ಅಧಿಕಾರಿಗಳ ನಿರ್ಲಕ್ಷ್ಯ: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮಹಿಳಾ ಕೈದಿಗಳಿಗೆ ಸಂಕಷ್ಟ!

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ನೋಡಿದರೆ ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎಂದೆನಿಸುತ್ತದೆ. ಆದರೆ, ಒಳಗಿನ ವಾಸ್ತವ ಸ್ಥಿತಿಯೇ ಬೇರೆ ಇದೆ. ಅಧಿಕಾರಿಗಳ ನಿರ್ಲಕ್ಷ್ಯಯುತ ನಡೆಯಿಂದ ಕಾರಾಗೃಹದಲ್ಲಿರುವ ಮಹಿಳಾ ಕೈದಿಗಳು ಪ್ರತಿನಿತ್ಯ ಸಂಕಷ್ಟ ಎದುರಿಸುವಂತಾಗಿದೆ.

Published: 09th May 2022 02:07 PM  |   Last Updated: 09th May 2022 02:15 PM   |  A+A-


File photo

ಸಂಗ್ರಹ ಚಿತ್ರ

The New Indian Express

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ನೋಡಿದರೆ ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎಂದೆನಿಸುತ್ತದೆ. ಆದರೆ, ಒಳಗಿನ ವಾಸ್ತವ ಸ್ಥಿತಿಯೇ ಬೇರೆ ಇದೆ. ಅಧಿಕಾರಿಗಳ ನಿರ್ಲಕ್ಷ್ಯಯುತ ನಡೆಯಿಂದ ಕಾರಾಗೃಹದಲ್ಲಿರುವ ಮಹಿಳಾ ಕೈದಿಗಳು ಪ್ರತಿನಿತ್ಯ ಸಂಕಷ್ಟ ಎದುರಿಸುವಂತಾಗಿದೆ.

ಪುರುಷ ಕೈದಿಗಳಿಗೆ ಹೋಲಿಕೆ ಮಾಡಿದರೆ ಮಹಿಳಾ ಕೈದಿಗಳ ಬಗ್ಗೆ ಕಾರಾಗೃಹದಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ. ಕಾರಾಗೃಹದಲ್ಲಿ ಪುರುಷ ಕೈದಿಗಳ ಸಮಸ್ಯೆಗಳಿಗೆ ಮೊದಲು ಆದ್ಯತೆ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಾರಾಗೃಹದಲ್ಲಿ ಪ್ರತಿನಿತ್ಯ ಮಹಿಳಾ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಸಮಸ್ಯೆಗಳು ಮತ್ತಷ್ಟು ಉಲ್ಭಣಗೊಳ್ಳುವಂತೆ ಮಾಡುತ್ತಿದೆ. ಪ್ರತಿ ಬ್ಯಾರಕ್ ನಲ್ಲಿ 20 ಮಹಿಳಾ ಕೈದಿಗಳನ್ನು ಇರಿಸಲಾಗುತ್ತಿದ್ದು, ಇವರಿಗೆ ಸೂಕ್ತ ವ್ಯವಸ್ಥೆಗಳನ್ನು ನೀಡಲಾಗುತ್ತಿಲ್ಲ. ಅದರಿಂದ ಮಹಿಳಾ ಕೈದಿಗಳು ಸಂಕಷ್ಟದಲ್ಲಿ ದಿನ ಕಳೆಯುವಂತಾಗಿದೆ ಎಂದು ತಿಳಿದುಬಂದಿದೆ.

ಇನ್ನು ಸೆರೆವಾಸದಲ್ಲಿರುವ ಗರ್ಭಿಣಿ ಮಹಿಳೆಯರ ಸ್ಥಿತಿಯಂತೂ ಹೇಳತೀರದಾಗಿದೆ. ಸೂಕ್ತ ಆರೈಕೆ, ಆಹಾರಗಳಿಲ್ಲದ ಕಾರಣ ಇಲ್ಲಿನ ಮಹಿಳೆಯರು ಅಕಾಲಿಕ ಮಕ್ಕಳು, ಕಡಿಮೆ ಜನನ ತೂಕ ಹೊಂದಿರುವ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಕೆಲವರು ಗರ್ಭಪಾತ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.

