
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ
ಬೆಂಗಳೂರು: ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ನಲ್ಲಿ ಹಿಂದುಳಿದ ವರ್ಗದವರಿಗೆ ಚುನಾವಣೆಯಲ್ಲಿ ಮೀಸಲಾತಿ ಕುರಿತು ಗುರುವಾರ ವಿಧಾನಸೌಧದಲ್ಲಿ ಸರ್ವಪಕ್ಷ ನಾಯಕರ ಸಭೆ ನಡೆಯಿತು.
ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ, ಹಿಂದುಳಿದ ವರ್ಗದವರಿಗೆ ಮೀಸಲಾತಿ ಕುರಿತಂತೆ ಒಂದು ಆಯೋಗ ರಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಿಂದುಳಿದ ವರ್ಗಗಳು ರಾಜಕೀಯವಾಗಿ ಹಿಂದುಳಿದಿರುವಿಕೆ ಬಗ್ಗೆ ವರದಿ ಪಡೆಯಲು ಆಯೋಗ ರಚನೆ ಮಾಡಲಾಗಿದೆ. ಈ ವರದಿ ಬಂದ ಮೇಲೆ ಕಾನೂನು ಮಿತಿಯೊಳಗೆ ಕ್ರಮಕೈಗೊಳ್ಳಲಾಗುವುದು. ಅಡ್ವೊಕೇಟ್ ಜನರಲ್ ಬಳಿಯೂ ಈ ಬಗ್ಗೆ ಅಭಿಪ್ರಾಯ ಕೇಳಿದ್ದೇವೆ. ಇವೆರೆಡೂ ವರದಿ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಗೆ ಮಾಹಿತಿ ಕೊಡ್ತೇವೆ ಎಂದು ಹೇಳಿದರು.
ಇದನ್ನು ಓದಿ: ಮೀಸಲಾತಿ ಹೆಚ್ಚಳ: ಶೀಘ್ರದಲ್ಲೇ ಸರ್ವಪಕ್ಷ ಸಭೆ ನಡೆಸಿ ಅಂತಿಮ ನಿರ್ಧಾರ – ಸಿಎಂ ಬೊಮ್ಮಾಯಿ
ಇನ್ನು ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಒಬಿಸಿಗಳಿಗೆ ಮೀಸಲಾತಿ ಇಟ್ಟು ಚುನಾವಣೆ ಮಾಡಬೇಕು ಎಂಬುದು ಎಲ್ಲ ಪಕ್ಷಗಳ ಅಭಿಪ್ರಾಯವಾಗಿದೆ. ಹಾಗಾಗಿ ಆಯೋಗ ನೇಮಕ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದಷ್ಟು ಬೇಗ ಆಯೋಗ ರಚನೆ ಮಾಡಲಾಗುವುದು. ಆಯೋಗದ ವರದಿ ಅನ್ವಯ ಚುನಾವಣೆ ನಡೆಸಲಾಗುತ್ತದೆ ಎಂದರು.
ಗ್ರಾಮ ಪಂಚಾಯತಿ ಚುನಾವಣೆ ಮುಗಿಯುತ್ತಿದ್ದಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೆವು. ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲು ನಾವು ಸಿದ್ದರಿದ್ದೆವು. ಆದರೆ 2600ಕ್ಕೂ ಹೆಚ್ಚು ಆಕ್ಷೇಪಗಳು ಬಂದಿದ್ದವು. ಈ ನಿಟ್ಟಿನಲ್ಲಿ ವಿಶೇಷ ಸಮಿತಿ ನೇಮಕ ಮಾಡಲಾಗಿತ್ತು. ಸಮಿತಿಯ ವರದಿ ಕೊಡುವ ಸಮಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಸುಪ್ರೀಂ ಕೋರ್ಟ್ ಸಮಾಧಾನ ಆಗಬೇಕು ಹಾಗೂ ಹಿಂದುಳಿದ ವರ್ಗಕ್ಕೂ ನ್ಯಾಯ ಸಿಗಬೇಕು ಅನ್ನೋ ನಿಟ್ಟಿನಲ್ಲಿ ಸರ್ವ ಪಕ್ಷದ ಸಭೆಯಲ್ಲಿ ಆಯೋಗ ರಚನೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಆದಷ್ಟು ಶೀಘ್ರದಲ್ಲಿ ಆಯೋಗ ರಚನೆ ಮಾಡಲಾಗುತ್ತದೆ. ರಾಜಕೀಯ ಮೀಸಲಾತಿ ಬಗ್ಗೆ ಅಭಿಪ್ರಾಯ ಪಡೆದುಕೊಂಡು ಶೀಘ್ರದಲ್ಲಿ ಚುನಾವಣೆ ನಡೆಸಲಿದ್ದೇವೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.