2022-23ನೇ ಸಾಲಿನ ಬಿಬಿಎಂಪಿ ಬಜೆಟ್'ಗೆ ರಾಜ್ಯ ಸರ್ಕಾರ ಅನುಮೋದನೆ
2022-23ನೇ ಸಾಲಿನ ಬಿಬಿಎಂಪಿ ಬಜೆಟ್'ಗೆ ರಾಜ್ಯ ಸರ್ಕಾರ ಶನಿವಾರ ಅನುಮೋದನೆ ನೀಡಿದ್ದು, ಬಜೆಟ್ ಗಾತ್ರವನ್ನು ರೂ.10,480 ಕೋಟಿಯಿಂದ ರೂ.10,858 ಕೋಟಿಗೆ ಹೆಚ್ಚಳ ಮಾಡಿ ಆದೇಶಿಸಿದೆ.
Published: 09th May 2022 11:03 AM | Last Updated: 09th May 2022 01:51 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: 2022-23ನೇ ಸಾಲಿನ ಬಿಬಿಎಂಪಿ ಬಜೆಟ್'ಗೆ ರಾಜ್ಯ ಸರ್ಕಾರ ಶನಿವಾರ ಅನುಮೋದನೆ ನೀಡಿದ್ದು, ಬಜೆಟ್ ಗಾತ್ರವನ್ನು ರೂ.10,480 ಕೋಟಿಯಿಂದ ರೂ.10,858 ಕೋಟಿಗೆ ಹೆಚ್ಚಳ ಮಾಡಿ ಆದೇಶಿಸಿದೆ.
2022–23ನೇ ಸಾಲಿನ ಬಜೆಟ್ ಅನ್ನು ಮಾರ್ಚ್ 31ರ ರಾತ್ರಿ ಬಿಬಿಎಂಪಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿತ್ತು. ರೂ.10,484.28 ಕೋಟಿ ಆದಾಯ ನಿರೀಕ್ಷಿಸಿದ್ದ ಬಿಬಿಎಂಪಿ, ಮುಂದಿನ ಆರ್ಥಿಕ ವರ್ಷದಲ್ಲಿ ಒಟ್ಟು ರೂ.10,480.93 ಕೋಟಿ ವೆಚ್ಚ ಮಾಡುವುದಾಗಿ ತಿಳಿಸಿತ್ತು.
ಇದರಂತೆ ನಗರಾಭಿವೃದ್ಧಿಗೆ ಇಲಾಖೆಯು ಬಿಬಿಎಂಪಿ ಬಜೆಟ್ಗೆ ಅನುಮೋದನೆ ನೀಡುವಾಗ ಕೆಲವೊಂದು ಕಾಮಗಾರಿಗಳಿಗೆ ಹಾಗೂ ಕಾರ್ಯಕ್ರಮಗಳಿಗೆ ಅನುದಾನವನ್ನು ಹೆಚ್ಚಳ ಮಾಡಿದೆ.
ಇದನ್ನೂ ಓದಿ: ನಗರ ಸಂಚಾರ ಮಾಡಿದ ಪಾಲಿಕ ನೂತನ ಮುಖ್ಯ ಆಯಕ್ತ: ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ಹೆಚ್ಚುವರಿಯಾಗಿ ಸಂಗ್ರಹವಾಗಬಹುದಾದ ಆದಾಯವನ್ನು ಖಾತರಿಪಡಿಸಿಕೊಂಡ ನಂತರವೇ ಈ ಹೆಚ್ಚುವರಿ ಅನುದಾನದಡಿ ಜಾರಿಗೊಳಿಸಲು ಉದ್ದೇಶಿಸಿದ ಕಾರ್ಯಕ್ರಮಗಳನ್ನು ಅಥವಾ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬಹುದು ಎಂದು ನಗರಾಭಿವೃದ್ಧಿ ಇಲಾಖೆ ಷರತ್ತು ವಿಧಿಸಿದೆ.
