
ತುಮಕೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸ್ವಾಗತಿಸಲು ಹಾಕಲಾಗಿರುವ ಹೋರ್ಡಿಂಗ್ಸ್ ಗಳು.
ಬೆಂಗಳೂರು: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಗುರುವಾರ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಶುಕ್ರವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಿರುವ ಅಮಿತ್ ಶಾ ಅವರು ಶುಕ್ರವಾರ ಬೆಳಿಗ್ಗೆ 10.30ಕ್ಕೆ ತುಮಕೂರಿನಲ್ಲಿ ನಡೆಯುವ ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತಿ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿನ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ 2 ಗಂಟೆಗೆ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ, ನಂತರ ಬೆಂಗಳೂರಿನ ಅರಮನೆ ಆವರಣದಲ್ಲಿ ಸಹಕಾರ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ನಡೆಯುವ ಸಹಕಾರ ಸಮ್ಮೇಳನದಲ್ಲಿ ಹೊಸದಾಗಿ ಸ್ಥಾಪಿಸಲು ಉದ್ದೇಶಿಸಿರುವ ನಂದಿನಿ ಕ್ಷೀರ ಅಭಿವೃದ್ಧಿ ಬ್ಯಾಂಕ್ ಲೋಗೋ ಬಿಡುಗಡೆ ಮಾಡಲಿದ್ದಾರೆ. ಅಲ್ಲದೆ, ಪುನರ್ ಪ್ರಾರಂಭಿಸಲು ತೀರ್ಮಾನಿಸಿರುವ ಯಶಸ್ವಿನಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮ ಮುಗಿಸಿದ ಬಳಿಕ ಸಂಜೆ 7 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬಜೆಟ್ ನಲ್ಲಿ ನಂದಿನಿ ಕ್ಷೀರ ಅಭಿವೃದ್ಧಿ ಬ್ಯಾಂಕ್ ಘೋಷಣೆ ಮಾಡಲಾಗಿದ್ದು, ಈ ಸಂಬಂಧ ಸರ್ಕಾರವು ಆದೇಶವನ್ನು ಕೂಡ ಹೊರಡಿಸಿದೆ. ಹಾಲು ಉತ್ಪಾದಕರಿಗಾಗಿ ಇತರೆ ಚಟುವಟಿಕೆ ಆರ್ಥಿಕ ಸಂಸ್ಥೆ ಇರಬೇಕು ಎನ್ನುವ ಕಾರಣಕ್ಕಾಗಿ ಈಗಾಗಲೇ ಬಜೆಟ್ ನಲ್ಲಿ ತಿಳಿಸಿರುವಂತೆ ರೂ.100 ಕೋಟಿ ಷೇರು ಬಂಡವಾಳ ಸರ್ಕಾರ ನೀಡಲಿದೆ. ಹಾಲು ಉತ್ಪಾದಕರ ಮಹಾಮಂಡಳಿ, ಜಿಲ್ಲಾ ಒಕ್ಕೂಟಗಳೆಲ್ಲಾ ಸೇರಿ ರೂ.260 ಕೋಟಿ ಷೇರು ಬಂಡವಾಳ ಹಾಕಿ ಪ್ರಾರಂಭಿಸಲಾಗುತ್ತಿದೆ. ಆರ್ಥಿಕ ಸಂಸ್ಥೆಯನ್ನು ಹಾಲು ಉತ್ಪಾದಕ ರೈತರಿಗಾಗಿ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಕ್ಷೀರ ಅಭಿವೃದ್ಧಿ ಬ್ಯಾಂಕ್ ದೇಶದಲ್ಲಿಯೇ ಮೊದಲ ಬಾರಿಗೆ ಪ್ರಾರಂಭಿಸಲಾಗುತ್ತಿದ್ದು, ಇದರಿಂದ ಹಾಲು ಉತ್ಪಾದನೆಗೆ ಮತ್ತಷ್ಟು ಬಲ ನೀಡಿದಂತಾಗುತ್ತದೆ. ಅಲ್ಲದೇ, ರೈತರ ಅದಾಯ ಹೆಚ್ಚಿಸಲು ಅನುಕೂಲವಾಗಲಿದೆ ಎಂದು ಹೇಳಿದರು.