ಎಲ್ಲೆಡೆ ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಆಚರಣೆ: ನಗರದ ಕೆಲವೆಡೆ ವಾಹನ ಸಂಚಾರ ಮಾರ್ಗ ಬದಲಾವಣೆ
ರಾಜ್ಯಾದ್ಯಂತ ಮುಸ್ಲಿಮರ ಪವಿತ್ರ ಹಬ್ಬ ಈದುಲ್ ಫಿತ್ರ್ (ರಂಜಾನ್) ಹಬ್ಬವನ್ನು ಮಂಗಳವಾರ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಮುಸ್ಲಿಂ ಬಾಂಧವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಭಾಶಯಗಳನ್ನು ಕೋರಿದ್ದಾರೆ.
Published: 03rd May 2022 08:45 AM | Last Updated: 03rd May 2022 01:30 PM | A+A A-

ಸಂಗ್ರಹ ಚಿತ್ರ
ಬೆಂಗಳೂರು; ರಾಜ್ಯಾದ್ಯಂತ ಮುಸ್ಲಿಮರ ಪವಿತ್ರ ಹಬ್ಬ ಈದುಲ್ ಫಿತ್ರ್ (ರಂಜಾನ್) ಹಬ್ಬವನ್ನು ಮಂಗಳವಾರ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಮುಸ್ಲಿಂ ಬಾಂಧವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಹೇಳಿದ್ದಾರೆ.
ಸಂಚಾರ ಮಾರ್ಗ ಬದಲಾವಣೆ
ರಂಜಾನ್ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಗರದ ಪೂರ್ವ ಸಂಚಾರ ವಿಭಾಗದ ವ್ಯಾಪ್ತಿಯ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಬನ್ನೇರುಘಟ್ಟ ಮುಖ್ಯರಸ್ತೆಯ ಸಾಗರ್ ಜಂಕ್ಷನ್ನಿಂದ ಜಿ.ಡಿ.ಮರ ಜಂಕ್ಷನ್ವರೆಗೆ ಹಾಗೂ ಶಿಲ್ಪಾ ಜಂಕ್ಷನ್ನಿಂದ ಸಾಗರ್ ಜಂಕ್ಷನ್ ವರೆಗೆ ಎಲ್ಲ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಜಿ.ಡಿ.ಮರ ಜಂಕ್ಷನ್ನಿಂದ ಶಿಲ್ಪಾ ಜಂಕ್ಷನ್ವರೆಗೆ, ಮಾಸ್ಕ್ ರಸ್ತೆ, ಎಂ.ಎಂ.ರಸ್ತೆ, ಮಿಲ್ಲರ್ಸ್ ರಸ್ತೆಯಲ್ಲಿ (ಕಂಟೋನ್ಮೆಂಟ್ ರೈಲ್ವೇ ಅಂಡರ್ ಬ್ರಿಡ್ಜ್ನಿಂದ ಹೇನ್ಸ್ ಜಂಕ್ಷನ್ವರೆಗೆ) ಸಂಚಾರಕ್ಕೆ ಅವಕಾಶವಿಲ್ಲ.
ನಾಗವಾರ ಮುಖ್ಯರಸ್ತೆ ಮತ್ತು ಟ್ಯಾನರಿ ಮುಖ್ಯರಸ್ತೆಯಲ್ಲಿ ನಾಗವಾರ ಜಂಕ್ಷನ್ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಭಾಗಶಃ ಸಂಚಾರ ನಿರ್ಬಂಧಿಸಲಾಗಿದೆ. ನಿಷೇಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಮುಸ್ಲಿಮರ ಪವಿತ್ರ ಹಾಗೂ ದೊಡ್ಡ ಹಬ್ಬಗಳಲ್ಲಿ ರಂಜಾನ್ ಮೊದಲನೆಯದು. ಈ ಹಬ್ಬವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರವಾದಿ ಮುಹಮ್ಮದ್ ಈ ತಿಂಗಳು ಪವಿತ್ರ ಕುರಾನ್ನ ಬಹಿರಂಗಪಡಿಸಿದರು ಎಂದು ನಂಬಲಾಗಿದೆ.
ಪವಿತ್ರ ರಂಜಾನ್ನಲ್ಲಿ ಒಂದು ತಿಂಗಳ ಉಪವಾಸ ಮಾಡುವ ಮೂಲಕ ನಮ್ಮ ಸಂಬಂಧ ದೇವರ ಜೊತೆ ಮತ್ತಷ್ಟು ಗಟ್ಟಿಯಾಗುತ್ತೆ. ದೇವರಿಗೆ ಹತ್ತಿರವಾಗಲು ಸಹಾಯ ಮಾಡುತ್ತೆ ಎಂದು ಮುಸ್ಲಿಮರು ನಂಬುತ್ತಾರೆ. ಈ ತಿಂಗಳಲ್ಲಿ ಉಪವಾಸ ಮಾಡಿದ್ರೆ ಕಷ್ಟಸಂಕಷ್ಟಗಳು ಕಡಿಮೆಯಾಗುತ್ತವೆ ಎಂದು ಕೆಲವರು ನಂಬುತ್ತಾರೆ. ಈ ತಿಂಗಳಲ್ಲಿ ಮುಸ್ಲಿಮರು ಬಡವರಿಗೆ ದಾನ-ಧರ್ಮ ಮಾಡುವುದು ಹಾಗೂ ಹಸಿದವರಿಗೆ ಆಹಾರ ನೀಡುವಂಥ ಪುಣ್ಯ ಕಾರ್ಯಗಳನ್ನು ಮಾಡುತ್ತಾರೆ.
ಈದ್-ಉಲ್-ಫಿತರ್ ಇಸ್ಲಾಮಿಕ್ ಪ್ರವಾದಿ ಮುಹಮ್ಮದ್ ಅವರಿಂದ ಹುಟ್ಟಿಕೊಂಡಿತು ಎನ್ನಲಾಗಿದೆ. ಕೆಲವು ಸಂಪ್ರದಾಯಗಳ ಪ್ರಕಾರ, ಮೆಕ್ಕಾದಿಂದ ಮುಹಮ್ಮದ್ ವಲಸೆ ಬಂದ ನಂತರ ಈ ಹಬ್ಬಗಳನ್ನು ಮದೀನಾದಲ್ಲಿ ಪ್ರಾರಂಭಿಸಲಾಯಿತು. ಇಸ್ಲಾಮಿಕ್ ಪ್ರವಾದಿಯ ಪ್ರಸಿದ್ಧ ಒಡನಾಡಿಯಾದ ಅನಸ್, ಮುಹಮ್ಮದ್ ಮದೀನಾಕ್ಕೆ ಆಗಮಿಸಿದಾಗ, ಜನರು ಎರಡು ನಿರ್ದಿಷ್ಟ ದಿನಗಳನ್ನು ಆಚರಿಸುವುದನ್ನು ಕಂಡುಕೊಂಡರು. ಈದ್-ಉಲ್-ಫಿತರ್ ಮತ್ತು ಈದ್-ಅಲ್-ಅಧಾ. ಇನ್ನು ಈ ಹಬ್ಬಕ್ಕೆ ಅದರದೇ ಆದ ಮಹತ್ವ ಇದೆ. ಈ ತಿಂಗಳಲ್ಲಿ ಆಚರಿಸುವ ಆಚರಣೆಗಳು ಮಹತ್ವದ ವೈಜ್ಞಾನಿಕ ಕಾರಣಗಳನ್ನು ಒಳಗೊಂಡಿವೆ.