ಗುಂಡಿ ಮುಕ್ತ ರಸ್ತೆಗಳ ಬಗ್ಗೆ ಹೆಚ್ಚಿನ ಗಮನ: ಬಿಬಿಎಂಪಿ ನೂತನ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ರಸ್ತೆ ಗುಂಡಿಗಳ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವ್ಯಾಜ್ಯಗಳು ಮತ್ತು ನಾಗರಿಕರ ಹಲವು ಕುಂದುಕೊರತೆಗಳ ನಡುವೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರಾಗಿ ಹೊಸದಾಗಿ...
Published: 06th May 2022 04:20 PM | Last Updated: 06th May 2022 04:20 PM | A+A A-

ಗೌರವ್ ಗುಪ್ತಾರಿಂದ ಅಧಿಕಾರ ಸ್ವೀಕರಿಸಿದ ತುಷಾರ್ ಗಿರಿನಾಥ್
ಬೆಂಗಳೂರು: ರಸ್ತೆ ಗುಂಡಿಗಳ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವ್ಯಾಜ್ಯಗಳು ಮತ್ತು ನಾಗರಿಕರ ಹಲವು ಕುಂದುಕೊರತೆಗಳ ನಡುವೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರಾಗಿ ಹೊಸದಾಗಿ ನೇಮಕಗೊಂಡಿರುವ ತುಷಾರ್ ಗಿರಿನಾಥ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ತುಷಾರ್ ಗಿರಿನಾಥ್ ಅವರು, ರಸ್ತೆ ಗುಂಡಿಗಳ ನಿರ್ವಹಣೆಯ ಸಮಸ್ಯೆ ಈಗ ಕೇವಲ ಅದಕ್ಕಷ್ಟೇ ಸೀಮಿತವಾಗಿಲ್ಲ. ಅದು ಸಮಸ್ಯೆಗಳ ಆಗರವೇ ಆಗಿದೆ. ಗುಂಡಿಗಳ ಸಮಸ್ಯೆ ನಿರ್ವಹಣೆ ಮತ್ತು ಗುಂಡಿ ಮುಕ್ತ ರಸ್ತೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಈ ವಿಚಾರವನ್ನು ಹೈಕೋರ್ಟ್ ಹಾಗೂ ಮುಖ್ಯ ಕಾರ್ಯದರ್ಶಿಗಳ ಮುಂದೆ ಪ್ರಸ್ತಾಪಿಸಲಾಗಿದೆ ಎಂದರು.
ಇದನ್ನು ಓದಿ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ವರ್ಗಾವಣೆ, ನೂತನ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ನೇಮಕ
ಇತರೆ ಸರ್ಕಾರಿ ಸಂಸ್ಥೆಗಳೊಂದಿಗೆ ಸರಿಯಾದ ಸಮನ್ವಯ ಇದ್ದರೆ ರಸ್ತೆ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ನೂತನ ಮುಖ್ಯ ಆಯುಕ್ತರು ಒಪ್ಪಿಕೊಂಡಿದ್ದಾರೆ.
ನಗರದಲ್ಲಿ ಮಳೆ ಸಂಬಂಧಿತ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುವುದು ತಮ್ಮ ಮೊದಲ ಆದ್ಯತೆಯಾಗಿದೆ ಮತ್ತು ಇದಕ್ಕಾಗಿ ಎಲ್ಲಾ ಅಲ್ಪಾವಧಿಯ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಕೋವಿಡ್ 19 ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಪ್ರಕರಣಗಳು ಹೆಚ್ಚಾಗದಂತೆ ನೋಡಿಕೊಳ್ಳುವುದು ಮತ್ತೊಂದು ಸವಾಲಾಗಿದೆ ಎಂದು ಅವರು ಹೇಳಿದರು. ಮೂಲಸೌಕರ್ಯ ಮತ್ತು ಘನತ್ಯಾಜ್ಯ ನಿರ್ವಹಣೆ ಬಗ್ಗೆಯೂ ಹೆಚ್ಚು ಗಮನ ನೀಡಲಾಗುವುದು ಎಂದಿದ್ದಾರೆ.
ನಿರ್ಗಮಿತ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಚರಂಡಿಗಳು, ಮಣ್ಣಿನ ತ್ಯಾಜ್ಯ ನಿರ್ವಹಣೆ ಮತ್ತು ಮಾನ್ಸೂನ್ ಸನ್ನದ್ಧತೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ವರ್ಷದಿಂದ ವರ್ಷಕ್ಕೆ ಸುಧಾರಿಸಿದೆ. ಇತರ ಎರಡು ಪ್ರಧಾನ ಸಂಸ್ಥೆಗಳಾದ ಬೆಸ್ಕಾಂ ಮತ್ತು ಬಿಡಬ್ಲ್ಯೂಎಸ್ಎಸ್ ಬಿ ಸಹ ಅನೇಕ ಕ್ಷೇತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿವೆ ಎಂದರು.
ಗುತ್ತಿಗೆದಾರರು ಬಿಬಿಎಂಪಿಗೆ ಶೇ. 40ರಷ್ಟು ಕಮಿಷನ್ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗುಪ್ತಾ, ಲಂಚ ಕೇಳುವವರ ಹೆಸರುಗಳನ್ನು ನೀಡುವಂತೆ ಹೇಳಿದ್ದು, ಹೆಸರು ಹೇಳಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.