ಕೆಜಿಎಫ್ ಅನ್ನು ಪ್ರವಾಸೋದ್ಯಮ, ಚಲನಚಿತ್ರ ಶೂಟಿಂಗ್ 'ಗಣಿ'ಯಾಗಿ ಪರಿವರ್ತಿಸಬಹುದು
ಕಳೆದ ತಿಂಗಳು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯಾದಾಗಿನಿಂದ, ಚಿತ್ರದ ಜನಪ್ರಿಯತೆಯ ಜೊತೆಗೆ ಕೋಲಾರದ ಚಿನ್ನದ ಕ್ಷೇತ್ರದ ಬಗ್ಗೆ ಜನರ ಆಸಕ್ತಿಯು ಹೆಚ್ಚಾಗುತ್ತಿದೆ.
Published: 03rd May 2022 03:17 PM | Last Updated: 03rd May 2022 05:01 PM | A+A A-

ಕೆಜಿಎಫ್ ಗಣಿ ಪ್ರದೇಶ
ಕೆಜಿಎಫ್ (ಕೋಲಾರ ಜಿಲ್ಲೆ): ಕಳೆದ ತಿಂಗಳು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯಾದಾಗಿನಿಂದ, ಚಿತ್ರದ ಜನಪ್ರಿಯತೆಯ ಜೊತೆಗೆ ಕೋಲಾರದ ಚಿನ್ನದ ಕ್ಷೇತ್ರದ ಬಗ್ಗೆ ಜನರ ಆಸಕ್ತಿಯು ಹೆಚ್ಚಾಗುತ್ತಿದೆ. ಹೀಗಾಗಿ ಒಂದು ಶತಮಾನಕ್ಕೂ ಹೆಚ್ಚು ಕಾಲ ಚಿನ್ನ ಹೊರತೆಗೆದ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಲು ಆರಂಭಿಸಿದ್ದಾರೆ.
ಪ್ರವಾಸಿಗರು ಈಗ ಗಣಿಗಾರಿಕೆ ಪ್ರದೇಶ ಮತ್ತು ಸೈನೈಡ್ ಬೆಟ್ಟವನ್ನು ಪ್ರವೇಶಿಸಬಹುದು. ಇದು ಚಿನ್ನವನ್ನು ಹೊರತೆಗೆದ ನಂತರ ಸಂಗ್ರಹವಾದ ತ್ಯಾಜ್ಯದ ದಿಬ್ಬವಾಗಿದೆ. ಭಾರತ್ ಗೋಲ್ಡ್ ಮೈನಿಂಗ್ ಲಿಮಿಟೆಡ್(BGML) 2001 ರಲ್ಲಿ ಇಲ್ಲಿ ಗಣಿಗಾರಿಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ಕೆಜಿಎಫ್ ಚಿತ್ರದ ಎರಡು ಭಾಗಗಳನ್ನು ಈ ಡಸ್ಟ್ ಡಂಪ್ನಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಈಗ ಅದು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದೆ. ಹೀಗಾಗಿ ಇದನ್ನು ಅಭಿವೃದ್ಧಿಪಡಿಸುವ ಮೂಲಕ ಚಲನಚಿತ್ರ ಚಿತ್ರೀಕರಣಕ್ಕೆ ಮತ್ತು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಬೇಕು. ಇದು ಸ್ಥಳೀಯ ನಿವಾಸಿಗಳಿಗೆ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂಬ ಸಲಹೆಗಳು ಕೇಳಿಬರುತ್ತಿವೆ.
ಪಟ್ಟಣದಲ್ಲಿ ಸುಮಾರು 150 ವರ್ಷಗಳಷ್ಟು ಹಳೆಯದಾದ ಬಂಗಲೆಗಳು, ಅಂಚೆ ಕಛೇರಿಗಳು, ಕ್ರೀಡಾ ಕ್ಲಬ್ಗಳು, ಕ್ಲಬ್ಹೌಸ್ಗಳು ಮತ್ತು ಜಿಮ್ಖಾನಾಗಳು ಇನ್ನೂ ಇವೆ. “ನಾವು ಆಂಧ್ರಪ್ರದೇಶದಿಂದ ರಾಕಿ ಭಾಯ್ ಅವರ (ನಟ ಯಶ್) ಚಿನ್ನದ ಗಣಿಯ ನೋಟವನ್ನು ವೀಕ್ಷಿಸಲು ಬಂದಿದ್ದೇವೆ. ನಾವು ಅದನ್ನು ದೊಡ್ಡ ಪರದೆಯ ಮೇಲೆ ನೋಡಿದ್ದೇವೆ, ಆದರೆ ಅದನ್ನು ನೇರವಾಗಿ ನೋಡಲು ಬಯಸಿದ್ದೇವೆ ”ಎಂದು ಕುಪ್ಪಂ ಸಮೀಪದ ಹಳ್ಳಿಯ ನಿವಾಸಿ ಮಣಿಕಂದನ್ ಅವರು ಹೇಳದ್ದಾರೆ.
