
ಸಿಎಂ ಬಸವರಾಜ ಬೊಮ್ಮಾಯಿ
ನೆಲಮಂಗಲ: ಹಿಂದುಳಿದ ವರ್ಗಕ್ಕೆ ಶಕ್ತಿಯನ್ನು ತುಂಬಿ ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಶ್ರೀ ಗಾಯತ್ರಿಪೀಠ ಮಹಾಸಂಸ್ಥಾನದಲ್ಲಿ ಆಯೋಜಿಸಿರುವ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮೀಜಿಯವರ 33 ನೇ ಪೀಠಾರೋಹಣ ವಾರ್ಷಿಕೋತ್ಸವ ಹಾಗೂ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿಂದುಳಿದ ವರ್ಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಲು ಪ್ರತ್ಯೇಕ ಆಯೋಗವನ್ನು ನ್ಯಾಯಮೂರ್ತಿ ಭಕ್ತವತ್ಸಲ ಅವರ ಅಧ್ಯಕ್ಷತೆಯನ್ನು ರಚಿಸಲಾಗಿದೆ. ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಅಂಶಗಳ ಆಧಾರದ ಮೇಲೆ ಸಮುದಾಯದ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.
ಸಮುದಾಯದ ವಿಕಾಸಕ್ಕೆ ವಿವಿಧ ಕಾರ್ಯಕ್ರಮಗಳು :
ಸಮಾಜದ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾದಾಗ ಮಾತ್ರ ಸಮುದಾಯ ವಿಕಸನವಾಗುತ್ತದೆ. ನೇಕಾರ ಸಮ್ಮಾನ ಯೋಜನೆಯಡಿ ನೀಡಲಾಗುವ ಆರ್ಥಿಕ ನೆರವು 5000 ರೂ.ಗಳಿಗೆ ಹೆಚ್ಚಳ , ಸಹಕಾರ ಬ್ಯಾಂಕ್ ಹಾಗು ಶೆಡ್ಯೂಲ್ ಬ್ಯಾಂಕಿನಲ್ಲಿ ಪಡೆಯುವ ಸಾಲಕ್ಕೆ 8 % ಬಡ್ಡಿದರವನ್ನು ಶೇ. 2-3 ಕ್ಕೆ ಇಳಿಸಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಸಮುದಾಯದ ಮಕ್ಕಳು ಪಿಯುಸಿಯಿಂದ ಹಿಡಿದು ಪಿಜಿವರೆಗೆ ಶಿಷ್ಯ ವೇತನ ನೀಡುವ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ನೇಕಾರಿಕೆಯಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆಗೆ ಸರ್ಕಾರ ಸಹಕರಿಸುತ್ತದೆ. ಸಮುದಾಯದ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಲಾಗುವುದು. ಮಠಗಳಿಗೆ ಎಲ್ಲ ಸಹಾಯವನ್ನು ಮಾಡಲಾಗುತ್ತಿದೆ. ಗಾಯತ್ರಿಪೀಠ ಮಹಾಸಂಸ್ಥಾನಕ್ಕೆ 1 ಕೋಟಿ ರೂ.ನೀಡಲಾಗಿದ್ದು, ಹೆಚ್ಚುವರಿ 4 ಕೋಟಿ ರೂ.ಗಳನ್ನು ನೀಡಲಾಗುವುದು ಎಂದರು.
ಕಠಿಣ ಪರಿಶ್ರಮ, ಕಾಯಕ ನಿಷ್ಠೆ ಸಮುದಾಯದ ಗುಣಧರ್ಮ:
ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಕಾಯಕ ನಿಷ್ಠೆ , ಶ್ರದ್ಧೆ ದೇವಾಂಗ ಸಮಾಜದ ಗುಣಧರ್ಮಗಳು. ಸಮುದಾಯವರು ನೇಕಾರಿಕೆ ದೈವಕತ್ತವಾದ ಕಲೆ. ಈ ಕ್ಷೇತ್ರದಲ್ಲಿ ಸಾಕಷ್ಟು ಆಧುನೀಕರಣ ಬಂದಿದೆ. ಆಧುನೀಕರಣದ ನಡುವೆಯೂ ಕಸುಬನ್ನು ಈ ಸಮಾಜ ಉಳಿಸಿಕೊಂಡು ಬಂದಿದೆ. ಜಾಗತೀಕರಣ, ಆಧುನೀಕರಣ, ಖಾಸಗೀಕರಣದ ನಡುವೆ ಅಂತ:ಕರಣವಿರಬೇಕು. ಈ ಸಮಾಜವನ್ನು ಮುನ್ನೆಡೆಸಲು ದಕ್ಷವಾದ ಸ್ವಾಮೀಜಿಗಳಿದ್ದಾರೆ. ತಮ್ಮ ಅನುಭವವನ್ನು ಸಮುದಾಯದ ಏಳಿಗೆಗೆ ಮೀಸಲಿಟ್ಟಿದ್ದಾರೆ. ಭಕ್ತಿಯೆಂದರೆ ಗುರು ಮತ್ತು ಭಕ್ತರ ನಡುವೆ ಇರುವ ಕರಾರುರಹಿತ ಪ್ರೀತಿ. ದೇವರ ದಾಸಿಮಯ್ಯ ವಚನಗಳು ಅತ್ಯಂತ ಶ್ರೇಷ್ಟವಾದವು. ಸಮುದಾಯದ ಬಗ್ಗೆ ಸಾಮಾಜಿಕ ಸಂಬಂಧದ ಜೊತೆಗೆ ನನ್ನ ತಾಯಿಯ ಮೂಲಕ ಕಲಿತ ಆಧ್ಯಾತ್ಮದ ಸಂಬಂಧವೂ ನನ್ನ ಮನಸ್ಸಿನಲ್ಲಿ ಬೆಸೆದುಕೊಂಡಿದೆ ಎಂದರು.