ಇಕ್ಕಟ್ಟಾದ ಜಾಗದಲ್ಲಿ ಕೇವಲ ಎರಡು ಬೆಡ್‌ಶೀಟ್‌ಗಳು ಮತ್ತು ಒಂದು ದಿಂಬಿನೊಂದಿಗೆ ಮಹಿಳಾ ಕೈದಿಗಳು ನೆಲದ ಮೇಲೆ ಮಲಗುತ್ತಿದ್ದಾರೆ. ಪ್ರತಿನಿತ್ಯ ಒಂದೇ ರೀತಿಯ ಆಹಾರ ನೀಡಲಾಗುತ್ತಿದ್ದು, ಸೂಕ್ತ ಆರೈಕೆ ಹಾಗೂ ಆಹಾರವಿಲ್ಲದ ಕಾರಣ ಗರ್ಭಪಾತಕ್ಕೆ ಇದು ಕಾರಣವಾಗುತ್ತಿದೆ.

ಅಗತ್ಯ ವ್ಯವಸ್ಥೆಗಳೇ ಇಲ್ಲದಿರುವ ಈ ಸ್ಥಳದಲ್ಲಿ ಇನ್ನು ಮಹಿಳೆಯರಿಗೆ ವೃತ್ತಿ ಶಿಕ್ಷಣ, ತರಬೇತಿ ಬಗ್ಗೆಯಂತೂ ಮಾತನಾಡಲು ಸಾಧ್ಯವಿಲ್ಲ.

ಕಾರಾಗೃಹದಲ್ಲಿ ಗರ್ಭಿಣಿ ಮಹಿಳೆಯರ ಸ್ಥಿತಿ ತೀವ್ರವಾಗಿ ಹದಗೆಡುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ.

ಪೆರೋಲ್ ಮೇಲೆ ಹೊರಬಂದಿರುವ ಮಹಿಳಾ ಕೈದಿ ಸೌಮ್ಯಾ (ಹೆಸರು ಬದಲಿಸಲಾಗಿದೆ) ಎಂಬುವವರು ಮಾತಾಡಿ, ಎರಡನೇ ಪತಿಯಿಂದ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದೆ. ನನ್ನ ಎರಡನೇ ಪತಿ ಕೂಡ ಜೈಲಿನಲ್ಲಿದ್ದಾರೆ. ನಾನು ಪೆರೋಲ್ ಮೇಲೆ ಹೊರಗೆ ಬಂದಿದ್ದೇನೆ. ಕಳೆದ ಮೂರೂವರೆ ವರ್ಷಗಳಿಂದ ನಾನು ಜೈಲಿನಲ್ಲಿದ್ದೇನೆ. ಆದರೆ, ಗರ್ಭಿಣಿಯಾಗಿರುವ ವಿಚಾರ ನನಗೆ ತಿಳಿದಾಗ ಬಹಳ ನೋವಾಗಿತ್ತು, ಕಾರಾಗೃಹದಲ್ಲಿ ನಾನು ಒಬ್ಬಂಟಿಯಾಗಿದ್ದೆ. ಕಾರಾಗೃಹದಲ್ಲಿ ಎಲ್ಲದಕ್ಕೂ ಹೊಂದಿಕೊಳ್ಳಲು ಪ್ರಯತ್ನ ಮಾಡಿದ್ದೆ. ಆದರೆ, ಅಲ್ಲಿನ ಪರಿಸ್ಥಿತಿ ಹಾಗಿರಲು ದಾರಿ ಮಾಡಿಕೊಡಲಿಲ್ಲ. ಮೂರುವರೆ ತಿಂಗಳ ಸಂದರ್ಭದಲ್ಲಿ ಫೆ.24 ರಂದು ಗರ್ಭಪಾತವಾಯಿತು ಎಂದು ಕಣ್ಣೀರು ಹಾಕಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ 206 ಮಹಿಳಾ ಕೈದಿಗಳು ಮತ್ತು ಆರು ವರ್ಷದೊಳಗಿನ ಏಳು ಮಕ್ಕಳು ಇದ್ದಾರೆ. ವಿವಿಧ ರಾಜ್ಯಗಳ ಅಲ್ಪಸಂಖ್ಯಾತರು ಸೇರಿದಂತೆ 20 ಮಹಿಳೆಯರನ್ನು ಒಂದೇ ಕೋಣೆಯಲ್ಲಿ ಯಾವುದೇ ಹಾಸಿಗೆಗಳನ್ನೂ ನೀಡದೆ ಇರಿಸಲಾಗಿದೆ.