ಗಣಿ ಪ್ರದೇಶದ ಮೇಲ್ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸರಿಯಾಗಿಲ್ಲ. ಅದನ್ನು ಅಭಿವೃದ್ಧಿಪಡಿಸಿದರೆ, ಪ್ರವಾಸಕ್ಕೆ ಮತ್ತು ಟ್ರೆಕ್ಕಿಂಗ್ ಮಾಡಲು ಇದು ಉತ್ತಮ ಸ್ಥಳವಾಗಿದೆ" ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ: ಒಂದು ಕಾಲದಲ್ಲಿ 'ಲಿಟ್ಲ್ ಇಂಗ್ಲೆಂಡ್' ಎಂದು ಕರೆಯುತ್ತಿದ್ದ ಕೆಜಿಎಫ್ ನಲ್ಲಿ ಇಂದು ಮೂಲ ಸೌಕರ್ಯಕ್ಕೂ ಪರದಾಟ!
ಕೆಜಿಎಫ್ 2 ಬಿಡುಗಡೆಯಾದ ನಂತರ, ಬೆಂಗಳೂರು, ತಮಿಳುನಾಡು, ಆಂಧ್ರಪ್ರದೇಶ ಮತ್ತು ಇತರ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಜನರು ಈ ಬೆಟ್ಟವನ್ನು ನೋಡಲು ಬರುತ್ತಿದ್ದಾರೆ. ಕನ್ನಡದ ನಟರಾದ ಶಿವರಾಜಕುಮಾರ್, ದಿವಂಗತ ಪುನೀತ್ ರಾಜ್ ಕುಮಾರ್, ಶ್ರೀ ಮುರಳಿ ಮತ್ತು ದರ್ಶನ್ ಅಭಿನಯದ ಸಿನಿಮಾಗಳು ಸಹ ಇಲ್ಲಿ ಚಿತ್ರೀಕರಣಗೊಂಡಿವೆ. ತಮಿಳು, ತೆಲುಗು, ಮಲಯಾಳಂ ಹೀಗೆ ಹಿಂದಿ ಸಿನಿಮಾ ನಿರ್ದೇಶಕರು ಕೂಡ ಸೀಕ್ವೆನ್ಸ್ ಚಿತ್ರೀಕರಣಕ್ಕೆ ಬಂದಿದ್ದಾರೆ. ಆದರೆ ಕೆಜಿಎಫ್ ಚಿತ್ರ ಬಿಡುಗಡೆಯಾದ ನಂತರ ಇದರ ಜನಪ್ರಿಯತೆ ಹೆಚ್ಚಾಯಿತು.
ಅಧಿಕಾರಿಗಳು, ಜನರನ್ನು ಆಕರ್ಷಿಸಲು ಪ್ರವಾಸಿ ಸ್ನೇಹಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಚಲನಚಿತ್ರ ನಿರ್ಮಾಪಕ ಮತ್ತು ಕನ್ನಡ ಚಲನಚಿತ್ರಗಳ ವಿತರಕ ಎಸ್.ಎ.ಚಿನ್ನೇಗೌಡ ಅವರು ಹೇಳಿದ್ದಾರೆ.
"ಇದು ಸುಂದರವಾದ ಸ್ಥಳವಾಗಿದೆ ಮತ್ತು ಶೂಟಿಂಗ್ಗೆ ಸೂಕ್ತವಾಗಿದೆ. ಇಲ್ಲಿನ ಬಂಗಲೆಗಳು ಮತ್ತು ಇತರ ರಚನೆಗಳು ಸಹ ಪ್ರವಾಸಿಗರ ಆಕರ್ಷಣೆಗಳಾಗಿ ಪರಿವರ್ತಿಸಬಹುದು" ಎಂದು ಅವರು ತಿಳಿಸಿದ್ದಾರೆ.