ಪಿಎಸ್ಐ ನೇಮಕಾತಿ ಅಕ್ರಮದಲ್ಲಿ 300 ಕೋಟಿ ರೂ. ವರೆಗೆ ಅವ್ಯವಹಾರ, ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಬೇಕು: ಸಿದ್ದರಾಮಯ್ಯ
ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ ತನಿಖೆಯನ್ನು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಯಬೇಕು. ಆಗ ನಿಜವಾದ ಸತ್ಯ ಹೊರಗೆ ಬರುತ್ತದೆ, ತಪ್ಪಿತಸ್ಥರು ಯಾರು ಎಂದು ಗೊತ್ತಾಗುತ್ತದೆ. ಇದರಲ್ಲಿ ಸುಮಾರು 300 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
Published: 05th May 2022 11:54 AM | Last Updated: 05th May 2022 01:37 PM | A+A A-

ಸಿದ್ದರಾಮಯ್ಯ
ಮೈಸೂರು: ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ ತನಿಖೆಯನ್ನು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಯಬೇಕು. ಆಗ ನಿಜವಾದ ಸತ್ಯ ಹೊರಗೆ ಬರುತ್ತದೆ, ತಪ್ಪಿತಸ್ಥರು ಯಾರು ಎಂದು ಗೊತ್ತಾಗುತ್ತದೆ. ಇದರಲ್ಲಿ ಸುಮಾರು 300 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಿಎಸ್ಐ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಂದ ಸುಮಾರು 40 ಲಕ್ಷ ರೂಪಾಯಿಗಳಿಂದ 1 ಕೋಟಿ ರೂಪಾಯಿಗಳವರೆಗೆ ವಸೂಲು ಮಾಡಿದ್ದಾರೆ, ದರ್ಶನ್ ಗೌಡ ಅಭ್ಯರ್ಥಿಯ ಉತ್ತರ ಪತ್ರಿಕೆಯಲ್ಲಿ ಸಿಕ್ಕಿದ ಅಂಕಗಳು ಸಂಶಯ ಮೂಡುತ್ತಿದೆ, ಬ್ಲೂ ಟೂತ್ ಇಟ್ಟುಕೊಂಡು ಉತ್ತರ ಬರೆದಿದ್ದಾರೆ. ಹೀಗೆ ಪರೀಕ್ಷೆ ವೇಳೆ ಸಾಕಷ್ಟು ಅವ್ಯವಹಾರವಾಗಿದೆ ಎಂದರು.
ಸರ್ಕಾರದ ಮಂತ್ರಿಗಳೇ, ಪೊಲೀಸರೇ ಇದರಲ್ಲಿ ಭಾಗಿಯಾಗಿರುವುದರಿಂದ ತನಿಖೆಯನ್ನು ಮುಕ್ತವಾಗಿ ನಡೆಸುತ್ತಿಲ್ಲ. ಎಡಿಜಿಪಿ ಅಮೃತ್ ಪಾಲ್ ಅವರಂತಹ ಹಿರಿಯ ಅಧಿಕಾರಿಗಳು, ಸಚಿವರಾದ ಆರಗ ಜ್ಞಾನೇಂದ್ರ, ಅಶ್ವಥ ನಾರಾಯಣ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ರಾಮನಗರಕ್ಕಾಗಿ ಇಬ್ಬರು ಪ್ರಭಾವಿ ಒಕ್ಕಲಿಗ ನಾಯಕರ ಹಣಾಹಣಿ: ತಮ್ಮ ವಿರುದ್ಧ 'ತೊಡೆ' ತಟ್ಟಿ ನಿಂತವರಿಗೆ ಡಿಕೆಶಿ 'ಖೆಡ್ಡಾ'?
ಸಚಿವ ಪ್ರಭು ಚೌವ್ಹಾಣ್ ಫೆಬ್ರವರಿಯಲ್ಲಿ ಪತ್ರ ಬರೆದು ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ, ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಪತ್ರ ಬರೆದಿದ್ದರೂ ಅವರನ್ನು ಕರೆದು ವಿಚಾರಣೆ ಮಾಡಿಲ್ಲ, ವಿಧಾನ ಪರಿಷತ್ ಸದಸ್ಯರು ಪತ್ರ ಬರೆದಿದ್ದರೂ ತನಿಖೆ ಮಾಡಲಿಲ್ಲ, ಅಂದು ಅಕ್ರಮ ನಡೆದಿಲ್ಲ, ಪರೀಕ್ಷೆ ಸಮರ್ಪಕವಾಗಿ ನಡೆದಿದೆ ಎಂದವರು ಇಂದು ಮರು ಪರೀಕ್ಷೆಗೆ ಏಕೆ ಆದೇಶ ನೀಡಿದರು? ಪೊಲೀಸರನ್ನು ಏಕೆ ವರ್ಗಾವಣೆ ಮಾಡಿದರು, ಹಾಗಾದರೆ ಬಿಜೆಪಿ ನಾಯಕರು ಜವಾಬ್ದಾರಿಯುತವಾಗಿ ಸರ್ಕಾರ ನಡೆಸುತ್ತಿದ್ದಾರೆಯೇ, ಜನರ ಭಾವನೆಗಳನ್ನು ಬೇರೆಡೆಗೆ ತಿರುಗಿಸಲು ರಾಜಕೀಯ ಮಾಡುತ್ತಿದ್ದಾರೆ, ಇದಕ್ಕೆ ಗೃಹ ಸಚಿವರು ಜವಾಬ್ದಾರರಾಗುತ್ತಾರೆ ಎಂದು ಆರೋಪಗಳ ಸುರಿಮಳೆಗೈದರು.
ಮನೆ ಏಕೆ ಕೊಟ್ಟಿಲ್ಲ: ಕಳೆದ ನಾಲ್ಕು ವರ್ಷಗಳಿಂದ ಬಡವರಿಗೆ ಒಂದು ಮನೆಯನ್ನು ಕಟ್ಟಿಕೊಡಲು ಏಕೆ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ, ಹೊಸ ಮನೆ ಕಟ್ಟಿಕೊಟ್ಟಿರುವ ಒಂದೇ ಒಂದು ನಿದರ್ಶನ ನೀಡಲಿ, ನಮ್ಮ ಸರ್ಕಾರದಲ್ಲಿ ಮಂಜೂರು ಮಾಡಿರುವ ಮನೆಗಳನ್ನು ಕಟ್ಟಿದ್ದೇವೆ ಎಂದು ತೋರಿಸಿದ್ದಾರೆ ಎಂದು ಟೀಕಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಹಿಂದಿನ ಸರ್ಕಾರದಲ್ಲಿ ಅಕ್ರಮ ನಡೆದಿತ್ತು ಎಂದು ಹೇಳುತ್ತಲೇ ಇರುತ್ತಾರೆ, ತಪ್ಪುಗಳಿದ್ದರೆ ವಿಚಾರಣೆ ಮಾಡಿಸಿ, ಅವರ ತಪ್ಪುಗಳಿದ್ದರೆ ವಿಚಾರಣೆ ಮಾಡಿ ಜೈಲಿಗೆ ಹೋಗಲಿ ಎಂದು ಸವಾಲು ಹಾಕಿದರು.