ಕಾರಾಗೃಹದಲ್ಲಿ ಗರ್ಭಿಣಿ ಮಹಿಳೆಯರು 7 ತಿಂಗಳವರೆಗೂ ನೆಲದ ಮೇಲೆಯೇ ಮಲಗಬೇಕು. 8ನೇ ತಿಂಗಳಿನಲ್ಲಿ ಹಾಸಿಗೆಗಳು ಲಭ್ಯವಿದ್ದರೆ ಮಾತ್ರ ನೀಡುತ್ತಾರೆಂದು ಕೊಲೆ ಆರೋಪದ ಮೇಲೆ ಕಾರಾಗೃಹದಲ್ಲಿರುವ ಸಿಂಧನೂರಿನ 6 ತಿಂಗಳ ಗರ್ಭಿಣಿ ಛಾಯಾ ಎಂಬುವವರು ಹೇಳಿದ್ದಾರೆ.

2 ವಾರಗಳ ಹಿಂದಷ್ಟೇ ನನಗೆ ಅತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. 10 ದಿನಗಳ ಕಾಲ ಪ್ರಜ್ಞಾಹೀನಳಾಗಿದ್ದೆ. ಈ ವೇಳೆ 1 ಕೆಜಿಗಿಂತ ಕಡಿಮೆ ತೂಕದ ಅವಧಿಪೂರ್ವ ಹೆಣ್ಣು ಮಗುವಿಗೆ ಜನ್ಮ ನೀಡಿದೆ. ಗರ್ಭಿಣಿ ಮಹಿಳೆಯರು ನೆಲದ ಮೇಲೆ ಮಲಗಲು ಬಹಳ ಕಷ್ಟಕರವಾಗಿರುತ್ತದೆ. ಇದು ಒಂದು ಸಮಸ್ಯೆಯಾದರೆ,  ಮತ್ತೊಂದು ಸಮಸ್ಯೆ ಊಟ. ನಮಗೆ ನೀಡುವ ಆಹಾರವನ್ನು ಅಧಿಕಾರಿಗಳು ಪೌಷ್ಟಿಕ ಆಹಾರವೆಂದು ಕರೆಯುತ್ತಾರೆ. ಆದರೆ, ಆಹಾರ ಸ್ವಲ್ಪವೂ ರುಚಿಯಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.

ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, "ನಾವು ಮಹಿಳಾ ಕೈದಿಗಳಿಗೆ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ ಜೈಲು ಕೈಪಿಡಿಯಲ್ಲಿ ಸೂಚಿಸಲಾಗಿರುವ ಆಹಾರವನ್ನು ನೀಡುತ್ತೇವೆ. ನಾವು ಪ್ರಮಾಣವನ್ನು ಮಿತಿಗೊಳಿಸುವುದಿಲ್ಲ. ಮೊಟ್ಟೆ, ತರಕಾರಿಗಳು, ಸೊಪ್ಪು, ಹಣ್ಣುಗಳು ಮತ್ತು ದ್ವಿದಳ ಧಾನ್ಯಗಳನ್ನು ಅವರಿಗೆ ನೀಡುತ್ತೇವೆ" ಎಂದು ಹೇಳಿದ್ದಾರೆ.