ಕಸ ನಿರ್ವಹಣೆ ಘಟಕಗಳ ಮತ್ತು ಯಂತ್ರೋಪಕರಣಗಳ ದುರಸ್ತಿ ಮತ್ತು ನಿರ್ವಹಣೆ ಸಲುವಾಗಿ ಬಜೆಟ್ನಲ್ಲಿ ರೂ. 15 ಕೋಟಿ ನಿಗದಿಪಡಿಸಲಾಗಿತ್ತು. ಈ ಮೊತ್ತವನ್ನು ರೂ.90 ಕೋಟಿಗೆ ಹೆಚ್ಚಿಸಲಾಗಿದೆ. ಇನ್ನು ಕುಡಿಯುವ ನೀರು ಪೂರೈಕೆಗಾಗಿ ರೂ.40 ಕೋಟಿ ನಿಗದಿಪಡಿಸಲಾಗಿತ್ತು. ಈ ಮೊತ್ತವನ್ನು ರೂ.65 ಕೋಟಿಗೆ ಹೆಚ್ಚಿಸಲಾಗಿದೆ. ಇದಕ್ಕೆ ಬಳಸಬೇಕಾಗುವ ಹೆಚ್ಚುವರಿ ರೂ.25 ಕೋಟಿಯನ್ನು ಕೊಳವೆಬಾವಿಗಳ ನಿರ್ವಹಣೆಗೆ ವಿನಿಯೋಗಿಸಬೇಕು. ಈ ಕಾರ್ಯವನ್ನು ಜಲಮಂಡಳಿ ಮೂಲಕ ನಿರ್ವಹಿಸಿದರೆ, ಅನುದಾನವನ್ನೂ ಅವರಿಗೇ ವರ್ಗಾಯಿಸಬೇಕು ಎಂದು ಷರತ್ತು ವಿಧಿಸಲಾಗಿದೆ.
ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಧಿಕಾರಾವಧಿ ವಿಸ್ತರಿಸಿ: ಸರ್ಕಾರಕ್ಕೆ ತುಷಾರ್ ಗಿರಿನಾಥ್ ಮನವಿ
ಕಸ ವಿಲೇವಾರಿ ಮಾಡುವ ಭೂಭರ್ತಿ ಘಟಕಗಳು, ಕಸ ವಿಲೇವಾರಿ ಘಟಕಗಳು ಮತ್ತು ಕ್ವಾರಿಗಳ ನಿರ್ವಹಣೆಗೆ ನಿಗದಿಪಡಿಸಿದ್ದ ರೂ.20 ಕೋಟಿ ಅನುದಾನವನ್ನು ರೂ. 95 ಕೋಟಿಗೆ ಹೆಚ್ಚಿಸಲಾಗಿದೆ.
ಸರ್ಕಾರದ ಅನುದಾನದಡಿ ಕೈಗೊಳ್ಳುವ ಕಾಮಗಾರಿಗಳಿಗೆ ಬಿಬಿಎಂಪಿ ವತಿಯಿಂದ ನೀಡಲಾಗುವ ಹೊಂದಾಣಿಕೆ ವಂತಿಗೆ ಮೊತ್ತಕ್ಕಾಗಿ ರೂ. 20 ಕೋಟಿ ನಿಗದಿಪಡಿಸಲಾಗಿದೆ.
ಮೇಯರ್ ಅವರ ವಿವೇಚನೆ ಕೋಟಾದಡಿ ಪತ್ರಕರ್ತರಿಗೆ ನೀಡುವ ವೈದ್ಯಕೀಯ ವೆಚ್ಚದ ಪರಿಹಾರದ ಅನುದಾನವನ್ನು ರೂ.50 ಲಕ್ಷದಿಂದ ರೂ. 2 ಕೋಟಿಗೆ ಹೆಚ್ಚಿಸಲಾಗಿದೆ. ಐಪಿಡಿ ಸಾಲಪ್ಪ ಸ್ಮರಣಾರ್ಥ ಕೈಗೊಳ್ಳುವ ಕಲ್ಯಾಣ ಕಾರ್ಯಕ್ರಮಗಳಿಗೆ ರೂ.1 ಕೋಟಿ ಅನುದಾನ ಒದಗಿಸಲಾಗಿದೆ.
