ್ ಹಲಾಲ್’ ಹೋರಾಟಕ್ಕೆ ಶ್ರೀರಾಮಸೇನೆ ಬೆಂಬಲ ಸೂಚಿಸಿದೆ. ವಿವಾದ ಕುರಿತು ಹೇಳಿಕೆ ನೀಡಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ‘ಭಾರತ ಹಾಗೂ ಕರ್ನಾಟಕವನ್ನು ಹಲಾಲ್ ಮುಕ್ತ ಮಾಡಬೇಕಾಗಿದೆ. ಎಲ್ಲಾ ಹಿಂದೂಗಳು ಹಲಾಲ್ ಉತ್ಪನ್ನಗಳನ್ನ ಬಹಿಷ್ಕರಿಸಬೇಕು. ಹಿಂದೆ ಅಕ್ಬರ್, ಔರಂಗಜೇಬ್ ಹಿಂದೂಗಳ ಮೇಲೆ ಟ್ಯಾಕ್ಸ್ ಹೇರುತ್ತಿದ್ದರು. ಈಗ ಹಲಾಲ್ ಎಂಬ ವಿಚಾರವನ್ನು ಹೇರಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ಹಲಾಲ್ ಆರ್ಥಿಕ ಜಿಹಾದ್': ಅದನ್ನು ಬಹಿಷ್ಕರಿಸುವ ಹಕ್ಕು ನಮಗಿದೆ - ಸಿ.ಟಿ ರವಿ
ಏನಿದು ಹಲಾಲ್ ಕಟ್, ಜಟ್ಕಾ ಕಟ್, ವ್ಯತ್ಯಾಸವೇನು?: ವಧಿಸುವ ಪ್ರಾಣಿಯ ರಕ್ತನಾಳವನ್ನು ಕತ್ತರಿಸುವ ಮೂಲಕ ಪ್ರಾಣಿಯ ದೇಹದಲ್ಲಿರುವ ರಕ್ತವನ್ನು ಪೂರ್ತಿ ಹೊರತೆಗೆಯುವುದನ್ನು ಹಲಾಲ್ ಕಟ್ ಎಂದು ಕರೆಯುತ್ತಾರೆ. ಇದು ಇಸ್ಲಾಂ ಧರ್ಮದ ನಿಯಮಗಳಿಗೆ ಅನುಗುಣವಾಗಿದೆ. ರಕ್ತದಲ್ಲಿರುವ ಬ್ಯಾಕ್ಟೀರಿಯಾಗಳು ಹೊರಗೆ ಬರುತ್ತವೆ. ಇದರಿಂದ ಮಾಂಸ ಶುದ್ಧ ಎಂದು ನಂಬಲಾಗುತ್ತದೆ ಎನ್ನುತ್ತಾರೆ ಮುಸ್ಲಿಂ ಮುಖಂಡರು. ಪ್ರಾಣಿ ಮೊದಲೇ ಸತ್ತಿದ್ದರೆ ಅಥವಾ ಅನಾರೋಗ್ಯವಿದ್ದರೆ ಇದನ್ನು ಪರಿಗಣಿಸಲಾಗುವುದಿಲ್ಲ.
ಹಲಾಲ್ ಕಟ್ ಮಾಡುವವರು ಇಸ್ಲಾಂ ಧರ್ಮಕ್ಕೆ ಸೇರಿದವರಾಗಬೇಕು. ಪ್ರಾಣಿಯನ್ನು ಕೊಲ್ಲುವಾಗ ಮುಸಲ್ಮಾನರ ಪವಿತ್ರ ಸ್ಥಳ ಮೆಕ್ಕಾದ ದಿಕ್ಕಿಗೆ ಮುಖ ಮಾಡಿ ಪ್ರಾರ್ಥನೆ ಮಾಡಬೇಕು. ಮಾಂಸ ತಿನ್ನುವವರೂ ಪ್ರಾಣಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಬೇಕು.
ಹಿಂದೂಗಳು ಅನುಸರಿಸುವ ಪದ್ಧತಿ ಜಟ್ಕಾ ಪದ್ಧತಿ. ಒಂದು ಪ್ರಾಣಿಯ ವಧೆ ಒಂದೇ ಬಾರಿಗೆ ನಡೆಯುತ್ತದೆ. ಸಾವಿನಲ್ಲೂ ಸಹ ನೋವು ಅನುಭವಿಸಲು ಅವಕಾಶ ಕೊಡದೇ ಪ್ರಾಣಿ ಜೀವ ಬಿಡಲು ಅವಕಾಶ ಕೊಡಲಾಗುತ್ತದೆ. ನಮ್ಮ ಹಿರಿಯರು ಪಾಲನೇ ಮಾಡುತ್ತಿದ್ದ ಪದ್ಧತಿ ಇದು. ಜಟ್ಕಾ ಕಟ್ ಅಂದರೆ ದೈವಬಲಿ ಎಂದು ಕರೆಯುತ್ತಾರೆ.
ಜಟ್ಕಾ ಕಟ್ ಪ್ರಕಾರ ಒಂದೇ ಏಟಿಗೆ ಪ್ರಾಣಿಯ ರುಂಡ ಹಾಗೂ ಮುಂಡವನ್ನು ಬೇರ್ಪಡಿಸಲಾಗುತ್ತದೆ. ಈ ರೀತಿಯಲ್ಲಿ ಪ್ರಾಣಿಯ ಜೀವ ಒಂದೇ ಬಾರಿಗೆ ಹೋಗುತ್ತದೆ. ನಾವು ಯಾವುದೇ ಆಹಾರವನ್ನು ಸೇವಿಸುವ ಮೊದಲು ದೇವರಿಗೆ ನೈವೇದ್ಯ ಅರ್ಪಿಸಿ ತಿನ್ನುವುದು ಪೂರ್ವಜರು ಕಲಿಸಿಕೊಟ್ಟ ಕ್ರಿಯೆ. ಇದಕ್ಕೆ ಅನುಗುಣವಾಗಿ ಈ ಪದ್ಧತಿ ಇದೆ ಎಂದು ಹಿಂದೂ ಪರ ಸಂಘಟನೆಗಳು ಹೇಳುತ್ತವೆ.