ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು, ಶೀಘ್ರವೇ ಬಿಬಿಎಂಪಿ ಚುನಾವಣೆ
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದ್ದು, ಶೀಘ್ರದಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ...
Published: 10th May 2022 07:07 PM | Last Updated: 10th May 2022 07:07 PM | A+A A-

ಬಿಬಿಎಂಪಿ ಕಚೇರಿ
ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದ್ದು, ಶೀಘ್ರದಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಮಧ್ಯ ಪ್ರದೇಶದಲ್ಲಿ ನಾನಾ ಕಾರಣಗಳಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿರಲಿಲ್ಲ. ಈ ಬಗ್ಗೆ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ನಡೆಸಿದ ಕೋರ್ಟ್, ಸ್ಥಳೀಯ ಸಂಸ್ಥೆಗಳಿಗೆ ಎರಡು ವಾರಗಳಲ್ಲಿ ಚುನಾವಣೆ ನಡೆಸಬೇಕು ಎಂದು ಮಹತ್ವದ ತೀರ್ಪು ನೀಡಿದೆ. ಅಲ್ಲದೆ ಈ ತೀರ್ಪು ಎಲ್ಲಾ ರಾಜ್ಯಗಳಲ್ಲಿ ಬಾಕಿ ಉಳಿದಿರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಅನ್ವಯ ಎಂದು ಹೇಳಿದೆ.
ಇದನ್ನು ಓದಿ: ಬಿಬಿಎಂಪಿ ನೂತನ ಮುಖ್ಯ ಆಯಕ್ತ ನಗರ ಸಂಚಾರ: ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್. ಅಶೋಕ್ ಅವರು, ಮಧ್ಯ ಪ್ರದೇಶ ಪ್ರಕರಣದಲ್ಲಿ ಮೂರು ಪೀಠದ ನ್ಯಾಯಾಧೀಶರು ಮಹತ್ವದ ತೀರ್ಪು ನೀಡಿದ್ದಾರೆ. ಬಿಬಿಎಂಪಿ ಚುನಾವಣೆ ಸಂಬಂಧ ಪ್ರತ್ಯೇಕ ಪ್ರಕರಣವಿತ್ತು. ಲೀಸ್ಟ್ ಆಗಲು ಮೂರು ತಿಂಗಳು ಇತ್ತು. ಮಧ್ಯ ಪ್ರದೇಶಕ್ಕೆ ನೀಡಿದ ಆದೇಶವಾದರೂ ಅದು ಎಲ್ಲಾ ರಾಜ್ಯಕ್ಕೂ ಅನ್ವಯ ಅಂತ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು. ಎಲ್ಲ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಮಾಡಬೇಕು ಅಂತ ಹೇಳಲಾಗಿದೆ. ಕಳೆದ ಬಾರಿ ನಡೆದ ಚುನಾವಣೆ ಪ್ರಕಾರವೇ ಚುನಾವಣೆ ನಡೆಸಲು ಸೂಚಿಸಿದೆ. ಹೀಗಾಗಿ 198 ವಾರ್ಡ್ ಪ್ರಕಾರವೇ ಬಿಬಿಎಂಪಿ ಚುನಾವಣೆ ನಡೆಯಬೇಕಿದೆ. ಮೀಸಲಾತಿ ಪ್ರಕಾರ ಚುನಾವಣೆ ನಡೆಯಲಿದೆ. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಮಾತಾನಾಡುತ್ತೇನೆ ಎಂದು ಅಶೋಕ್ ಅವರು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸಲು ತಯಾರಿದೆ. ಚುನಾವಣೆ ಯಾವಾಗ ಬಂದ್ರೂ ಎದುರಿಸಲು ಸಿದ್ದ. ಬಿಜೆಪಿ ಕೂಡ ತಯಾರಿದೆ.. ಬಿಜೆಪಿ ಬೂತ್ ಮಟ್ಟದ ಕಾರ್ಯಕ್ರಮ, ಸಮಾವೇಶ ಮುಗಿದಿದೆ. ಅಭ್ಯರ್ಥಿಗಳ ಆಯ್ಕೆ ಮಾತ್ರ ಬಾಕಿ ಇದೆ. ಎರಡು ವಾರದಲ್ಲಿ ಚುನಾವಣೆ ಘೋಷಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ ಎಂದರು.
ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡಬೇಕಾಗಿದೆ. ಸುಪ್ರೀಂ ಆದೇಶ ಪಾಲನೆ ಮಾಡಬೇಕು. ೧೯೮ ವಾರ್ಡ್ಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಮೀಸಲಾತಿ ವಿಚಾರದ ಬಗ್ಗೆ ಅಡ್ವೋಕೆಟ್ ಜನರಲ್ ಜೊತೆ ಮಾತನಾಡುತ್ತೇವೆ ಎಂದ ಸಚಿವರು ಹೇಳಿದ್ದಾರೆ.