ಕೈದಿ ಸೌಮ್ಯಾ ಮಾತನಾಡಿ, ಕಾರಾಗೃಹದಲ್ಲಿರುವ ಮಕ್ಕಳಿಗೆ ವಿಶೇಷ ಕಾಳಜಿ ನೀಡಲಾಗುತ್ತಿದ್ದು, ಅವರಿಗೆ ಪೌಷ್ಟಿಕ ಹಾಗೂ ಗುಣಮಟ್ಟದ ಆಹಾರಗಳನ್ನು ನೀಡಲಾಗುತ್ತಿದೆ. ಆದರೆ, ಗರ್ಭಿಣಿ ಮಹಿಳೆಯರಿಗೆ ಅಂತರ ಯಾವುದೇ ಪರಿಸ್ಥಿತಿ, ಸೌಲಭ್ಯಗಳಿಲ್ಲ. ಗರ್ಭಿಣಿ ಮಹಿಳೆಯರಿಗೆ ಹೆಸರುಬೇಳೆ ಕರ್ರಿ ನೀಡುತ್ತಾರೆ. ಆದರೆ, ಗರ್ಭಿಣಿಯರಿಗೆ ಇದು ವಾಕರಿಕೆ ತರಿಸುತ್ತದೆ. ಗರ್ಭಿಣಿಯರಿಗೆ ವಾರಕ್ಕೊಮ್ಮೆಯಾದರೂ ಒಳ್ಳೆಯ, ರುಚಿಕರವಾದ ಆಹಾರ ನೀಡಿದರೆ ಉತ್ತಮವಾಗಿರುತ್ತದೆ. ಶ್ರೀಮಂತ ಮನೆತನದಿಂದ ಬಂದವರಿಗೆ ಅವರ ಆಪ್ತರು ಹಣ್ಣು ಹಾಗೂ ಇತರೆ ವಸ್ತುಗಳನ್ನು ಕಳುಹಿಸುತ್ತಾರೆ. ಆದರೆ, ಬಡತನದ ಹಿನ್ನೆಲೆಯುಳ್ಳವರೇ ಇಲ್ಲಿ ಹಲವರಿದ್ದು, ಸಂಕಷ್ಟ ಅನುಭವಿಸುತ್ತಿದ್ದಾರೆಂದು ಹೇಳಿದ್ದಾರೆ.

ಜೈಲಿಗೆ ಬಂದ ಹಿನ್ನೆಲೆಯಲ್ಲಿ ನಮ್ಮನ್ನು ಕೀಳಾಗಿ ನೋಡಲಾಗುತ್ತದೆ. ನಮ್ಮ ಕುಟುಂಬಸ್ಥರೇ ನಮ್ಮ ಮೇಲೆ ಕಾಳಜಿ ತೋರುತ್ತಿಲ್ಲ. ಗರ್ಭಾವಸ್ಥೆಯ ಸಂದರ್ಭದಲ್ಲಿ ಮನಸ್ಥಿತಿಗಳು ಸಾಕಷ್ಟು ಬದಲಾವಣೆಯಾಗುತ್ತವೆ. ಒಂಟಿತನ ಹಾಗೂ ಅಪರಾಧದ ಭಾವನೆ ನಮ್ಮನ್ನು ಕಾಡುತ್ತದೆ. ನಮ್ಮನ್ನು ಸೂಕ್ತ ರೀತಿಯಲ್ಲಿ ಆರೈಕೆ ಮಾಡಬೇಕು. ಉತ್ತಮ ಆಹಾರ, ಹಣ್ಣುಗಲನ್ನು ನೀಡಬೇಕು ಎಂದು ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿದ ಮಹಿಳಾ ಕೈದಿಯೊಬ್ಬರು ಹೇಳಿದ್ದಾರೆ.

