ಪಿಎಸ್ ಐ ನೇಮಕಾತಿ ಹಗರಣ: ಧಾರವಾಡದ ಪ್ರಮುಖ ಕೋಚಿಂಗ್ ಸೆಂಟರ್ ನ ಶಿಕ್ಷಕನನ್ನು ವಶಕ್ಕೆ ಪಡೆದ ಸಿಐಡಿ
ಪಿಎಸ್ಐ ನೇಮಕಾತಿ ಹಗರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಸಿಐಡಿ ಪೊಲೀಸರು, ಧಾರವಾಡದ ಖ್ಯಾತ ಕೋಚಿಂಗ್ ಸೆಂಟರ್ ನ ಶಿಕ್ಷಕರೊಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
Published: 12th May 2022 04:11 PM | Last Updated: 12th May 2022 04:11 PM | A+A A-

ಪಿಎಸ್ಐ ನೇಮಕಾತಿ ಹಗರಣದಲ್ಲಿ ಬಂಧಿತ ಪ್ರಮುಖ ಆರೋಪಿಗಳು
ಹುಬ್ಬಳ್ಳಿ: ಪಿಎಸ್ಐ ನೇಮಕಾತಿ ಹಗರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಸಿಐಡಿ ಪೊಲೀಸರು, ಧಾರವಾಡದ ಖ್ಯಾತ ಕೋಚಿಂಗ್ ಸೆಂಟರ್ ನ ಶಿಕ್ಷಕರೊಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಸಪ್ತಾಪುರಭಾವಿ ಪ್ರದೇಶದಲ್ಲಿರುವ ಕೋಚಿಂಗ್ ಸೆಂಟರ್ನಲ್ಲಿ ಮಂಗಳವಾರ ಶಿಕ್ಷಕನನ್ನು ವಶಕ್ಕೆ ಪಡೆಯಲಾಗಿದ್ದು, ಬುಧವಾರವೂ ವಿಚಾರಣೆ ಮುಂದುವರೆದಿದೆ.
ಇದನ್ನು ಓದಿ: ಪಿಎಸ್ಐ ಹಗರಣದ ಬಂಧಿತ ಆರೋಪಿ ಸಹೋದರ ಆತ್ಮಹತ್ಯೆ!
ಹಗರಣದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳಲ್ಲಿ ಒಬ್ಬರು ನೀಡಿದ ಮಾಹಿತಿಯ ಆಧಾರದ ಮೇಲೆ ಈ ಶಿಕ್ಷಕನನ್ನು ವಶಕ್ಕೆ ಪಡೆಯಲಾಗಿದೆ ಮತ್ತು ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಯಾವುದೇ ಬಂಧನವಾಗಿಲ್ಲ. ಕೋಚಿಂಗ್ ತರಗತಿಗಳು ಮತ್ತು ಪರೀಕ್ಷೆಗೆ ತರಬೇತಿ ಪಡೆದ ಹಲವಾರು ಜನರನ್ನು ವಿಚಾರಣೆಗಾಗಿ ಕರೆಸಲಾಗಿದೆ. ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ಅಭ್ಯರ್ಥಿಯೊಬ್ಬರು, ಈಗ ವಶಕ್ಕೆ ಪಡೆದಿರುವ ಶಿಕ್ಷಕರಿಂದ ಪರೀಕ್ಷೆಯಲ್ಲಿ ಸಹಾಯ ಪಡೆದಿರುವುದಾಗಿ ವರದಿಯಾಗಿದೆ.
“ಧಾರವಾಡದಲ್ಲಿ ಹಲವಾರು ಪರೀಕ್ಷಾ ತರಬೇತಿ ಕೇಂದ್ರಗಳಿವೆ ಮತ್ತು ಉತ್ತರ ಕರ್ನಾಟಕ ಭಾಗದ ಹಲವು ವಿದ್ಯಾರ್ಥಿಗಳು ತರಬೇತಿಗಾಗಿ ಇಲ್ಲಿಗೆ ಬರುತ್ತಾರೆ. ಕೋಚಿಂಗ್ ಸೆಂಟರ್ ಮಾಲೀಕರೊಂದಿಗೆ ನಂಟು ಹೊಂದಿರುವ ಕೆಲವು ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಕಾನೂನುಬಾಹಿರವಾಗಿ ಏನನ್ನಾದರೂ ಮಾಡಿರಬಹುದು ಎಂಬ ಶಂಕೆ ಇದೆ. ಆದರೆ ಅದಕ್ಕೆ ಪೂರಕವಾದ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ವಿಚಾರಣೆ ನಂತ ಶಿಕ್ಷಕನನ್ನು ಬಿಟ್ಟು ಕಳುಹಿಸಲಾಗಿದೆ. ಆದರೆ ಅಗತ್ಯವಿದ್ದರೆ ವಿಚಾರಣೆಗಾಗಿ ಮತ್ತೆ ಕರೆಯಲಾಗುವುದು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.