
ಮಳೆಯಿಂದ ಬಿದ್ದ ಮರದಡಿಯಲ್ಲಿ ಸಿಲುಕಿರುವ ಆಟೋ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬುಧವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ 70ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದು ಒಬ್ಬರು ಮೃತಪಟ್ಟಿದ್ದಾರೆ.
ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಟ್ರಾಫಿಕ್ ಜಾಮ್ಗೆ ಸಾಕ್ಷಿಯಾಗಿದ್ದು, ರಸ್ತೆಯ ಮೇಲೆ ಮುರಿದು ಬಿದ್ದ ಮರಗಳನ್ನು ತೆರವುಗೊಳಿಸಲು ಪಾಲಿಕೆ ಸಿಬ್ಬಂದಿ ಹರಸಾಹಸಪಟ್ಟರು.
ಆಟೋ ಮೇಲೆ ಬಿದ್ದ ಮರ, ಪ್ರಯಾಣಿಕ ಸಾವು
ನಗರದ ಕೇಶ್ವಾಪುರದಿಂದ ಸೋನಿಯಾ ಗಾಂಧಿ ನಗರದಲ್ಲಿರುವ ಮನೆಗೆ ಆಟೋರಿಕ್ಷಾದಲ್ಲಿ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ಪೇಂಟರ್ ರಾಬಿನ್ ಮರೋಶ್. ರಭಸದ ಗಾಳಿಗೆ ದೇಸಾಯಿ ವೃತ್ತದಲ್ಲಿ ಅವರು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾ ಮೇಲೆ ಮರ ಬಿದ್ದಿದೆ. ಕೂಡಲೇ ಸ್ಥಳೀಯರು ಆತನನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಿದರಾದರೂ, ಅವರು ಮೃತಪಟ್ಟಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಘಟನೆಯಲ್ಲಿ ಮೃತರ ಜೊತೆ ಪ್ರಯಾಣಿಸುತ್ತಿದ್ದ ಇತರರಿಗೂ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಮುಂದುವರಿಕೆ ಸಾಧ್ಯತೆ: ಹವಾಮಾನ ಇಲಾಖೆ
ಇನ್ನು ನಗರದ ಗಣೇಶಪೇಟೆ ಬಡಾವಣೆಯಲ್ಲಿ ಕಾರಿನ ಮೇಲೆ ಮರದ ಕೊಂಬೆ ಬಿದ್ದು ಹಾನಿ ಸಂಭವಿಸಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಕಿಮ್ಸ್ ಆವರಣ, ವಿದ್ಯಾನಗರ, ದೇಶಪಾಂಡೆ ನಗರ, ದೇವಾಂಗಪೇಟೆ, ನೇಕಾರ ನಗರ, ಹಳೇ ಹುಬ್ಬಳ್ಳಿ, ಭವಾನಿ ನಗರ, ಮಯೂರಿ ಎಸ್ಟೇಟ್, ಕೇಶ್ವಾಪುರ, ಗೋಕುಲ್ ರಸ್ತೆ, ಲಿಂಗರಾಜ್ ನಗರ ಸೇರಿದಂತೆ ಹಲವೆಡೆ ಮರಗಳು ಬಿದ್ದು ದ್ವಿಚಕ್ರ ವಾಹನಗಳು, ಆಟೋ ರಿಕ್ಷಾ ಸೇರಿದಂತೆ ಹಲವು ವಾಹನಗಳಿಗೆ ಹಾನಿಯಾಗಿದೆ.
ಇದನ್ನೂ ಓದಿ: ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ನಗರದಲ್ಲಿ ಮರಗಳು ಬಿದ್ದು ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಮತ್ತು ಹಲವಾರು ವಿದ್ಯುತ್ ಕೇಬಲ್ಗಳಿಗೆ ಹಾನಿಯಾಗಿದೆ. ಸರಣಿ ಘಟನೆಗಳ ನಂತರ ಎಚ್ಡಿಎಂಸಿ, ಅಗ್ನಿಶಾಮಕ ದಳ, ಅರಣ್ಯ ಸಿಬ್ಬಂದಿ, ಹೆಸ್ಕಾಂ ಸಿಬ್ಬಂದಿ ಮತ್ತು ಪೊಲೀಸರನ್ನು ಮರಗಳು, ಹಾನಿಗೊಳಗಾದ ವಾಹನಗಳು ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ನಿಯೋಜಿಸಲಾಯಿತು. ಸಮಸ್ಯೆಯನ್ನು ಸರಿಪಡಿಸಿದ ನಂತರ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿ ದುರಸ್ತಿ ಬಳಿಕ ಮರುಸ್ಥಾಪಿಸಲಾಗಿದೆ.