ಹಾವೇರಿಯಲ್ಲಿ ಕೃಷ್ಣಮೃಗ ಬೇಟೆ: ಐವರನ್ನು ಬಂಧಿಸಿದ ಪೊಲೀಸರು!
ಕೃಷ್ಣಮೃಗ ಬೇಟೆಯಾಡುತ್ತಿದ್ದ ಐವರನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಎರಡು ಕೃಷ್ಣಮೃಗಗಳ ಮೃತದೇಹ, ಜಿಂಕೆಗಳನ್ನು ಕೊಲ್ಲಲು ಬಳಸಿದ ರೈಫಲ್ ಮತ್ತು ಇತರ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Published: 08th May 2022 11:11 PM | Last Updated: 08th May 2022 11:11 PM | A+A A-

ವಶಪಡಿಸಿಕೊಂಡ ಜಿಂಕೆಗಳ ಮೃತದೇಹ
ಹಾವೇರಿ: ಕೃಷ್ಣಮೃಗ ಬೇಟೆಯಾಡುತ್ತಿದ್ದ ಐವರನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಎರಡು ಕೃಷ್ಣಮೃಗಗಳ ಮೃತದೇಹ, ಜಿಂಕೆಗಳನ್ನು ಕೊಲ್ಲಲು ಬಳಸಿದ ರೈಫಲ್ ಮತ್ತು ಇತರ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಣೇಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ರಾತ್ರಿ ಕರ್ತವ್ಯ ನಿರತರಾಗಿದ್ದ ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ(ಇಆರ್ಎಸ್ಎಸ್) ಸಿಬ್ಬಂದಿ ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ಪಿಕಪ್ ವಾಹನವೊಂದು ನಿಲ್ಲದೆ ತಪಾಸಣಾ ಕೇಂದ್ರವನ್ನು ಅತಿವೇಗದಲ್ಲಿ ದಾಟಿತು. ಅನುಮಾನಗೊಂಡ ಪೊಲೀಸರು ವಾಹನವನ್ನು ಬೆನ್ನಟ್ಟಲು ಆರಂಭಿಸಿದರು.
ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಮತ್ತು ಸೈರನ್ ಸದ್ದು ಮಾಡಿದರೂ ವಾಹನ ನಿಲ್ಲಲಿಲ್ಲ, ಹೀಗಾಗಿ ವೇಗವಾಗಿ ಬಂದ ವಾಹನವನ್ನು ತಡೆಯಲು ಪೊಲೀಸರು ಹಿರೇಕೆರೂರು ಮತ್ತು ರಟ್ಟೀಹಳ್ಳಿಯ ಇತರ ಇಆರ್ಎಸ್ಎಸ್ ತಂಡಗಳ ಸಹಾಯವನ್ನು ಕೋರಿದರು. ಕೊನೆಗೆ ರಟ್ಟೀಹಳ್ಳಿ ಪಟ್ಟಣದ ಬಳಿ ವಾಹನವನ್ನು ತಡೆದು ಆರೋಪಿಗಳನ್ನು ಬಂಧಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ನಿವಾಸಿಗಳಾದ ಸಾದಿಕ್ (48), ಮಹಮ್ಮದ್ ಅಲಿ ನಜೀರ್ (32), ಸೈಯದ್ ಮುಕೀಬ್ (21), ಸೈಯದ್ ನಸರುಲ್ಲಾ (52), ಸುಲ್ತಾನ್ ಖಾನ್ (21) ಬಂಧಿತ ಆರೋಪಿಗಳಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೃಷ್ಣಮೃಗಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಶೆಡ್ಯೂಲ್ 1 ರ ಅಡಿಯಲ್ಲಿ ರಕ್ಷಿಸಲಾಗಿದೆ. ಅವುಗಳನ್ನು ಬೇಟೆಯಾಡಿದ ಅಪರಾಧ ಸಾಬೀತಾದರೆ ಆರೋಪಿಗಳು ದಂಡದ ಜೊತೆಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ.
ಹಾವೇರಿ ಜಿಲ್ಲೆಯಲ್ಲಿ ಕೃಷ್ಣಮೃಗಗಳ ಸಂಖ್ಯೆ ಗಣನೀಯವಾಗಿದೆ. ಕೃಷ್ಣಮೃಗಗಳ ಸಂರಕ್ಷಣೆಗಾಗಿ ಮೀಸಲಾದ ಸಂರಕ್ಷಿತ ಪ್ರದೇಶವನ್ನು ಹೊಂದಿರುವ ರಾಣೆಬೆನ್ನೂರಿನಲ್ಲಿ ಈ ಜಿಂಕೆಗಳ ದೊಡ್ಡ ಗುಂಪುಗಳು ಮುಕ್ತವಾಗಿ ತಿರುಗಾಡುವುದನ್ನು ಕಾಣಬಹುದು.
ರಾಣೆಬೆನ್ನೂರು, ಹಿರೇಕೆರೂರು, ರಟ್ಟೀಹಳ್ಳಿ ತಾಲೂಕಿನ ಇಆರ್ಎಸ್ಎಸ್ ತಂಡಗಳ ಜಂಟಿ ಕಾರ್ಯಾಚರಣೆಯಾಗಿದ್ದು, ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.