
ಭಾರಿ ಮಳೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಭಾನುವಾರವೂ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು.
ನಗರದಲ್ಲಿ ನಿನ್ನೆ ರಾತ್ರಿ ಸಹ ಭಾರಿ ಮಳೆಯಾಗಿತ್ತು, ಇಂದು ಬೆಳಗ್ಗೆ ಎಂದಿನಂತೆ ಬಿಸಿಲಿತ್ತು. ಆದರೆ ಮಧ್ಯಾಹ್ನ ಮೋಡ ಕವಿದ ವಾತಾವರಣ ಉಂಟಾಯಿತು. ಸಂಜೆ ೪.೩೦ರ ವೇಳೆಗೆ ಗುಡುಗು ಸಹಿತ ಮಳೆ ಆರಂಭವಾಯ್ತು.
ಇದನ್ನು ಓದಿ: ಬೆಂಗಳೂರು: ಮಳೆಯಿಂದ ಜಲಾವೃತಗೊಂಡ ರಸ್ತೆಯಲ್ಲಿ ಬೈಕ್ ಸ್ಕಿಡ್; ಲಾರಿ ಹರಿದು ಯುವಕನ ದುರ್ಮರಣ
ನಿಧಾನವಾಗಿ ಶುರುವಾದ ಮಳೆ ಕ್ರಮೇಣ ಅಬ್ಬರದ ಸ್ವರೂಪ ಪಡೆದುಕೊಂಡಿತು. ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ವಿಧಾನಸೌಧ, ಕೆ.ಆರ್.ವೃತ್ತ, ಶಿವಾಜಿನಗರ, ಲಾಲ್ ಬಾಗ್ ರಸ್ತೆ, ಕೆಂಗಲ್ ಹನುಮಂತಯ್ಯ ರಸ್ತೆ, ಜಯನಗರ, ಜೆ.ಪಿ.ನಗರ, ಮೆಜೆಸ್ಟಿಕ್, ಸಿಟಿ ಮಾರುಕಟ್ಟೆ, ಹೆಬ್ಬಾಳ, ಎಚ್ ಎಎಲ್ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದ್ದು, ಹಲವು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.
ಒಂದೂವರೆ ತಾಸಿಗೂ ಹೆಚ್ಚು ಸಮಯ ಸುರಿದ ಮಳೆಯಿದಾಗಿ ವಾತಾವಾರಣದ ತಾಪಮಾನ ಕುಗ್ಗಿದೆ. ಸಂಜೆ ೬ರ ವೇಳೆಗೆ ಗರಿಷ್ಠ ತಾಪಮಾನ ೨೯ ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ರಾತ್ರಿಯ ವೇಳೆಗೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.