ಬಿರುಗಾಳಿ ಮಳೆಗೆ ಮುರಿದು ಬಿದ್ದ 'ದೊಡ್ಡ ಆಲದ ಮರದ ಕೊಂಬೆ' ತೆರವಿಗೆ ಕಷ್ಟಪಡುತ್ತಿರುವ ಅಧಿಕಾರಿಗಳು!
ಬಿರುಗಾಳಿ ಮತ್ತು ಭಾರಿ ಮಳೆಯಿಂದಾಗಿ ಭಾನುವಾರ ರಾತ್ರಿ ದೊಡ್ಡ ಆಲದ ಮರದ ಭಾಗವೊಂದು ಕುಸಿದು ಬಿದ್ದಿದೆ. ಆದರೆ, ಬಿದ್ದಿರುವ ಕೊಂಬೆಗಳನ್ನು ತೆರವುಗೊಳಿಸಲು ರಾಜ್ಯ ಅರಣ್ಯ ಮತ್ತು ತೋಟಗಾರಿಕೆ ಅಧಿಕಾರಿಗಳು ಕಷ್ಟಪಡುವಂತಾಗಿದೆ.
Published: 12th May 2022 09:00 AM | Last Updated: 12th May 2022 09:02 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬಿರುಗಾಳಿ ಮತ್ತು ಭಾರಿ ಮಳೆಯಿಂದಾಗಿ ಭಾನುವಾರ ರಾತ್ರಿ ದೊಡ್ಡ ಆಲದ ಮರದ ಭಾಗವೊಂದು ಕುಸಿದು ಬಿದ್ದಿದೆ. ಆದರೆ, ಬಿದ್ದಿರುವ ಕೊಂಬೆಗಳನ್ನು ತೆರವುಗೊಳಿಸಲು ರಾಜ್ಯ ಅರಣ್ಯ ಮತ್ತು ತೋಟಗಾರಿಕೆ ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.
ಇದಕ್ಕೆ ಕಾರಣವೂ ವಿಚಿತ್ರವಾಗಿದೆ. ಆಲದ ಮರದ ಬಗ್ಗೆ ಜನರಲ್ಲಿ ಧಾರ್ಮಿಕ ಮತ್ತು ಭಾವನಾತ್ಮಕ ಸಂಬಂಧವಿದೆ. ಆದ್ದರಿಂದ ಜನರು ಮರದ ದಿಮ್ಮಿಗಳಿಗೆ ಕೊಡಲಿ ಹಾಕಲು ಮತ್ತು ಮರವನ್ನು ಹರಾಜು ಹಾಕಲು ಜನ ಮುಂದೆ ಬಾರದ ಹಿನ್ನೆಲೆಯಲ್ಲಿ ಕಷ್ಟಪಡುತ್ತಿದ್ದೇವೆ ಎಂದು ತೋಟಗಾರಿಕಾ ಅಧಿಕಾರಿಯೊಬ್ಬರು ಹೇಳಿದರು.
ಬಿದ್ದಿರುವ ಮರದ ಮೌಲ್ಯವನ್ನು ನಿರ್ಣಯಿಸಲು ಮತ್ತು ಅದನ್ನು ಹರಾಜು ಮಾಡುವಂತೆ ಅರಣ್ಯ ಇಲಾಖೆಗೆ ತೋಟಗಾರಿಕಾ ಇಲಾಖೆಯು ಪತ್ರ ಬರೆದಿತ್ತು. ಮರದ ಕೊಂಬೆ ಬಿದ್ದಿರುವುದು ಇದೇ ಮೊದಲೇನಲ್ಲಾ, ಆದರೆ, ಈ ಬಾರಿ ಕೆಟ್ಟ ಹವಾಮಾನದಿಂದಾಗಿ ಈ ಭಾಗದಲ್ಲಿ ಅನೇಕ ಮರಗಳು ಬೀಳುತ್ತಿವೆ. ದೊಡ್ಡ ಆಲದ ಮರಕ್ಕೆ 400 ವರ್ಷಗಳ ಇತಿಹಾಸವಿದ್ದು, ಮೂರು ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿದೆ. ಬೆಂಗಳೂರಿನಿಂದ 28 ಕಿ.ಮೀ. ದೂರದಲ್ಲಿರುವ ಇದು ಪ್ರಸಿದ್ಧ ಪ್ರವಾಸಿ ಮತ್ತು ಧಾರ್ಮಿಕ ಕ್ಷೇತ್ರವೂ ಆಗಿದೆ.
ಮರಕ್ಕೆ ಪೂಜೆ ಸಲ್ಲಿಸದಂತೆ ಜನರನ್ನು ತಡೆದಿದ್ದರೂ, ಆವರಣದಲ್ಲಿರುವ ಮುನೀಶ್ವರ ದೇವಸ್ಥಾನಕ್ಕೆ ಯಾವುದೇ ನಿರ್ಬಂಧವನ್ನು ಹಾಕಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ತೋಟಗಾರಿಕೆ ಇಲಾಖೆ ಪ್ರಧಾನ ಕಚೇರಿಯ ಅಧಿಕಾರಿಗಳ ತಂಡ ಗುರುವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಅಂದಾಜಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ. ಈ ಮಧ್ಯೆ, ಪ್ರವಾಸಿಗರು ಮತ್ತು ನಾಗರಿಕರು ಅದರ ಸೌಂದರ್ಯ ಮತ್ತು ಹಾನಿ ಎರಡನ್ನೂ ನೋಡಲು ಮುಗಿಬೀಳುತ್ತಿದ್ದಾರೆ.