
ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸುತ್ತಿರುವ ಬಿಬಿಎಂಪಿ ಮುಖ್ಯ ಆಯುಕ್ತ.
ಬೆಂಗಳೂರು: ನೂತನವಾಗಿ ನೇಮಕಗೊಂಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಭಾನುವಾರ ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಯಲಹಂಕದ 1.8 ಕಿ.ಮೀ. ಉದ್ದದ ಇಂಟಿಗ್ರೇಟೆಡ್ ಎಲಿವೇಟೆಡ್ ಕಾರಿಡಾರ್, ಜಯಮಹಲ್ ಹಾಗೂ ಸ್ಯಾಂಕಿ ಬಂಡ್ ರಸ್ತೆಯ ಅಗಲೀಕರಣ, ಸಂಪಿಗೆ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಮತ್ತು ಕೋರಮಂಗಲ ರಾಜಕಾಲುವೆ (ಕೆ-100) ಜಲಮಾರ್ಗ ಯೋಜನೆಯ ಕಾಮಗಾರಿಯನ್ನು ತುಷಾರ್ ಗಿರಿನಾಥ್ ಅವರು ಪರಿಶೀಲನೆ ನಡೆಸಿದರು.
ಇದನ್ನೂ ಓದಿ: 2022-23ನೇ ಸಾಲಿನ ಬಿಬಿಎಂಪಿ ಬಜೆಟ್'ಗೆ ರಾಜ್ಯ ಸರ್ಕಾರ ಅನುಮೋದನೆ
ಈ ವೇಳೆ ಮಾತನಾಡಿದ ಅವರು, ಯಲಹಂಕ ಪೊಲೀಸ್ ಸ್ಟೇಷನ್ ಜಂಕ್ಷನ್ ನಿಂದ ಯಲಹಂಕ ನ್ಯೂಟೌನ್'ನ ಜಲಮಂಡಳಿಯ ಜಂಕ್ಷನ್ ವರೆಗೆ 1.8 ಕಿ.ಮೀ ಉದ್ದದ ಇಂಟಿಗ್ರೇಟೆಡ್ ಎಲೆವೇಟೆಡ್ ಕಾರಿಡಾರ್'ನ್ನು ರೂ.175 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಕಾಮಗಾರಿ ಪೂರ್ಣಗೊಂಡರೆ, ಈ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿದೆ. ಎಂ.ಎಸ್.ಪಾಳ್ಯ ಜಂಕ್ಷನ್ ನಲ್ಲಿ ನಗರೋತ್ಥಾನ ಯೋಜನೆ ಅನುದಾನದಲ್ಲಿ ಗ್ರೇಡ್ ಸೆಪರೇಟರ್ ಕಾಮಗಾರಿಗೆ ಟೆಂಡರ್ ಅಂತಿಮಗೊಂಡಿದ್ದು, ಸರ್ಕಾರದ ಅನುಮೋದನೆ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಬಳಿಕ ವಿವಿಧ ಪ್ರದೇಶಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಪರಿಶೀಲಿಸಿದ ಬಿಬಿಎಂಪಿ ಮುಖ್ಯಸ್ಥರಿಗೆ, ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಈ ವೇಳೆ ವಾಹನ ಸಂಚಾರಕ್ಕೆ ತೊಂದರೆ ಉಂಟಾಗದಂತೆ ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಅವರು ಸೂಚಿಸಿದರು.