ಖಾದಿ ಕಳಚಿ ಕಾವಿ ತೊಡಲಿದ್ದಾರೆ ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ, ಮೇ 6ರಂದು ಸನ್ಯಾಸ ದೀಕ್ಷೆ ಸ್ವೀಕಾರ
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತ, ಬಿಜೆಪಿ ನಾಯಕ, ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಅವರು ಖಾದಿ ಕಳಚಿ ಕಾವಿ ತೊಡಲು ನಿರ್ಧರಿಸಿದ್ದು, ಇತ್ತೀಚಿಗೆ ಘೋಷಿಸಿದಂತೆ ಅವರು ಮೇ...
Published: 03rd May 2022 07:02 PM | Last Updated: 03rd May 2022 07:02 PM | A+A A-

ಬಿಜೆ ಪುಟ್ಟಸ್ವಾಮಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತ, ಬಿಜೆಪಿ ನಾಯಕ, ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಅವರು ಖಾದಿ ಕಳಚಿ ಕಾವಿ ತೊಡಲು ನಿರ್ಧರಿಸಿದ್ದು, ಇತ್ತೀಚಿಗೆ ಘೋಷಿಸಿದಂತೆ ಅವರು ಮೇ 6 ರಂದು ಸನ್ಯಾಸ ದೀಕ್ಷೆ ತೆಗೆದುಕೊಳ್ಳಲಿದ್ದಾರೆ.
50 ವರ್ಷಗಳ ಸುದೀರ್ಘ ರಾಜಕೀಯ ಜೀವನದಿಂದ ನಿವೃತ್ತಿಯಾಗುತ್ತಿದ್ದೇನೆ. ಲೌಕಿಕ ಜೀವನದಿಂದ ಆಧಾತ್ಮಿಕ ಜೀವನದತ್ತ ಹೆಜ್ಜೆಯನ್ನಿಡುತ್ತಿದ್ದೇನೆ. ಇದೇ ತಿಂಗಳ ಮೇ 6ರಂದು ರಾಜರಾಜೇಶ್ವರಿ ದೇವಸ್ಥಾನದ ಕೈಲಾಸ ಮಠದ ಶ್ರೀ ಜಯೇಂದ್ರ ತೀರ್ಥ ಪುರಿ ಮಹಾಸ್ವಾಮಿಜಿಯವರಿಂದ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಲಿದ್ದೇನೆ ಎಂದು ಮಾಜಿ ಸಚಿವ ಹಾಗೂ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅವರು ಹೇಳಿದ್ದಾರೆ.
ಇಂದು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಏಪ್ರಿಲ್ 30ರಂದು ರಾಜೀನಾಮೆ ನೀಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಸಣ್ಣ ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಿರುವ ಆತ್ಮ ತೃಪ್ತಿಯಲ್ಲಿ ನಾನು ನಿವೃತ್ತಿಯನ್ನು ಹೊಂದುತ್ತಿದ್ದೇನೆ ಎಂದು ತಿಳಿಸಿದರು.
ನನ್ನ ಸಮುದಾಯಕ್ಕೆ ಶಾಶ್ವತವಾದ ಸಂಸ್ಥೆ ಕಟ್ಟಬೇಕು ಎಂದಾಗ ನಾನು ರಾಜಕೀಯ ಕಾರ್ಯದರ್ಶಿಯಾಗಿದ್ದಾಗ ಬಿ.ಎಸ್.ಯಡಿಯೂರಪ್ಪನವರು ಎಂಟು ಎಕರೆ ಜಮೀನು ಮತ್ತು ಐದು ಕೋಟಿ ಅನುದಾನ ಕೊಟ್ಟಿದ್ದರು. ಅದನ್ನ ಬಳಸಿಕೊಂಡು ನನ್ನ ಕೈಲಾದ ಹಣ ಮತ್ತು ಜನರಿಂದ ಅಲ್ಪಸ್ವಲ್ಪ ಹಣ ಪಡೆದು ಒಂದು ಗುರು ಪೀಠವನ್ನು ಕಟ್ಟಿದ್ದೇನೆ. ಹಾಸ್ಟೆಲ್, ಸಮುದಾಯ ಭವನವನ್ನು ಕಟ್ಟಿದ್ದೇನೆ. ನಮ್ಮ ಜನಾಂಗಕ್ಕೂ ಒಂದು ಗುರುಪೀಠ ಮಾಡಬೇಕು ಎಂದುಕೊಂಡು ಮೂವರು ಯುವಕರನ್ನ ಸಿದ್ದಗಂಗಾ ಮಠ, ಮುರುಗ ರಾಜೇಂದ್ರ ಮಠ, ರಾಜರಾಜೇಶ್ವರಿ ಮಠದಲ್ಲಿ ನಾನು ಸೇರಿಸಿದ್ದೆ. ಆದ್ರೆ ಕಾರಣಾಂತರಗಳಿಂದ ಅವರು ಹೊರಟು ಹೋದರು.
