ಡೆತ್ ನೋಟ್ ಬರೆದಿಟ್ಟು ಮನೆಬಿಟ್ಟು ಹೊರಬಂದ ಪಿಯು ವಿದ್ಯಾರ್ಥಿ: ಮಲಗಿದ್ದ ವೇಳೆ ಲಾರಿಗೆ ಮರಳು ತುಂಬಿ ಜೀವಂತ ಸಮಾಧಿ!
ಡೆತ್ ನೋಟ್ ಬರೆದಿಟ್ಟು ಮನೆಬಿಟ್ಟು ಹೊರಬಂದಿದ್ದ 18 ವರ್ಷ ಹರೆಯದ ದ್ವಿತೀಯ ಪಿಯು ವಿದ್ಯಾರ್ಥಿಯೊಬ್ಬ ಲಾರಿಯೊಂದರಲ್ಲಿ ಜೀವಂತ ಸಮಾಧಿಯಾಗಿರುವ ದಾರುಣ ಘಟನೆ ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Published: 10th May 2022 09:30 AM | Last Updated: 10th May 2022 01:34 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಡೆತ್ ನೋಟ್ ಬರೆದಿಟ್ಟು ಮನೆಬಿಟ್ಟು ಹೊರಬಂದಿದ್ದ 18 ವರ್ಷ ಹರೆಯದ ದ್ವಿತೀಯ ಪಿಯು ವಿದ್ಯಾರ್ಥಿಯೊಬ್ಬ ಲಾರಿಯೊಂದರಲ್ಲಿ ಜೀವಂತ ಸಮಾಧಿಯಾಗಿರುವ ದಾರುಣ ಘಟನೆ ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೋಮನಾಥ್ (18) ಮೃತ ವಿದ್ಯಾರ್ಥಿಯಾಗಿದ್ದಾನೆ. ವಿದ್ಯಾರ್ಥಿ ನಗರದ ಹೊರವಲಯದ ಹೊಸಕೋಟೆ ಪೇಟೆಯ ಕಟಮಂಡು ಲೇಔಟ್ ನಿವಾಸಿಯಾಗಿದ್ದಾನೆ.
ಸೋಮನಾಥ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಖಾಸಗಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿಗಳೊಂದಿಗೆ ಜಗಳ ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ಜೀವ ಬೆದರಿಕೆ ಹಾಕಿದ್ದರು. ಇದರಿಂದ ಬೇಸರಗೊಂಡಿದ್ದ ಸೋಮನಾಥ್ ಡೆತ್ ನೋಟ್ ಬರೆದಿಟ್ಟು ನಾನೇ ಸತ್ತು ಹೋಗುತ್ತೇನೆಂದು ಹೇಳಿ ಮನೆಯಿಂದ ಹೊರ ಬಂದಿದ್ದಾನೆ. ಡೆತ್ ನೋಟ್ ನಲ್ಲಿ ಬೆದರಿಕೆ ಹಾಕಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಚನ್ನರಾಯಪಟ್ಟಣದ ನಾಲ್ವರನ್ನು ಬಂಧಿಸಿದ ಸಿಐಡಿ ಪೊಲೀಸರು!
ಮೇ.4 ರಂದು ಮನೆಯಿಂದ ಸೋಮನಾಥ್ ಹೊರ ಬಂದಿದ್ದಾನೆ. ವಿದ್ಯಾರ್ಥಿಯ ತಂದೆ ಇಂಟೀರಿಯರ್ ಡಿಸೈನಿಂಗ್ ಸಂಸ್ಥೆಯಲ್ಲಿ ಮರಗೆಲಸ ಮಾಡುವ ಕೆಲಸ ಮಾಡಿಕೊಂಡಿದ್ದು, ಪೊಲೀಸರಿಗೆ ಪುತ್ರ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.
ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ನಡುವೆ ಮಾರತಹಳ್ಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ಲಾರಿಯೊಂದರಲ್ಲಿ ಕಾರ್ಮಿಕರು ಮರಳನ್ನು ಅನ್ಲೋಡ್ ಮಾಡುವಾಗ ಯುವಕನ ಮೃತದೇಹ ಸಿಕ್ಕಿರುವ ವಿಚಾರ ತಿಳಿದುಬಂದಿದೆ. ಮಲಗಿದ್ದ ಭಂಗಿಯಲ್ಲಿ ಯುವಕನ ದೇಹ ಸಿಕ್ಕಿದೆ.
ಮನೆಯಿಂದ ಹೊರಬಂದಿದ್ದ ಸೋಮನಾಥ್ ಮಲಗುವ ಸಲುವಾಗಿ ಲಾರಿಯೊಳಗೆ ಹೋಗಿರಬಹುದು. ಇದನ್ನು ಪರಿಶೀಲಿಸದೆ ಕಾರ್ಮಿಕರು ಲಾರಿಯಲ್ಲಿ ಮರಳು ತುಂಬಿರಬಹುದು. ಈ ವೇಳೆ ಯುವಕ ಜೀವಂತ ಸಮಾಧಿಯಾರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: ಅಪರಾಧವೇ ಮಾಡದೆ 13 ವರ್ಷ ಜೈಲುವಾಸ ಅನುಭವಿಸಿದ ಆದಿವಾಸಿ ವ್ಯಕ್ತಿ ಕೊನೆಗೂ ಬಿಡುಗಡೆ!
ಮಾಸ್ಕ್ ನಿಂದ ಗುರುತು ಪತ್ತೆ
ಯುವಕನ ಜೇಬಿನಲ್ಲಿ ಮಾಸ್ಕ್ ದೊರೆತಿದ್ದು, ಈ ಮಾಸ್ಕ್ ನಿಂದ ಯುವಕನ ಗುರುತು ಪತ್ತೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮಾಸ್ಕ್ ಮೇಲೆ ಸೋಮನಾಥ್ ಅವರ ಕೆಲಸ ಮಾಡುವ ಸಂಸ್ಥೆಯ ಲೋಗೋ ಇದ್ದು, ಇದರಿಂದ ಯುವಕನನ್ನು ಗುರ್ತಿಸಲಾಗಿದೆ.
ಇನ್ನು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಶ್ವಾಸಕೋಶದಲ್ಲಿ ಮರಳಿನ ಕಣಗಳು ಪತ್ತೆಯಾಗಿದ್ದು, ಇದು ಸಾವಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.