ಬಿಬಿಎಂಪಿ ಬಜೆಟ್ ಮಂಡಿಸಿ ತಿಂಗಳು ಕಳೆದರೂ ಸರ್ಕಾರದ ಅನುಮೋದನೆ ಸಿಕ್ಕಿರಲಿಲ್ಲ. ‘ಪ್ರಜಾವಾಣಿ’ಯು ಗುರುವಾರದ ಸಂಚಿಕೆಯಲ್ಲಿ ‘ತಿಂಗಳು ಕಳೆದರೂ ಬಿಬಿಎಂಪಿ ಬಜೆಟ್ಗೆ ಸಿಕ್ಕಿಲ್ಲ ಅನುಮೋದನೆ’ ಎಂಬ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಇದಾಗಿ ಎರಡೇ ದಿನದಲ್ಲಿ ಸರ್ಕಾರ ಬಿಬಿಎಂಪಿ ಬಜೆಟ್ಗೆ ಅನುಮೋದನೆ ನೀಡಿದೆ.
ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಆರೋಗ್ಯ ಕೇಂದ್ರಗಳು ಮತ್ತೆ ಆರೋಗ್ಯ ಇಲಾಖೆ ಸುಪರ್ದಿಗೆ: ಸರ್ಕಾರ ಆದೇಶ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ''ಬಜೆಟ್ಗೆ ಅನುಮೋದನೆ ದೊರೆತಿದೆ, ಆದರೆ ಅಧಿಕೃತವಾಗಿ ನಮ್ಮೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸಬೇಕಿದೆ. ಸೋಮವಾರದ ವೇಳೆಗೆ ಈ ಕುರಿತು ಅಧಿಕೃತ ಮಾತುಕತೆಗಳು ನಡೆಯುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ನ್ಯಾಯಾಲಯದಲ್ಲಿ ಹಲವು ಪ್ರಕರಣಗಳಿದ್ದು, ಕಾಮಗಾರಿಗಳ ಅನುಷ್ಠಾನಕ್ಕೆ ನ್ಯಾಯಾಂಗ ಮತ್ತು ನಾಗರಿಕರಿಂದ ಟೀಕೆಗಳು ಬರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಬಜೆಟ್ ಮೊತ್ತ ಹೆಚ್ಚಿಸಲಾಗಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಪ್ರಿಲ್ನಲ್ಲಿ ಆಸ್ತಿ ತೆರಿಗೆ ಸಂಗ್ರಹ ಉತ್ತಮವಾಗಿದ್ದರೂ, ಸ್ಥಿರವಾಗಿಲ್ಲ ಎಂಬುದನ್ನು ಸರ್ಕಾರ ಗಮನಿಸಿದೆ ಎಂದು ಅಧಿಕಾರಿ ಹೇಳಿದರು.