ಕೊನೆಯದಾಗಿ ರಾಜರಾಜೇಶ್ವರಿ ಮಠದಲ್ಲಿ ಜಯತೀರ್ಥ ಸ್ವಾಮೀಜಿಗಳು ಯಾಗ ಮಾಡುತ್ತಿದ್ದಾಗ ನನ್ನನ್ನು ಕರೆದು ಪೀಠಾಧಿಪತಿ ಆಗಬೇಕಿದ್ದರೇ ಬದ್ಧತೆ ಇರಬೇಕು, ಹೀಗಾಗಿ ನೀವೇ ಮೊದಲ ಪೀಠಾಧ್ಯಕ್ಷರಾಗಿ. ಆನಂತರ ಯೋಗ್ಯ ಶಿಷ್ಯರು ಬಂದಾಗ ಅವರನ್ನ ಪೀಠಾಧಿಪತಿ ಮಾಡಿ ಎಂದು ಆದೇಶಿಸಿದರು. ಅದರಂತೆ ನಾನೇ ಪೀಠಾಧ್ಯಕ್ಷನಾಗಲಿದ್ದೇನೆ ಎಂದು ಪುಟ್ಟಸ್ವಾಮಿ ಹೇಳಿದರು.
ಮೇ 4ರಂದು ರಾಜರಾಜೇಶ್ವರಿ ದೇವಸ್ಥಾನದಲ್ಲಿರುವ ಕೈಲಾಸ ಮಠಕ್ಕೆ ಹೋಗುತ್ತಿದ್ದೇನೆ. ಐದನೇ ತಾರೀಕು ಹೋಮ ಇದ್ದು, ಆರನೇ ತಾರೀಕು ನನಗೆ ದೀಕ್ಷೆಯನ್ನು ಕೊಡುತ್ತಿದ್ದಾರೆ. ದೀಕ್ಷೆ ಕೊಟ್ಟ ಬಳಿಕ ನಾನು ಎಂಟನೇ ತಾರೀಕು ನಮ್ಮ ಮಠಕ್ಕೆ ತೆರಳುತ್ತೇನೆ. ಮೇ 15ರಂದು ನನಗೆ ಪಟ್ಟಾಭಿಷೇಕವನ್ನು ಕೈಲಾಸ ಮಠದ ಶ್ರೀ ಜಯತೀರ್ಥಸ್ವಾಮೀಜಿಗಳು ನೆರವೇರಿಸಿಕೊಡಲಿದ್ದಾರೆ ಎಂದರು.
ಮೇ 15 ರಂದು ಬೆಂಗಳೂರಿನ ಮಾದನಾಯ್ಕನಹಳ್ಳಿಯಲ್ಲಿರುವ ಶ್ರೀ ಕ್ಷೇ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಪ್ರಥಮ ಪೀಠಾಧಿಪತಿಯಾಗಿ ಅಲಂಕೃತಗೊಳ್ಳಲಿದ್ದಾರೆ. ಈ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಎಸ್ ಎಂ ಕೃಷ್ಣ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವಾರು ಸಚಿವರು ಭಾಗವಹಿಸಲಿದ್ದಾರೆ. ಮುಖ್ಯವಾಗಿ 20 ಮಠಾಧೀಶರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ಹೇಳಿದ್ದಾರೆ.