ಧರ್ಮ ದಂಗಲ್: ನಾಳೆ ಬೆಳಗ್ಗೆ 5 ಗಂಟೆಗೆ ದೇವಸ್ಥಾನಗಳಲ್ಲಿ ಮೊಳಗಲಿದೆ ಹನುಮಾನ್ ಚಾಲೀಸಾ, ಸುಪ್ರಭಾತ!
ಮಹಾರಾಷ್ಟ್ರದಂತೆ ನಾಳೆಯಿಂದ ರಾಜ್ಯದ ದೇಗುಲಗಳಲ್ಲೂ ಹನುಮಾನ್ ಚಾಲೀಸ್ ಮೊಳಗಲಿದೆ. ಮಸೀದಿಗಳಲ್ಲಿ ಅಜಾನ್ ಕೂಗಲು ಧ್ವನಿವರ್ಧಕ ಬಳಸುತ್ತಿರುವವರ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿರುವ ಹಿಂದೂಪರ ಸಂಘಟನೆಗಳು..
Published: 08th May 2022 10:40 PM | Last Updated: 08th May 2022 10:40 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮಹಾರಾಷ್ಟ್ರದಂತೆ ನಾಳೆಯಿಂದ ರಾಜ್ಯದ ದೇಗುಲಗಳಲ್ಲೂ ಹನುಮಾನ್ ಚಾಲೀಸ್ ಮೊಳಗಲಿದೆ. ಮಸೀದಿಗಳಲ್ಲಿ ಅಜಾನ್ ಕೂಗಲು ಧ್ವನಿವರ್ಧಕ ಬಳಸುತ್ತಿರುವವರ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿರುವ ಹಿಂದೂಪರ ಸಂಘಟನೆಗಳು ರಾಜ್ಯದ ಎಲ್ಲೆಡೆ ದೇವಾಲಯಗಳಲ್ಲಿ ಹನುಮಾನ್ ಚಾಲೀಸ ಮೊಳಗಿಸಲು ನಿರ್ಧರಿಸಿವೆ.
ಕರ್ನಾಟಕದಾದ್ಯಂತ 1000ಕ್ಕೂ ಹೆಚ್ಚು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಸುಪ್ರಭಾತ ಅಭಿಯಾನದ ಮೂಲಕ ಹನುಮಾನ್ ಚಾಲಿಸ ಪಠನೆ ಮಾಡಲು ಹಿಂದೂಪರ ಸಂಘಟನೆಗಳು ಮುಂದಾಗಿವೆ.
ಹಿಂದೂಸಂಘಟನೆಗಳು ಆಜಾನ್ ಸ್ಪೀಕರ್ ತೆರವಿಗೆ ಆಗ್ರಹಿಸಿದ್ದು, ಸರ್ಕಾರಕ್ಕೆ ಮೇ 3ರವರೆಗೆ ಮುಖಂಡರು ಗಡುವು ನೀಡಿದ್ದರು. ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆ ರಾಮಜಪಕ್ಕೆ ನಿರ್ಧಾರ ಮಾಡಲಾಗಿದ್ದು, ಬೆಳಗ್ಗೆ 5 ಗಂಟೆಯಿಂದಲೇ ದೇಗುಲಗಳಲ್ಲಿ ರಾಮಜಪ ಮೊಳಗಲಿದೆ. ರಾಮನಾಮ, ಹನುಮಾನ್ ಚಾಲೀಸ್, ವೇದ ಮಂತ್ರ ಪಠಣೆಗೆ ಲೌಡ್ಸ್ಪೀಕರ್ ಅಳವಡಿಕೆ ಬಗ್ಗೆ ಕಾಳಿಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ.
ಇನ್ನಾದರೂ ಎಚ್ಚೆತ್ತುಕೊಂಡು ಸರ್ಕಾರ ಧ್ವನಿವರ್ಧಕಗಳನ್ನು ತೆರವು ಮಾಡಿದರೆ ನಾವು ನಮ್ಮ ಹೋರಾಟದಿಂದ ಹಿಂದೆ ಸರಿಯುತ್ತೇವೆ. ಇಲ್ಲದಿದ್ದರೆ ನಾಳೆಯಿಂದ ಹನುಮಾನ್ ಚಾಲಿಸ ಮೊಳಗಲಿವೆ. ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಎಂಬ ಎಚ್ಚರಿಕೆಯನ್ನು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಈಗಾಗಲೇ ನೀಡಿದ್ದಾರೆ.
ಅಜಾನ್ ವಿರುದ್ಧ ತೀವ್ರ ಹೋರಾಟ ಕೈಗೊಳ್ಳಲು ನಿರ್ಧರಿಸಿರುವ ಹಿಂದೂಪರ ಸಂಘಟನೆಗಳಿಗೆ ವಿವಿಧ ಮಠದ ಮಠಾಧೀಶರೂ ಕೈ ಜೋಡಿಸಿದ್ದಾರೆ. ನಾಳಿನ ಹೋರಾಟದ ರೂಪುರೇಷೆ ಸಂಬಂಧ ಇಂದು ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ವಿವಿಧೆಡೆ ಸಭೆಗಳು ನಡೆದಿವೆ.
ಧಾರ್ಮಿಕ ಸ್ಥಳಗಳಿಂದ ಸುಮಾರು 54,000 ಅನಧಿಕೃತ ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ ಮತ್ತು ಉತ್ತರ ಪ್ರದೇಶದಾದ್ಯಂತ 60,000 ಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ಅನುಮತಿಸುವ ಮಿತಿಗಳಿಗೆ ಹೊಂದಿಸಲಾಗಿದೆ. ಇದೇ ರೀತಿ ರಾಜ್ಯದಲ್ಲಿ ಆಗಲಿ ಎಂದು ಹಿಂದೂಪರ ಸಂಘಟನೆಗಳು ಅಭಿಯಾನ ಪ್ರಾರಂಭಿಸಿವೆ.