ಗದಗ: ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ 7 ಶಿಕ್ಷಕರ ಅಮಾನತು
ಹಿಜಾಬ್ ಧರಿಸಿ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ ಏಳು ಶಿಕ್ಷಕರನ್ನು ಗದಗ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದ್ದಾರೆ.
Published: 31st March 2022 10:39 AM | Last Updated: 31st March 2022 10:39 AM | A+A A-

ಸಂಗ್ರಹ ಚಿತ್ರ
ಗದಗ: ಹಿಜಾಬ್ ಧರಿಸಿ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ ಏಳು ಶಿಕ್ಷಕರನ್ನು ಗದಗ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದ್ದಾರೆ.
ಕೆ.ಬಿ.ಭಜಂತ್ರಿ, ಬಿ.ಎಸ್.ಹೊನ್ನಗುಡಿ, ಎಸ್.ಜಿ.ಗೋಡ್ಕೆ, ಎಸ್.ಎಸ್.ಗುಜಮಾಗಡಿ, ವಿ.ಎನ್.ಕಿವುಡಾರ್, ಎಸ್.ಯು.ಹೊಕ್ಕಲದ್ ಮತ್ತು ಎಸ್.ಎಂ.ಪತ್ತಾರ್ ಅಮಾನತುಗೊಂಡ ಶಿಕ್ಷಕರಾಗಿದ್ದಾರೆ.
ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ಬಂದಾಗ, ಹಿಜಾಬ್ ತೆಗೆಯುವಂತೆ ಶಿಕ್ಷಕರಾಗಲಿ ಅಥವಾ ಮೇಲ್ವಿಚಾರಕರಾಗಲಿ ಸೂಚಿಸಿಲ್ಲ. ಅರ್ಧ ಗಂಟೆಗೂ ಹೆಚ್ಚು ಕಾಲ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಹಿನ್ನೆಲೆಯಲ್ಲಿ ಮಾಧ್ಯಮದವರು ಸುದ್ಧಿ ಮಾಡಲು ಸ್ಥಳಕ್ಕೆ ತೆರಳಿದಾಗ ಶಿಕ್ಷಕರು ಪರೀಕ್ಷಾ ಕೊಠಡಿಗಳಿಗೆ ತೆರಳಿ ಹಿಜಾಬ್ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದರು.
ಘಟನೆಯ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಚಾರ ಡಿಡಿಪಿಐ ಜಿಎಂ.ಬಸವಲಿಂಗಪ್ಪ ಅವರ ಗಮನಕ್ಕೆ ಬಂದಿದ್ದು, ಶಿಕ್ಷಕರನ್ನು ಅಮಾನತುಗೊಳಿಸಿ, ತನಿಖೆ ಆರಂಭಿಸಿದ್ದಾರೆ.
4 ಮತ್ತು 8ನೇ ಪರೀಕ್ಷಾ ಕೊಠಡಿಗಳಲ್ಲಿ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಆರಂಭಿಸಿದ್ದರು. ಪ್ರಾಂಶುಪಾಲರಿಗೆ ಈ ಕುರಿತು ಮಾಹಿತಿ ನೀಡಲು ಹೋದಾಗ ಕೆಲವರು ವಿಡಿಯೋ ಹಾಗೂ ಫೋಟೋಗಳನ್ನು ತೆಗೆದಿದ್ದಾರೆ. ವಿದ್ಯಾರ್ಥಿಗಳಿಗೆ ಹಿಜಾಬ್ ತೆಗೆಯುವಂತೆ ಸೂಚಿಸಲಾಗಿತ್ತು ಶಿಕ್ಷಕರೊಬ್ಬರು ಹೇಳಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯ ಮೊದಲ ಪತ್ರಿಕೆಯ ವೇಳೆ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಪರೀಕ್ಷೆ ಬರೆದಿರುವುದು ನಮ್ಮ ಗಮನಕ್ಕೆ ಬಂದಿದ್ದು, ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ಬಸವಲಿಂಗಪ್ಪ ಅವರು ಹೇಳಿದ್ದಾರೆ.