ಹಲಾಲ್ ವಿಷಯದಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ, ಅದು ಮುಸ್ಲಿಮರ ಧಾರ್ಮಿಕ ಪದ್ಧತಿ: ಶಿಕ್ಷಣ ಸಚಿವ ಬಿ ಸಿ ನಾಗೇಶ್
ಹಲಾಲ್ ಕಟ್ ಮಾಂಸವನ್ನು ಸ್ವೀಕರಿಸುವುದು, ಬಿಡುವುದು ಜನರಿಚ್ಛೆ. ಸರ್ಕಾರ ಈ ವಿಷಯದಲ್ಲಿ ಮೂಗು ತೂರಿಸುವುದಿಲ್ಲ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
Published: 31st March 2022 12:48 PM | Last Updated: 31st March 2022 02:03 PM | A+A A-

ಶಿಕ್ಷಣ ಸಚಿವ ಬಿ ಸಿ ನಾಗೇಶ್
ಮಡಿಕೇರಿ: ಹಲಾಲ್ ಕಟ್ ಮಾಂಸವನ್ನು ಸ್ವೀಕರಿಸುವುದು, ಬಿಡುವುದು ಜನರಿಚ್ಛೆ. ಸರ್ಕಾರ ಈ ವಿಷಯದಲ್ಲಿ ಮೂಗು ತೂರಿಸುವುದಿಲ್ಲ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ಮಡಿಕೇರಿಯಲ್ಲಿಂದು ಮಾತನಾಡಿದ ಅವರು, ಹಲಾಲ್ ಎನ್ನುವುದು ಮುಸ್ಲಿಮರ ಧಾರ್ಮಿಕ ಪದ್ಧತಿ, ಅದು ಸರ್ಕಾರದ ನಿಯಮದೊಳಗೆ ಬರುವುದಿಲ್ಲ. ಹಲಾಲ್ ಎಂದರೇನೆಂದು ಮಾಧ್ಯಮಗಳಲ್ಲಿ ನಿನ್ನೆ-ಮೊನ್ನೆ ಬಂದ ನಂತರವಷ್ಟೇ ಸಾಮಾನ್ಯ ಜನತೆಗೆ ಗೊತ್ತಾಗಿರುವುದು. ಅಷ್ಟರವರೆಗೆ ಗೊತ್ತಿರಲಿಲ್ಲ. ಸರ್ಕಾರದ ನಿಯಂತ್ರಣದೊಳಗೆ ಇಲ್ಲದಿರುವ ವಿಷಯದಲ್ಲಿ ಮೂಗು ತೂರಿಸುವ ಅವಶ್ಯಕತೆಯಿಲ್ಲ ಎಂದರು.
ಇದನ್ನೂ ಓದಿ: ಹಲಾಲ್ ಕಟ್ ಮಾಂಸ ಬಳಕೆಗೆ ತೀವ್ರ ಆಕ್ಷೇಪ: ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ- ಸಿಎಂ ಬಸವರಾಜ ಬೊಮ್ಮಾಯಿ
ಹಲಾಲ್ ಇಷ್ಟವಿದ್ದವರು ಅಂಗಡಿಗಳಲ್ಲಿ ಸ್ವೀಕರಿಸುತ್ತಾರೆ. ಇಷ್ಟವಿಲ್ಲದವರು ಬೇರೆ ಅಂಗಡಿಗಳಲ್ಲಿ ಕೊಳ್ಳುತ್ತಾರೆ. ಇದನ್ನು ಜನರೇ ಮಾಡಿಕೊಂಡಿದ್ದಾರೆ ವಿನಃ ನಾವು ಮಾಡಿದ್ದಲ್ಲ. ಈ ವಿಷಯವನ್ನು ಜನರು ಎತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮಗೆ ಬೇಕಾದ ವಿಷಯವನ್ನು ಎತ್ತುವ ಅಧಿಕಾರವಿದೆ. ಈ ವಿಷಯವನ್ನು ಸರ್ಕಾರವಾಗಲೀ, ಯಾವುದೇ ರಾಜಕೀಯ ಪಕ್ಷವಾಗಲೀ ಎತ್ತಿಲ್ಲ ಎಂದರು.
ಕೊಡಗು ಅಂದರೆ ನೆನಪು ಆಗುವುದು ಕಾಫಿ. ದಿನವಿಡೀ ಸ್ಪೂರ್ತಿ ನೀಡಲು ಮಡಿಕೇರಿ ನಗರದಲ್ಲಿ ಇರುವ ಆನಂದ್ ಬೇಕರಿಯಲ್ಲಿ ಉತ್ತಮ ಕಾಫಿ ಸವಿದೆ ಎಂದು ಮಡಿಕೇರಿ ನಗರದ ಆನಂದ್ ಬೇಕರಿಯಲ್ಲಿ ಜನಸಾಮಾನ್ಯರಂತೆ ಕುಳಿತು ಕಾಫಿ ಸವಿದರು. ಅವರ ಜೊತೆ ಶಾಸಕ ಅಪ್ಪಚ್ಚು ರಂಜನ್, ಕೆ.ಜಿ ಬೋಪಯ್ಯ, ಜಿಲ್ಲಾಧಿಕಾರಿ ಸತೀಶ್ ಇದ್ದರು.