ಪಿಎಸ್ ಐ ಅಕ್ರಮ: ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಕೆ, ಇಬ್ಬರು ಆರೋಪಿಗಳ ತಪ್ಪೊಪ್ಪಿಗೆ!
ಪಿಎಸ್ ಐ ನೇಮಕಾತಿ ಪರೀಕ್ಷೆ ತನಿಖೆಯಲ್ಲಿ ಬಗೆದಷ್ಟು ಮತ್ತಷ್ಟು ಮಾಹಿತಿಗಳು ಹೊರಬೀಳುತ್ತಿವೆ. ಪರೀಕ್ಷಾ ಕೇಂದ್ರ ಪ್ರವೇಶಿಸಿದ ಕೂಡಲೇ ಬ್ಲೂಟೂತ್ ಸಾಧನಗಳನ್ನು ಪಡೆದುಕೊಂಡಿದ್ದಾಗಿ ಸಿಐಡಿ ಬಂಧಿಸಿರುವ ಇಬ್ಬರು ಪಿಎಸ್ ಐ ಆಕಾಂಕ್ಷಿಗಳು ತಪ್ಪೊಪ್ಪಿಕೊಂಡಿದ್ದಾರೆ.
Published: 07th May 2022 02:30 PM | Last Updated: 07th May 2022 02:32 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು/ಕಲಬುರಗಿ: ಪಿಎಸ್ ಐ ನೇಮಕಾತಿ ಪರೀಕ್ಷೆ ತನಿಖೆಯಲ್ಲಿ ಬಗೆದಷ್ಟು ಮತ್ತಷ್ಟು ಮಾಹಿತಿಗಳು ಹೊರಬೀಳುತ್ತಿವೆ.
ಪರೀಕ್ಷಾ ಕೇಂದ್ರ ಪ್ರವೇಶಿಸಿದ ಕೂಡಲೇ ಬ್ಲೂಟೂತ್ ಸಾಧನಗಳನ್ನು ಪಡೆದುಕೊಂಡಿದ್ದಾಗಿ ಸಿಐಡಿ ಬಂಧಿಸಿರುವ ಇಬ್ಬರು ಪಿಎಸ್ ಐ ಆಕಾಂಕ್ಷಿಗಳು ತಪ್ಪೊಪ್ಪಿಕೊಂಡಿದ್ದು, ತನಿಖಾಧಿಕಾರಿಗಳು ಈಗ ರಾಜ್ಯಾದ್ಯಂತ ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.
ಈ ಮಧ್ಯೆ ಕೆಎಸ್ ಆರ್ ಪಿ ಡಿವೈಎಸ್ ಪಿ ವೈಜನಾಥ್ ರೇವೂರ್ ಅವರನ್ನು ಸಿಐಡಿ ವಶಕ್ಕೆ ಪಡೆದುಕೊಂಡಿದ್ದು, ಕಲಬುರ್ಗಿಯ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿರುವ ತಾತ್ಕಾಲಿಕ ಸಿಐಡಿ ಕಚೇರಿಗೆ ಅವರನ್ನು ವಿಚಾರಣೆಗಾಗಿ ಕರೆದೊಯ್ಯಲಾಯಿತು. ಅಪ್ಜಲ್ ಪುರ ತಾಲೂಕಿನ ವೈಜನಾಥ್ , ಈ ಹಗರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಅವರಿಗೆ ನೆರವಾಗಿರುವ ಆರೋಪ ಎದುರಿಸುತ್ತಿದ್ದಾರೆ. ಮತ್ತೋರ್ವ ಡಿವೈಎಸ್ ಪಿಯನ್ನು ಗುರುವಾರ ಬಂಧಿಸಲಾಗಿತ್ತು.
ಇದನ್ನೂ ಓದಿ: ಪಿಎಸ್ಐ ಹಗರಣ: ಬೇರುಮಟ್ಟದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರು ಮುಟ್ಟಿ ನೋಡಿಕೊಳ್ಳುವಂತೆ ಮಾಡ್ತೀವಿ- ಆರಗ ಜ್ಞಾನೇಂದ್ರ
ಇಬ್ಬರು ಪಿಎಸ್ ಐ ಆಕಾಂಕ್ಷಿಗಳು ಸೇರಿದಂತೆ 22 ಮಂದಿಯ ಹೆಸರು ಎಫ್ ಐಆರ್ ನಲ್ಲಿದ್ದು, ಬ್ಲೂಟೂತ್ ಮೂಲಕ ಸರಿಯಾದ ಉತ್ತರವನ್ನು ನೀಡಲಾಗುತಿತ್ತು. ತದನಂತರ ಮೌಲ್ಯಮಾಪಕರು ಒಎಂಆರ್ ಶೀಟ್ಗಳ ಮೇಲೆ ತಿದ್ದಿ ತಪ್ಪುಗಳನ್ನು ಸರಿಪಡಿಸಿದ್ದರು, ಇದು ಎಫ್ಎಸ್ಎಲ್ ನಡೆಸಿದ ವಿಶ್ಲೇಷಣೆಯಲ್ಲಿ ಕಂಡುಬಂದಿದೆ ಎಂದು ಹಿರಿಯ ಸಿಐಡಿ ಅಧಿಕಾರಿ ತಿಳಿಸಿದ್ದಾರೆ.
ಇತರ ಆರೋಪಿಗಳ ಪತ್ತೆಗಾಗಿ ಸಿಐಡಿ ತಂಡ ರಚನೆ: ಎಫ್ ಎಸ್ ಎಲ್ ವರದಿಯೊಂದನ್ನು ವಾರದ ಹಿಂದೆಯೇ ಸಿಐಡಿಗೆ ಕಳುಹಿಸಿದ್ದು, ಆ ವರದಿ ಆಧಾರದ ಮೇಲೆ ಸಿಐಡಿ ಎಫ್ ಐಆರ್ ದಾಖಲಿಸಿದೆ. ಕೆಲವು ಮೇಲ್ವಿಚಾರಕರು ಸೇರಿದಂತೆ ಇತರ ಆರೋಪಿಗಳ ಪತ್ತೆಗಾಗಿ ಸಿಐಡಿ ತಂಡವೊಂದನ್ನು ರಚಿಸಿದೆ. ನಗರದ ಕೋರ್ಟ್ ವೊಂದರಿಂದ ಅನುಮತಿ ಪಡೆದ ಬಳಿಕ ಆರೋಪಿಗಳ ಬ್ಯಾಂಕ್ ಖಾತೆ ಮತ್ತು ಕಾಲ್ ರೆಕಾರ್ಡ್ ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಎಲ್ಲಾ 47 ಆರೋಪಿಗಳನ್ನು ಬಂಧಿಸಲಾಗಿದೆ. ಸಿಐಡಿ ಅಧಿಕಾರಿಗಳು ಎಲ್ಲ ಆರೋಪಿಗಳನ್ನು ಪತ್ತೆ ಮಾಡಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.