ಇದನ್ನೂ ಓದಿ: ಗುಂಡಿ ಮುಕ್ತ ರಸ್ತೆಗಳ ಬಗ್ಗೆ ಹೆಚ್ಚಿನ ಗಮನ: ಬಿಬಿಎಂಪಿ ನೂತನ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ದೊಡ್ಡ ದೊಡ್ಡ ಆಸ್ತಿಗಳು ಇನ್ನೂ ಬಿಬಿಎಂಪಿ ತೆರಿಗೆ ವ್ಯಾಪ್ತಿಗೆ ಬಂದಿಲ್ಲ. ಬೆಸ್ಕಾಂ ಬಿಲ್ಗಳ ಮೂಲಕ ಅವುಗಳ ಮೇಲೆ ನಿಗಾ ಇಡಲಾಗಿದೆ, ಅದರ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಅಲ್ಲದೆ, ಜನರು ಸ್ವಯಂ-ಮೌಲ್ಯಮಾಪನ ಯೋಜನೆ (SAS) ಅಡಿಯಲ್ಲಿ ತಮ್ಮ ಆಸ್ತಿಗಳನ್ನು ಕಡಿಮೆ ಅಂದಾಜು ಮಾಡುತ್ತಿದ್ದು, ಕಡಿಮೆ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಬಿಬಿಎಂಪಿಗೆ ಸೇರಿದ ಭೂಮಿಯನ್ನು ಬಾಡಿಗೆಗೆ ಪಡೆದವರು ತೆರಿಗೆಯಿಂದ ತಪ್ಪಿಸಿಕೊಳ್ಳಲು ಸ್ವಯಂ-ಆಕ್ರಮಿತ ಪ್ರದೇಶವೆಂದು ದಾಖಲೆಗಳ ಸೃಷ್ಟಿಸಿ ತೋರಿಸುತ್ತಿದ್ದಾರೆ.
ವಾಣಿಜ್ಯ ಸಂಸ್ಥೆಗಳು, ಹೋಟೆಲ್ಗಳು, ಮನೆಗಳು, ಕಚೇರಿಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ಹಲವು ಪ್ರದೇಶಗಳ ಬಾಡಿಗಗಳನ್ನು ರೂ.20 ಕೋಟಿ ರೂ.ವರೆಗೆ ವಸೂಲಿ ಮಾಡಬೇಕಿದೆ. ಈ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಂಡು ಬಾಕಿ ವಸೂಲಿ ಮಾಡಲಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಕಾಮಗಾರಿಗಳನ್ನು ಪರಿಶೀಲಿಸಲು ಪಾಲಿಕೆಗೆ ಗುರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ಪರ್ದೆ ಕೆ ಪೀಚೆ ಕ್ಯಾ ಹೆ'? ಬಿಬಿಎಂಪಿ ಕಾಮಗಾರಿ ವಿಳಂಬವನ್ನು ಮುಚ್ಚಲು ಹಸಿರು ಹೊದಿಕೆ? ನೆಟ್ಟಿಗರಿಂದ ಟೀಕೆ
ಸರ್ಕಾರವು ಬಜೆಟ್ ಮೊತ್ತವನ್ನು ಮೇಲ್ಮುಖವಾಗಿ ಪರಿಷ್ಕರಿಸುತ್ತಿರುವುದು ಇದೇ ಮೊದಲಲ್ಲ. 2020 ರಲ್ಲಿ, ಬಿಬಿಎಂಪಿಯ 10,899.84 ಕೋಟಿ ರೂಪಾಯಿಗಳಿಗೆ ವಿರುದ್ಧವಾಗಿ, ಅದನ್ನು 11,715.2 ಕೋಟಿ ರೂಪಾಯಿಗಳಿಗೆ ಬಜೆಟ್'ನ್ನು ಹೆಚ್ಚಳ ಮಾಡಿತ್ತು. 2019 ರಲ್ಲಿ, ಬಿಬಿಎಂಪಿ ಕೌನ್ಸಿಲ್, ಮೂರು ದಿನಗಳ ಚರ್ಚೆಯ ನಂತರ, 12,574.77 ಕೋಟಿ ರೂ.ಗಳ ಬಜೆಟ್ ಅನ್ನು ಅನುಮೋದಿಸಿತ್ತು, ಬಳಿಕ ಈ ಆಯವ್ಯಯವನ್ನು 1,886.14 ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿತ್ತು. 2021-22 ರಲ್ಲಿ ಪಾಲಿಕೆ ವೆಚ್ಚವು 88,048.13 ಲಕ್ಷ ರೂ.ಗಳಾಗಿದ್ದು, ಅದೇ ಮೊತ್ತಕ್ಕೆ ಅನುಮೋದನೆ ನೀಡಲಾಗಿತ್ತು.