ಕೊಠಡಿಗಳಲ್ಲಿರುವ ಶೌಚಾಲಯಗಳಲ್ಲಿ 24*7 ನೀರು ಬರುತ್ತದೆ. ಅದು ತಣ್ಣಗಿನ ನೀರು. ಒಂದು ಬಕೆಟ್ ಬಿಸಿ ನೀರಿಗಾಗಿ ಮೇಲಂತಸ್ತಿನ ಮಹಿಳೆಯರು ಕೆಳೆ ಆಸ್ಪತ್ರೆಗೆ ಹೊರಗಿರುವ ಸಾಮಾನ್ಯ ನಲ್ಲಿಯತ್ತ ಬರಬೇಕು. ಗರ್ಭಿಣಿಯರು ಇತರರ ಮೇಲೆ ಅವಲಂಬಿತರಾಗಿರಬೇಕಾಗಿದೆ. 7 ತಿಂಗಳ ಬಳಿಕವಷ್ಟೇ ನಮಗೆ ನೆಲಮಹಡಿಯಲ್ಲಿ ಕೊಠಡಿಗಳನ್ನು ನೀಡುತ್ತಾರೆಂದು ಮತ್ತೊಬ್ಬ ಮಹಿಳಾ ಕೈದಿ ಹೇಳಿದ್ದಾರೆ.

ಅಪಹರಣದ ಆರೋಪ ಹೊತ್ತು ಕಾರಾಗೃಹದಲ್ಲಿದ್ದ ಗರ್ಭಿಣಿ ಐನಾ ಅವರಿಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಧ್ಯರಾತ್ರಿಯಲ್ಲಿ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಆಂಬ್ಯುಲೆನ್ಸ್ ನಲ್ಲಿ ಆಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಜೈಲು ಸಿಬ್ಬಂದಿ ಹರಸಾಹಸ ಪಟ್ಟರು. ಆಸ್ಪತ್ರೆಗೆ ಸಾಗಿಸಲು ಮುಂದಾದಾಗ ಜೈಲಿನ ಮುಖ್ಯದ್ವಾರದಲ್ಲಿಯೇ ಹೆರಿಗೆಯಾಯಿತು. ಗಂಡುವಿಗೆ ಐನಾ ಜನ್ಮ ನೀಡಿರುವ ಘಟನೆಯೂ ಕಾರಾಗೃಹದಲ್ಲಿ ನಡೆದಿದೆ.

ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನೇಸರಗಿ ಮಾತನಾಡಿ, 'ಮಹಿಳಾ ಕೈದಿಗಳಿಗೆ ಸ್ತ್ರೀರೋಗತಜ್ಞರ ಸಂಪರ್ಕದ ಅಗತ್ಯವಿದೆ. ಅನೇಕ ಕೈದಿಗಳು ಆರು ವರ್ಷದೊಳಗಿನ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ, ಆದ್ದರಿಂದ ಅವರಿಗೆ ಮಕ್ಕಳ ವೈದ್ಯರಿಗೆ ಪ್ರವೇಶದ ಜೊತೆಗೆ ಅವರ ಮಕ್ಕಳಿಗೆ ಲಸಿಕೆಗಳ ಅಗತ್ಯವಿರುತ್ತದೆ. ಮಹಿಳೆಯರು ಕೂಡ ತಮ್ಮ ಕುಟುಂಬದಿಂದ ದೂರವಿರುತ್ತಾರೆ. ಪುರುಷರಿಗಿಂತ ಹೆಚ್ಚು. ಅವರಿಗೆ ಸಮಾಲೋಚನೆಗಾಗಿ ಮಾನಸಿಕ ಆರೋಗ್ಯ ವೃತ್ತಿಪರರ ಪ್ರವೇಶದ ಅಗತ್ಯವಿದೆ. ಇದನ್ನು ಹಲವು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಸಲಹೆ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಕಾರಾಗೃಹವು ಐದು ಸಲಹೆಗಾರರನ್ನು ನೇಮಿಸಿದೆ ಮತ್ತು ದಿನನಿತ್ಯದ ಆರೋಗ್ಯ ತಪಾಸಣೆಗಾಗಿ ಅವರನ್ನು ಸ್ತ್ರೀರೋಗತಜ್ಞರ ಬಳಿಗೆ ಕಳುಹಿಸಲಾಗುತ್ತದೆ, ಮಹಿಳಾ ಕೈದಿಗಳು ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಲು ಆಂತರಿಕ ಸ್ತ್ರೀರೋಗತಜ್ಞರನ್ನು ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅತ್ತಿಬೆಲೆಯಲ್ಲಿರುವ ಆಕ್ಸ್‌ಫರ್ಡ್ ವೈದ್ಯಕೀಯ ಕಾಲೇಜಿನೊಂದಿಗೆ ಒಪ್ಪಂದ ಮಾಡಿಕೊಂಡು, ತಜ್ಞರು, ಮೂಳೆಚಿಕಿತ್ಸಕರು, ಸ್ತ್ರೀರೋಗತಜ್ಞರು, ಮಕ್ಕಳ ತಜ್ಞರು ಮತ್ತು ಹೃದ್ರೋಗ ತಜ್ಞರನ್ನು ವಾರಕ್ಕೆ ಎರಡು ಬಾರಿ ಜೈಲಿಗೆ ಕಳುಹಿಸುವ ಪ್ರಸ್ತಾವನೆಗಳಿವೆ ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಹಿಳಾ ಕೈದಿಗಳಿಗೆ ಅಗತ್ಯ ಸೌಲಭ್ಯಗಳ ಒದಗಿಸಲು ನಮ್ಮಿಂದ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ಮಹಿಳಾ ಕೈದಿಗಳಿಗಾಗಿಯೇ ಹೊಸ ಕಟ್ಟಡ ನಿರ್ಮಿಸಲಾಗುತ್ತಿದ್ದು, ಅಲ್ಲಿಗೆ ಸ್ಥಳಾಂತರಗೊಂಡ ಬಳಿಕ ಬಾಣಂತಿಯರು ಹಾಗೂ ಗರ್ಭಿಣಿ ಕೈದಿಗಳಿಗೆ ಪ್ರತ್ಯೇಕ ಕೊಠಡಿ, ವ್ಯವಸ್ಥೆಗಳು ಸಿಗಲಿವೆ ಎಂದು ಜೈಲಾಧಿಕಾರಿಗಳು ಹೇಳಿದ್ದಾರೆ.

ಸದ್ಯಕ್ಕೆ ಕೈದಿಗಳನ್ನು ಹೆರಿಗೆ ಮತ್ತು ವೈದ್ಯಕೀಯ ತಪಾಸಣೆಗಾಗಿ ಕೆಆರ್ ಮಾರುಕಟ್ಟೆಯ ವಾಣಿ ವಿಲಾಸ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಮಹಿಳಾ ಕೈದಿಗಳ ಪರಿಸ್ಥಿತಿ ಬಗ್ಗೆ ನಮಗೂ ಅರಿವಿದೆ. ಆದರೆ, ಹಾಸಿಗೆ, ಆಹಾರದ ಆಯ್ಕೆ, ಪ್ರತ್ಯೇಕ ಕೊಠಡಿಗಳಂತಹ ವಿಶೇಷ ವ್ಯವಸ್ಥೆ ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಅಸಹಾಯತೆ ವ್ಯಕ್ತಪಡಿಸಿದ್ದಾರೆ.


Stay up to date on all the latest ರಾಜ್ಯ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp